ಆಗಸ್ಟ್‌ 10 ಮತ್ತು 11 ರಂದು 2 ದಿನ ಕೊಳ್ಳೇಗಾಲದ ಭರಚುಕ್ಕಿಯಲ್ಲಿ ಜಲಪಾತೋತ್ಸವ ಸಂಭ್ರಮ

| Published : Aug 10 2024, 01:42 AM IST / Updated: Aug 10 2024, 11:37 AM IST

ಆಗಸ್ಟ್‌ 10 ಮತ್ತು 11 ರಂದು 2 ದಿನ ಕೊಳ್ಳೇಗಾಲದ ಭರಚುಕ್ಕಿಯಲ್ಲಿ ಜಲಪಾತೋತ್ಸವ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರವಾಸಿಗರನ್ನು ಭರಚುಕ್ಕಿ ಜಲಪಾತದತ್ತ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ದೃಷ್ಟಿಯಿಂದಾಗಿ 2 ದಶಕಗಳ ಹಿಂದೆ ಅಂದಿನ ಸಚಿವರಾಗಿದ್ದ ಎಚ್.ಎಸ್. ಮಹದೇವಪ್ರಸಾದ್ ಅವರ ಪರಿಕಲ್ಪನೆಯ ಭರಚುಕ್ಕಿ ಜಲಪಾತೋತ್ಸವವು ಆ.10 ಮತ್ತು 11ರಂದು 2 ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.

 ಕೊಳ್ಳೇಗಾಲ :  ಪ್ರವಾಸಿಗರನ್ನು ಭರಚುಕ್ಕಿ ಜಲಪಾತದತ್ತ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ದೃಷ್ಟಿಯಿಂದಾಗಿ 2 ದಶಕಗಳ ಹಿಂದೆ ಅಂದಿನ ಸಚಿವರಾಗಿದ್ದ ಎಚ್.ಎಸ್. ಮಹದೇವಪ್ರಸಾದ್ ಅವರ ಪರಿಕಲ್ಪನೆಯ ಭರಚುಕ್ಕಿ ಜಲಪಾತೋತ್ಸವವು ಆ.10 ಮತ್ತು 11ರಂದು 2 ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ. 

ಭರಚುಕ್ಕಿಯಲ್ಲಿ ಜಲಧಾರೆ ನರ್ತಿಸುತ್ತಿರುವ ಬೆನ್ನಲ್ಲೆ ಜಿಲ್ಲಾಡಳಿತ, ಸರ್ಕಾರ ಜಲಪಾತೋತ್ಸವಕ್ಕೆ ಮುಂದಾಗಿದ್ದು ಎರಡು ದಿನಗಳ ಕಾರ್ಯಕ್ರಮದಲ್ಲಿ ಸಾವಿರಾರು ಪ್ರವಾಸಿಗರು ಬಣ್ಣ ಬಣ್ಣಗಳಲ್ಲಿ ಕಂಗೊಳಿಸುವ ಜಲವೈಭವವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಆ.10ರಂದು ನಡೆಯುವ ಚಲುವ ಚಾಮರಾಜನಗರ ಜಲಪಾತೋತ್ಸವಕ್ಕೆ ಸಂಜೆ 5 ಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಜಂಟಿಯಾಗಿ ಚಾಲನೆ ನೀಡಲಿದ್ದಾರೆ. 

ಜಲಪಾತದ ವಿದ್ಯುತ್ ದೀಪಾಲಂಕಾರಕ್ಕೆ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಚಾಲನೆ ನೀಡುವರು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಪಾಲ್ಗೊಳ್ಳಲಿದ್ದಾರೆ. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹನೂರು ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ವಹಿಸಲಿದ್ದು ಅತಿಥಿಗಳಾಗಿ ಶಾಸಕರಾದ ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಗಣೇಶ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಮಂಜೆಗೌಡ, ವಿವೇಕಾನಂದ, ಡಾ.ತಿಮ್ಮಯ್ಯ, ಮಧು ಮಾದೇಗೌಡ, ಕಾಡಾ ಅದ್ಯಕ್ಷ ಮರಿಸ್ವಾಮಿ, ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ, ಸತ್ತೇಗಾಲ ಗ್ರಾಪಂ ಅಧ್ಯಕ್ಷ ಕೆಂಪರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಹೊಂಗನೂರು ಚಂದ್ರು, ಚಾಮುಲ್ ಅಧ್ಯಕ್ಷ ನಾಗೇಂದ್ರ ಸೇರಿ ಅನೇಕರು ಪಾಲ್ಗೊಳ್ಳುವರು. 

ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್, ಸರ್ಕಾರದ ಕಾರ್ಯದರ್ಶಿ ಅಜಯ್ ನಾಗಭೂಷಣ್, ಪ್ರವಾಸೋದ್ಯಮ ಇಲಾಖಾ ಕಾರ್ಯದರ್ಶಿ ಕೆ.ಫಾಹಿಮ್, ಪ್ರಾದೇಶಿಕ ಆಯುಕ್ತ ರಮೇಶ್, ಕನ್ನಡ ಸಂಸ್ಕೃತಿ ಇಲಾಖೆಯ ಡಾ.ಕೆ ಧರಣಿದೇವಿ ಮಾಲಗತ್ತಿ, ಪ್ರವಾಸೋದ್ಯಮ ಇಲಾಖೆಯ ಡಾ.ರಾಜೇಂದ್ರ, ಜಿಲ್ಲಾಧಿಕಾರಿ ಶಿಲ್ಪನಾಗ್, ಜಿಪಂ ಸಿಇಒ ಮೋನಾರೋತ್, ಅರಣ್ಯ ಇಲಾಖೆಯ ಅಧಿಕಾರಿಗಳಾದ ಸಂತೋಷ್ ಕುಮಾರ್, ಟಿ ಹೀರಾಲಾಲ್, ಎಸ್ಪಿ ಡಾ. ಕವಿತಾ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಕಾರ್ಯಕ್ರಮ ಯಶಸ್ವಿಗೆ ಸಾಥ್ ನೀಡಲಿದ್ದಾರೆ. ಒಟ್ಟಾರೆ ದಿ.ಮಹದೇವಪ್ರಸಾದ್ ಅವರ ಪರಿಕಲ್ಪನೆಯ ಜಲಪಾತೋತ್ಸವ ಯಶಸ್ವಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಎರಡು ದಿನಗಳ ಕಾಲ ಸಾಥ್ ನೀಡುವ ಮೂಲಕ ಸ್ಪಂದಿಸಲಿದ್ದಾರೆ. ಬಿಗಿ ಬಂದೋಬಸ್ತ್ ಗಾಗಿ ಇನ್ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಎಸ್ಪಿ, ಡಿವೈಎಸ್ಪಿ ನೇತೃತ್ವದಲ್ಲಿ ನಿಯೋಜಿಸಲಾಗಿದೆ.

ಜಲಪಾತೋತ್ಸವವು ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿ ವೇದಿಕೆಯಾಗಲಿದೆ: ಶಾಸಕ

ಭರಚುಕ್ಕಿ ಜಲಪಾತೋತ್ಸವಕ್ಕೆ ಇಡೀ ಸರ್ಕಾರವೆ ಆಗಮಿಸುತ್ತಿದೆ. ಹಾಗಾಗಿ ಈ ವೇದಿಕೆ ಈ ಭಾಗದ ಪ್ರವಾಸ್ಯೋದ್ಯಮದ ಅಭಿವೃದ್ಧಿಗೆ ಪೂರಕ ವೇದಿಕೆಯಾಗಲಿದೆ. ಮುಂದಿನ ದಿನಗಳಲ್ಲೂ ಪ್ರವಾಸಿಗರ ಆಕರ್ಷಣೆಗೆ ಇದು ಸೂಕ್ತ ಕಾರ್ಯಕ್ರಮವಾಗಿದೆ ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.ಭರಚುಕ್ಕಿ ಜಲಪಾತದಲ್ಲಿ ಗುರುವಾರ ಸಂಜೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ದೇಗುಲ ಐತಿಹಾಸಿಕ ತಾಣವಾಗಿದೆ. ಶ್ರೀ ಚಕ್ರ ಸಮೇತ ಪ್ರಸನ್ನ ಮೀನಾಕ್ಷಿ ಸೋಮೇಶ್ವರ ದೇವಾಲಯ, ಶ್ರೀ ಮಧ್ಯರಂಗನಾಥ ದೇವಾಲಯ, ಆದಿ ಶಕ್ತಿ ಶಿಂಷಾ ಮಾರಮ್ಮ , ದರ್ಗಾ ಹಾಗೂ ಪ್ರವಾಸಿಗರ ನೆಚ್ಚಿನ ಭರ ಚುಕ್ಕಿ ಜಲಪಾತ ಹಲವು ಕಾರಣಗಳಿಗೆ ಪ್ರವಾಸಿಗರು, ಅಸಂಖ್ಯಾತ ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದು ಖ್ಯಾತವೂ ಆಗಿದೆ. ಜಲಪಾತೋತ್ಸವದ ಹಿನ್ನೆಲೆ ಈ ಸ್ಥಳದ ಮೆರಗು ಇನ್ನಷ್ಟು ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆ ಸಚಿವರು ಆಗಮಿಸಲಿದ್ದಾರೆ, ಹಾಗಾಗಿ ಈ ಭಾಗದ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕ ವಾತಾವರಣ ದೊರಕಲಿದೆ. ನಾನು ಸಿಎಂ ಅವರಲ್ಲಿ ಪ್ರವಾಸೋದ್ಯಮಕ್ಕೆ ಏನಾದರೂ ಹೆಚ್ಚಿನ ರೀತಿಯಲ್ಲಿ ಕೊಡುಗೆ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಪ್ರವಾಸೋದ್ಯಮ ಅಭಿವೃದ್ಧಿಗೊಂಡರೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ನಾಶವಾಗಲಿದೆ. ಗಡಿ ತಾಲೂಕು ಹನೂರಿಗೂ ವರದಾಯಕವಾಗಲಿದೆ.ಜಲಪಾತೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಜನರು ಕಾರ್ಯಕ್ರಮಕ್ಕೆ ಆಗಮಿಸಿ ಕೂರಲು ವ್ಯವಸ್ಥಿತವಾಗಿ ಆಸನಗಳ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ. ಪಾರ್ಕಿಂಗ್ ಸೌಲಭ್ಯ, ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ. 

ಪ್ರವಾಸಿಗರಿಗೆ ಈ ನಿಸರ್ಗದ ಸೌಂದರ್ಯ ಸವಿಯಲು ಸರ್ಕಾರ ತೀರ್ಮಾನಿಸಿ ಈ ಕಾರ್ಯಕ್ರಮ ಆಯೋಜನೆ ಮಾಡಿದೆ. ಭರಚುಕ್ಕಿ ಜಲಪಾತಕ್ಕೆ ರಂಗು- ರಂಗಿನ ಬೆಳಕನ್ನು ಚೆಲ್ಲುವುದರ ಜತೆಗೆ, ಸುಂದರವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಖ್ಯಾತ ಕಲಾವಿದರು ಸಂಗೀತ ರಸದ ಔತಣವನ್ನು ಪ್ರೇಕ್ಷಕರಿಗೆ ಒದಗಿಸಲಿದ್ದಾರೆ. ಸಾರ್ವಜನಿಕರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಾಸಕರು ಮನವಿ ಮಾಡಿದರು. ಇದೆ ವೇಳೆ ಶಾಸಕರು ಗುರುವಾರ ಮತ್ತು ಶುಕ್ರವಾರ ಸಂಜೆ ತನಕವೂ ಅಧಿಕಾರಿಗಳ ಜೊತೆ ಕೈಗೊಂಡು ಸಿದ್ಧತೆಗಳ ಬಗ್ಗೆಯೂ ಮಾಹಿತಿ ಪಡೆದರಲ್ಲದೆ ಖುದ್ದು ಪರಿಶೀಲಿಸಿದರು. ಈ ವೇಳೆ ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್, ತಹಸೀಲ್ದಾರ್ ಮಂಜುಳಾ, ಡಿವೈಎಸ್ಪಿ ಧರ್ಮೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ ಇನ್ನಿತರರು ಇದ್ದರು.