(ಮಿಡಲ್‌) ಕೊಂಕಲ್: ಚರಂಡಿ ಅವ್ಯವಸ್ಥೆಗೆ ರಸ್ತೆ ದುರ್ವಾಸನೆ

| Published : Aug 10 2024, 01:42 AM IST

ಸಾರಾಂಶ

ವಡಗೇರಾ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ತ್ಯಾಜ್ಯ ಸಂಗ್ರಹವಾಗಿರುವುದು.

ಕನ್ನಡಪ್ರಭ ವಾರ್ತೆ ವಡಗೇರಾ

ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಸೂಕ್ತ ರಸ್ತೆ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಚರಂಡಿ ಮೇಲೆ ಹರಿದು, ರಸ್ತೆ ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಮಿಕ ರೋಗಗಳು ಹರಡುವ ಭೀತಿ ಗ್ರಾಮಸ್ಥರಿಗೆ ಎದುರಾಗಿದೆ. ತಕ್ಷಣ ಸಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಗೌರವಾಧ್ಯಕ್ಷ ಶರಣು ಜಡಿ ಒತ್ತಾಯಿಸಿದ್ದಾರೆ.

ಈ ಕುರಿತು ಕೊಂಕಲ್ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಮಾತನಾಡಿದ ಅವರು, ಗ್ರಾಮದ ವಾರ್ಡ್ ನಂಬರ್‌ 2ರಲ್ಲಿ ಗ್ರಾಮದ ಚರಂಡಿ ನೀರು ಒಂದೆಡೆ ಸೇರುತ್ತಿರುವ ಕಾರಣ ಅಲ್ಲಿರುವ ತಗ್ಗು ಪ್ರದೇಶದ ಸ್ಥಳವು ಕೆರೆಯಂತಾಗಿದೆ. ಇದು ಗ್ರಾಮದ ಪ್ರಮುಖ ರಸ್ತೆಯಾಗಿದ್ದು, ಸರಕಾರಿ ಪ್ರಾಥಮಿಕ ಪ್ರೌಢ ಶಾಲೆಯ ಮಕ್ಕಳು, ರೈತರು ಹಾಗೂ ಸಾರ್ವಜನಿಕರು ಇದೇ ರಸ್ತೆಯ ಮುಖಾಂತರ ದಿನನಿತ್ಯ ಓಡಾಡುತ್ತಾರೆ. ಇದರಿಂದ ಬರುವ ಕೆಟ್ಟ ದುರ್ವಾಸನೆಯು ಅಕ್ಕ-ಪಕ್ಕದ ಮನೆಗಳು ಹಬ್ಬುತ್ತಿದೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿವೆ. ಡೆಂಘೀ, ಮಲೇರಿಯಾಯಂತಹ ರೋಗಗಳು ಹಾವಳಿಯಿಂದ ಗ್ರಾಮಸ್ಥರು ಹಾಗೂ ಚಿಕ್ಕ ಮಕ್ಕಳು ತತ್ತರಿಸಿ ಹೋಗಿದ್ದಾರೆ. ತಕ್ಷಣ ಗ್ರಾಮ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದ್ದಾರೆ.ಈ ಸಮಸ್ಯೆ ಬಗೆಹರಿಸದಿದ್ದರೆ ಕೊಂಕಲ್ ಗ್ರಾಪಂ ಬೀಗ ಜಡಿದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.