ಸಾರಾಂಶ
-ಅಶೋಕ ವಿಜಯದಶಮಿ -ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ದಮ್ಮದೀಕ್ಷೆ 68ನೇ ವರ್ಷದ ಸ್ಮರಣಾರ್ಥ ಕ್ಯಾಂಡಲ್ ಸಹಿತ ದಮ್ಮಮೈತ್ರಿ ಮೆರವಣಿಗೆ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದರೆ ಅವರು ಸ್ವೀಕರಿಸಿದ ಬೌದ್ಧ ಧರ್ಮದಲ್ಲಿ ನೀಡಿರುವ ಪಂಚಶೀಲ ತತ್ವಗಳನ್ನು ಕೂಡ ಅಳವಡಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ಪ್ರಜ್ಞಾವಂತರು ಇಂದು ಸಾಮೂಹಿಕವಾಗಿ ಬೌದ್ಧ ಧಮ್ಮ ಸ್ವೀಕರಿಸುತ್ತಿದ್ದಾರೆ ಎಂದು ಅಶೋಕ ಬುದ್ಧ ವಿಹಾರದ ನ್ಯಾನ ಲೋಕ ಬಂತೇಜಿ ಹೇಳಿದರು.
ನಗರದಲ್ಲಿ ಬೌದ್ಧ ಸಮಾಜ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ದೊಡ್ಡಬಳ್ಳಾಪುರ ತಾಲೂಕು ಘಟಕದ ವತಿಯಿಂದ ಅಶೋಕ ವಿಜಯದಶಮಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ದಮ್ಮ ದೀಕ್ಷೆಯ 68ನೇ ವರ್ಷದ ಸ್ಮರಣೆಗಾಗಿ ತಾಲೂಕು ಕಚೇರಿ ವೃತ್ತದಿಂದ ಅಂಬೇಡ್ಕರ್ ಪ್ರತಿಮೆವರೆಗೆ ನಡೆದ ಕ್ಯಾಂಡಲ್ ಸಹಿತ ದಮ್ಮಮೈತ್ರಿ ಮೆರವಣಿಗೆ ಬಳಿಕ ಅವರು ಮಾತನಾಡಿದರು.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕೇವಲ ಭಾರತದಲ್ಲೇ ಅಲ್ಲದೆ ವಿಶ್ವದ 48 ದೇಶಗಳಲ್ಲಿ ಸ್ಮರಣೆ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಮಾನತೆಗಾಗಿ ಅವರು ಮಾಡಿದ ಹೋರಾಟ ಮತ್ತು ಬೌದ್ಧ ದಮ್ಮ ಹುಟ್ಟಿದ ತಾಯ್ನಾಡಿನಲ್ಲಿ ಬೌದ್ಧ ದಮ್ಮವನ್ನು ಪುನಶ್ಚೇತನಗೊಳಿಸಿ, ಬೌದ್ಧ ದಮ್ಮದಲ್ಲಿರುವ ಪಂಚಶೀಲ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರಪಂಚಕ್ಕೆ ಮಾದರಿಯಾಗಿ ನಿಂತಿದ್ದಾರೆ ಎಂದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಹಾದಿಯಲ್ಲಿ ಇಂದಿನ ಯುವ ಪೀಳಿಗೆ ಸಾಗುತ್ತಿದೆ ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಇಂದು ಹಲವಾರು ಯುವಕರು ಬೌದ್ಧ ಧಮ್ಮ ಸ್ವೀಕಾರ ಮಾಡುತ್ತಿದ್ದಾರೆ ಹಾಗೂ ಪಂಚಶೀಲ ತತ್ವಗಳನ್ನು ಅಳವಡಿಸಿಕೊಂಡು ತಮ್ಮ ಜೀವನ ಸಾಗಿಸುತ್ತಿರುವುದೇ ಆಗಿದೆ ಎಂದರು.ಬೌದ್ಧ ಧರ್ಮ ಸ್ವೀಕಾರ:
ಬೌದ್ಧ ದಮ್ಮ ಸ್ವೀಕಾರ ಮಾಡಿದ ಅನಂತ್ ಕುಮಾರ್ ಮಾತನಾಡಿ, ನಾವು ಈಗಾಗಲೇ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಮಾರ್ಗದಲ್ಲಿ ಜೀವನ ಸಾಗಿಸುತ್ತಿದ್ದು ಅವರ ದಮ್ಮ ದೀಕ್ಷೆಯ 68ನೇ ವರ್ಷದ ಈ ಸುದಿನದಂದು ನಾವು ಸಹ ದೀಕ್ಷೆ ಪಡೆದು ಪಂಚಶೀಲ ತತ್ವವನ್ನು ಸ್ವೀಕರಿಸಿ ಪಾಲಿಸುವ ಮೂಲಕ ಜೀವನ ಸಾಗಿಸಲು ನಿರ್ಣಯಿಸಿದ್ದೇವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬೌದ್ಧ ಸಮಾಜದ ಜಿಲ್ಲಾ ಉಪಾಧ್ಯಕ್ಷ ರಾಜಗೋಪಾಲ್, ಪ್ರಧಾನ ಕಾರ್ಯದರ್ಶಿ ಮಾಳವ ನಾರಾಯಣ್, ಸಹ ಕಾರ್ಯದರ್ಶಿಗಳಾದ ರಾಜು ಸಣ್ಣಕ್ಕಿ, ಅಜಯ್, ಜಿಲ್ಲಾ ಸಮಿತಿ ಸದಸ್ಯ ಗೂಳ್ಯ ಹನುಮಣ್ಣ, ಕಾನೂನು ಸಲಹೆಗಾರ ಅಶೋಕ್, ತಾಲೂಕು ಅಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ತಳಗವಾರ ಸುರೇಶ್, ಉಪಾಧ್ಯಕ್ಷ ಮಾಳಯ್ಯ ಮತ್ತಿತರರು ಉಪಸ್ಥಿತರಿದ್ದರು.