ಸಾರಾಂಶ
ಬೆಂಗಳೂರು/ಧಾರವಾಡ :ಬಹುಕೋಟಿ ಅವ್ಯವ ಹಾರ ಆರೋಪದಡಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಬೆಂಗಳೂರು ಮತ್ತು ಧಾರವಾಡದಲ್ಲಿನ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ ಏಕಕಾಲಕ್ಕೆ ಬೆಂಗಳೂರಿನ ಖನಿಜ ಭವನದಲ್ಲಿ ಮತ್ತು ಧಾರವಾಡದಲ್ಲಿನ ಕೆಐಡಿಬಿ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಭೂಸ್ವಾಧೀನ ಹೆಸರಲ್ಲಿ ಅಕ್ರಮ ಹಾಗೂ ಧಾರವಾಡದ ಕೆಲಗೇರಿ, ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಭೂಸ್ವಾಧೀನ ಹೆಸರಲ್ಲಿ ಕೋಟ್ಯಂತರ ರು. ಲೂಟಿ ಮಾಡಿರುವ ಆರೋಪ ಕೆಐಎಡಿಬಿ ಮೇಲಿದೆ. ನಕಲಿ ದಾಖಲೆ ಸೃಷ್ಟಿಸಿ ಒಂದೇ ಭೂಮಿಗೆ ಎರಡೆರಡು ಬಾರಿ ಪರಿಹಾರದ ಹೆಸರಲ್ಲಿ ವಂಚನೆ ಎಸಗಲಾಗಿದೆ. ರೈತರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ಲೂಟಿ ಮಾಡಲಾಗಿದೆ. ಅಲ್ಲದೇ, ಐಡಿಬಿಐ ಬ್ಯಾಂಕ್ ನ ಒಂದೇ ಶಾಖೆಯಲ್ಲಿ 24 ಖಾತೆಗಳನ್ನು ತೆರೆಯಲಾಗಿತ್ತು ಎಂದು ಆರೋಪಿಸಲಾಗಿದೆ.
ಪ್ರಕರಣ ಕುರಿತು ಸಿಐಡಿ ತನಿಖೆ ಕೈಗೊಂಡಿತ್ತು. ಈ ವೇಳೆ ಇಲಾಖೆಯ ಹಿಂದಿನ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ವಿ.ಡಿ.ಸಜ್ಜನ್ ತಮ್ಮ ನಿವೃತ್ತಿಯ ಕೊನೇ ದಿನವೇ 30 ಕೋಟಿ ರು.ಗಳನ್ನು ಬೇರೆ, ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ‘ಕನ್ನಡಪ್ರಭ’ ಸಮಗ್ರ ವರದಿ ಪ್ರಕಟಿಸುವ ಮೂಲಕ ಹಗರಣವನ್ನು ಬೆಳಕಿಗೆ ತಂದಿತ್ತು. ಬಳಿಕ, ಪ್ರಕರಣದಲ್ಲಿ ಮೊದಲನೇ ಆರೋಪಿ ಸಜ್ಜನ್ ಜೈಲು ಸೇರಿದ್ದರು. ಕೋಟ್ಯಂತರ ರು. ಅವ್ಯವಹಾರವಾದ ಹಿನ್ನೆಲೆಯಲ್ಲಿ ಇ.ಡಿ.ಕೂಡ ತನಿಖೆ ಆರಂಭಿಸಿತ್ತು.
60 ಕೋಟಿ ರು. ಹಗರಣ:
ಮೊದಲ ಹಂತದಲ್ಲಿ 20 ಕೋಟಿ ರು.ಮತ್ತು 2ನೇ ಹಂತದಲ್ಲಿ 40 ಕೋಟಿ ರು.ಸೇರಿ ಒಟ್ಟು 60 ಕೋಟಿ ರು.ಮೊತ್ತದ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಅಗತ್ಯ ದಾಖಲೆಗಳನ್ನು ಭೂಸ್ವಾಧೀನ ಇಲಾಖೆಯ ಹಿರಿಯ ಅಧಿಕಾರಿಗಳು, ಬೃಹತ್ ಕೈಗಾರಿಕಾ ಇಲಾಖೆ ಸಚಿವರು ಹಾಗೂ ಮುಖ್ಯಮಂತ್ರಿಗೆ ನೀಡಲಾಗಿತ್ತು. ಸಿಐಡಿ ಸಮರ್ಪಕವಾಗಿ ತನಿಖೆ ಮಾಡದೆ ಕೇವಲ 19.5 ಕೋಟಿ ರು.ಮಾತ್ರ ಪತ್ತೆ ಹಚ್ಚಿತ್ತು. ಕೋಟ್ಯಂತರ ರು.ಪ್ರಕರಣ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಮಧ್ಯಪ್ರವೇಶಿಸಿದಾಗ 60 ಕೋಟಿ ರು. ಮೌಲ್ಯದ ಹಗರಣ ಎಂಬುದು ಗೊತ್ತಾಗಿದೆ. ಈ ಬಗ್ಗೆ ಇಡಿ ತನಿಖೆ ಮುಂದುವರಿಸಿದೆ.