ಸಾರಾಂಶ
ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಶ್ರೀ ಮುಕ್ತಸರ್ ಸಾಹಿಬ್ ಗುರುದ್ವಾರಕ್ಕೆ ಭಾನುವಾರ ಭೇಟಿ ನೀಡಿದ ವೇಳೆ ಅವರ ಪಾದರಕ್ಷೆಗಳ ಕಾವಲಿಗೆ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಚಂಡೀಗಢ: ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಶ್ರೀ ಮುಕ್ತಸರ್ ಸಾಹಿಬ್ ಗುರುದ್ವಾರಕ್ಕೆ ಭಾನುವಾರ ಭೇಟಿ ನೀಡಿದ ವೇಳೆ ಅವರ ಪಾದರಕ್ಷೆಗಳ ಕಾವಲಿಗೆ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಅಧಿಕೃತ ಆದೇಶದ ಪ್ರತಿ ಎನ್ನಲಾದ ಒಂದು ಫೋಟೋ ಭಾರೀ ವೈರಲ್ ಆಗುತ್ತಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ. ಆದರೆ ಇದನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಆದೇಶಪ್ರತಿಯಲ್ಲಿ, ‘ಪಂಜಾಬ್ ಸಿಎಂ ಅವರ ಶೂಗಳ ಕಾವಲಿಗೆ ಹೆಡ್ ಕಾನ್ಸ್ಟೇಬಲ್ ರೂಪ್ ಸಿಂಗ್ ಮತ್ತು ಕಾನ್ಸ್ಟೇಬಲ್ ಸರ್ಬತ್ ಸಿಂಗ್ ಅವರನ್ನು ಗೇಟ್-7ರ ಬಳಿ ಸಿವಿಲ್ ವಸ್ತ್ರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ.
ಆಕ್ರೋಶ:
ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಬಿಜೆಪಿ ಸೇರಿ ವಿಪಕ್ಷಗಳಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ‘ಪಂಜಾಬ್‌ನಲ್ಲಿ ಮುಖ್ಯಮಂತ್ರಿಯ ಪಾದರಕ್ಷೆಗೇ ಭದ್ರತೆ ಇಲ್ಲವೆಂದಮೇಲೆ ಉಳಿದವರಿಗೆ ಎಲ್ಲಿದೆ? ಜನ ಇದನ್ನೇ(ಪಾದರಕ್ಷೆ) ನಿಮ್ಮ ವಿರುದ್ಧ ಬಳಸುತ್ತಾರೆ’ ಎಂದು ಕೇಂದ್ರ ಸಚಿವ ರವನೀತ್ ಬಿಟ್ಟು ವ್ಯಂಗ್ಯವಾಡಿದ್ದಾರೆ. ‘ಸಂಸ್ಥೆಗಳು ಮತ್ತು ಹಕ್ಕುಗಳ ರಕ್ಷಣೆ ಬಗ್ಗೆಯೂ ಸರ್ಕಾರವು ಇದೇ ಕಾಳಜಿಯನ್ನು ತೋರಿಸಿದರೆ ಒಳಿತು’ ಎಂದು ಕಾಂಗ್ರೆಸ್ ಟೀಕಿಸಿದೆ.
ಇದು ಸುಳ್ಳು- ಪೊಲೀಸ್:
ಆದೇಶಪ್ರತಿಯ ಬಗ್ಗೆ ಸ್ಪಷ್ಟನೆ ನೀಡಿರುವ ಮುಕ್ತಸರ್ ಸಾಹಿಬ್ ಎಸ್‌ಪಿ, ‘ಇದು ಖಾಸಗಿ ಕಾರ್ಯಕ್ರಮವಾಗಿತ್ತು. ಪೊಲೀಸರನ್ನು ಶೂ ಕಾಯಲು ನೇಮಿಸಿದ ಸುದ್ದಿ ಸುಳ್ಳು ಹಾಗೂ ದಾರಿತಪ್ಪಿಸುವಂತಹದ್ದು. ಇಂಥ ಯಾವುದೇ ಆದೇಶ ಹೊರಡಿಸಿಲ್ಲ ನಿಜ ಸುದ್ದಿಗಾಗಿ ವಿಶ್ವಸನೀಯ ಮೂಲಗಳನ್ನು ಅವಲಂಬಿಸಿ’ ಎಂದಿದ್ದಾರೆ.
ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಮಾನ್, ‘ಅವರಿಗೆ ಪಾದರಕ್ಷೆಗಳೂ ಈಗ ಸಮಸ್ಯೆಯಾಗಿದೆ. ನಮ್ಮ ತಾಯಿ, ಸಹೋದರಿಯರ ವಸ್ತ್ರಗಳನ್ನೂ ಬಿಡುವುದಿಲ್ಲ’ ಎಂದಿದ್ದಾರೆ.
;Resize=(128,128))
;Resize=(128,128))
;Resize=(128,128))