ಸಾರಾಂಶ
ಕಲಬುರಗಿಯಲ್ಲಿ ಎಳ್ಳಮವಾಸ್ಯೆ ಸಂಭ್ರಮ । ನಗರ ವಾಸಿಗಳಿಗೆ ಹಳ್ಳಿ ಬದುಕು ಪರಿಚಯಿಸಲು ರೊಟ್ಟಿ ಜೊತೆ ಸಂಸ್ಕೃತಿ ಬೆಸುಗೆಗೆ ಪ್ಲಾನ್
ವೈಜ್ಞಾನಿಕ-ಸಾಂಪ್ರದಾಯಿಕ ಮೌಲ್ಯಗಳ ಎಳ್ಳ ಅಮಾವಾಸ್ಯೆ ಪ್ಯಾಕೇಜ್ ರೂಪಿಸಿ ಜನತೆ ಮುಂದಿಟ್ಟ ಆಡಳಿತಕನ್ನಡಪ್ರಭ ವಾರ್ತೆ ಕಲಬುರಗಿಬೆಳೆಹಾನಿಯಾಗಿ ಆರ್ಥಿಕ ಮುಗ್ಗಟ್ಟಿನಲ್ಲಿದ್ದರೂ ರೈತಾಪಿ ಕುುಟಂಬದವರು ವರುಷದ ಸಡಗರ ಸಂಪ್ರದಾಯದ ಎಳ್ಳಮವಾಸ್ಯೆ ಆಚರಣೆಗೆ ಸ್ವಲ್ಪವೂ ಮುಕ್ಕಾಗದಂತೆ ಸಿದ್ಧತೆ ನಡೆಸುತ್ತಿದ್ದಾರೆ.ಭೂಮಿತಾಯಿ ಹಬ್ಬ ಮಾಡಲೇಬೇಕಲ್ಲ ಎಂದು ರೈತಾಪಿ ಕುಟುಂಬದವರು ರೊಟ್ಟಿ, ಬಜ್ಜಿಪಲ್ಲೆ, ಶಸೇಂಗಾ ಹೋಳಿಗೆ, ಎಣ್ಣಿಗಾಯಿ, ಜೋಳದ ಕಡಬು ಸೇರಿದಂತೆ ತರಹೇವಾರಿ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಎಳ್ಳಮವಾಸ್ಯೆ ಸಂಭ್ರಮದಲ್ಲಿ ಮಿಂದೇಳಲು ಸಂಭ್ರಮದಲ್ಲಿದ್ದಾರೆ.ಜಿಲ್ಲೆಯಲ್ಲಿ ಈ ಬಾರಿ ತೊಗರಿ, ಹತ್ತಿಯದ್ದೇ ಬೇಸಾಯ ಬಲು ಜೋರು. ಜೋಳ ಬಿತ್ತಿದವರು ವಿರಳ. ರೋಗಬಾಧೆಗೆ ತುತ್ತಾಗಿ ಶೇ. 40 ರಷ್ಟು ತೊಗರಿ ಹಾಳಾಗಿ ರೈತರೆಲ್ಲರೂ ಕಂಗಾಲಾಗಿದ್ದಾರೆ. ಆದಾಗ್ಯೂ ಎಳ್ಳಮವಾಸ್ಯೆ ಸಡಗರಕ್ಕೆ ಕೊರತೆ ಕಾಡದಂತೆ ಮನೆ ಮಂದಿ, ಬಂಧುಗಳು, ಮಿತ್ರರೊಂದಿಗೆ ಹಬ್ಬದ ಆಚರಣೆಗೆ ತೊಡಗಿದ್ದಾರೆ.ಈಗಾಗಲೇ ತೊಗರಿ ರಾಶಿ ಶುರುವಾಗಿದೆ. ಇಳುವರಿ ನೆಲ ಕಚ್ಚಿದೆ. ಮಾರುಕಟ್ಟೆಯಲ್ಲಿ ಬೆಲೆಯೂ ಬಿದ್ದು ಹೋಗಿದೆ. ಇವೆಲ್ಲ ಜಂಜಡಗಳು ರೈತರನ್ನು ತಿಕ್ಕಿಮುಕ್ಕುತ್ತಿದ್ದರೂ ಕೂಡಾ ಇದಕ್ಕೆಲ್ಲ ಸವಾಲಿನ ರೂಪದಲ್ಲಿ ಸ್ವೀಕರಿಸಿರುವ ರೈತರು ಭೂಮಿತಾಯಿಗೆ ನಮಿಸಲು ಪುಳಕಿತರಾಗಿದ್ದಾರೆ.
ಎಳ್ಳಅಮಾಸ್ಯೆಗೆ ರೊಟ್ಟಿ ಬುತ್ತಿರೈತರು ಸಸ್ಯ ಮತ್ತು ಭೂತಾಯಿಯನ್ನು ಆರಾಧಿಸುವ ಎಳ್ಳ ಅಮಾವಾಸ್ಯೆ ಸಂದರ್ಭದಲ್ಲಿ ಜಿಲ್ಲಾಡಳಿತ, ಕೃಷಿ ಇಲಾಖೆ ಎಳ್ಳ ಅಮವಾಸ್ಯೆ ಸಡಗರ ಸಾರಿ ಹೇಳಲು ಕಲಬುರಗಿ ರೊಟ್ಟಿ, ಎಳ್ಳಮಾಸಿ ಬುತ್ತಿ ಎಂಬ ಪ್ಯಾಕೇಜ್ ಮಾಡಿದ್ದು ಡಿ.30ರ ಎಳ್ಳಮಾಸಿ ದಿನ ಇದನ್ನು ಜನತೆಗೆ ಪರಿಚಯಿಸಲು ಆಹ್ವಾನ ನೀಡಿದ್ದಾರೆ. “ಯವ್ವಾ! ಒಕ್ಕಲಿಗ್ಯಾನ ಹೆಂಡತಿ ನಾನ, ಚರಗ ಹೊಡೀಬೇಕ ಎಳ್ಳಮಾಸಿ ದಿನ” ಎಂಬ ಜಾನಪದ ಹಾಡಿನಂತೆಯೇ ಜಿಲ್ಲಾಡಳಿತ ಈ ದಿನದಂದು ಹಳ್ಳಿ ರೈತ ಕುಟುಂಬಗಳು ಎಳ್ಳಮವಾಸೆ ಸಂಭ್ರಮಿಸೋದನ್ನೇ ಸೃಷ್ಟಿಸಿ ನಗರ ನಿವಾಸಿಗಳಿಗೆ ಪರಿಚಯಿಸುತ್ತಿದ್ದಾರೆ.ಎತ್ತಿನ ಬಂಡಿ ಸವಾರಿ- ಜೋಕಾಲಿ ಜೀಕೋಣಎಳ್ಳಮಾವಾಸಿ ದಿನವಾದ ಸೋಮವಾರ ಕೇಂದ್ರ ಕಾರಾಗೃಹ ಹಿಂಭಾಗದಲ್ಲಿರುವ ಸೀತನೂರಲ್ಲಿ ಕೃಷಿ ಇಲಾಖೆ, ಜಿಲ್ಲಾಡಳಿತ ಸಡಗರದ ಎಳ್ಳಮವಾಸ್ಯೆ ಹಾಗೂ ಕಲಬುರಗಿ ರೊಟ್ಟಿ ಬಿತ್ತಿ ಎಂದು ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ₹555 ಟಿಕೆಟ್ ನಿಗದಿಪಡಿಸಿದೆ. ರಸ್ತೆಯಿಂದ ಹೊಲದವರೆಗೂ ಎತ್ತಿನ ಬಂಡಿ ಸವಾರಿ, ಜೋಕಾಲಿ ಆಟೋಟ, ಹಳ್ಳಿ ಆಟಗಳ ಪರಿಚಯ, ಹಳ್ಳಿ ಊಟ, ಖಾದ್ಯಗಳನ್ನು ಸವಿಯುವ ಸುಸಂದರ್ಭ ಇಲ್ಲಿ ಒದಗಿಸಲಾಗಿದೆ.ಭೂಮಿತಾಯಿಗೆ ಸೀಮಂತಎಳ್ಳ ಅಮಾವಾಸ್ಯೆಯಿಂದ ಎಳ್ಳು ಕಾಳಿನಷ್ಟು ಚಳಿಯು ಕಡಿಮೆಯಾಗುವ ದಿನ. ಹಸಿರಿನಿಂದ ಕಂಗೊಳಿಸುವ ಬಿಳಿಜೋಳದ ತೆನೆಗಳು ಪೊಟ್ಟರಕಿಯಲ್ಲಿರುವುದರಿಂದ ರೈತರು ಭೂತಾಯಿಗೆ ಕುಪ್ಪಸ (ಸೀಮಂತ) ಕಾರ್ಯಕ್ರಮ ರೂಪದಲ್ಲಿ ಈ ದಿನ ಸಂಭ್ರಮಿಸುತ್ತಾರೆ. ವಿಶಿಷ್ಠ ಖಾದ್ಯ ಪದಾರ್ಥ ಸಿದ್ದಪಡಿಸಿ ಹೊಲಕ್ಕೆ ಹೋಗಿ ಲಕ್ಷ್ಮೀ ದೇವಿಗೆ ನೈವೇದ್ಯ ಅರ್ಪಿಸುತ್ತಾರೆ. ಚೆರಗ ಚೆಲ್ಲತ್ತ ಭೂಮಿತಾಯಿಗೆ ನಮಿಸುತ್ತಾರೆ.ಎಳ್ಳಮಾಸಿ ಸಡಗರ- ಸಂಭ್ರಮ ಸವಿಯುವ ಸದವಕಾಶ
ನಗರ ಪ್ರದೇಶದವರಿಗೆ ಈ ಹಬ್ಬದ ಗ್ರಾಮೀಣ ಸೊಗಡಿನ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಕಲಬುರಗಿಜಿಲ್ಲಾಡಳಿತವು ಕೃಷಿ ಇಲಾಖೆ, ಕಲಬುರಗಿ ರೊಟ್ಟಿ ಉತ್ಪಾದಕರ ಸಂಘದ ಸಹಯೋಗದಲ್ಲಿ ಡಿ. 30ರಂದು 6 ಕಿ.ಮೀ. ದೂರದಲ್ಲಿರುವ ಸೀತನೂರ ಗ್ರಾಮದ ಸುಂದರ ಹಸಿರು ಪರಿಸರದಲ್ಲಿ “ಕಲಬುರಗಿ ರೊಟ್ಟಿ ಎಳ್ಳಮಾಸಿ ಬುತ್ತಿ” ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅಂದು ರಾಮಮಂದಿರದಿಂದ ಬೆ. 11.30 ಗಂಟೆಗೆ ಪ್ರಾರಂಭವಾಗುತ್ತದೆ. ಸಂಜೆ 4 ಗಂಟೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೆ ಎತ್ತಿನ ಬಂಡಿ ಸವಾರಿ, ಜೋಕಾಲಿ, ಹಬ್ಬದ ಸಾಂಪ್ರದಾಯಿಕ ಊಟ, ಮನರಂಜನೆ ಪ್ಯಾಕೇಜ್ ಇರುತ್ತದೆ. ಪ್ರವೇಶ ಶುಲ್ಕ 555 ರೂ. ನಿಗದಿಪಡಿಸಲಾಗಿದೆ. ಮಾಹಿತಿಗಾಗಿ 9876543210ನ್ನು ಸಂಪರ್ಕಿಸಬಹುದು.