ವೃತ್ತಿ ಕೌಶಲ್ಯದೊಂದಿಗೆ ಜೀವನ ಮೌಲ್ಯ ಅಳವಡಿಸಿಕೊಳ್ಳಿ: ಪ್ರೊ.ವಿ.ಆರ್. ದೇಸಾಯಿ

| Published : Jun 23 2024, 02:04 AM IST

ವೃತ್ತಿ ಕೌಶಲ್ಯದೊಂದಿಗೆ ಜೀವನ ಮೌಲ್ಯ ಅಳವಡಿಸಿಕೊಳ್ಳಿ: ಪ್ರೊ.ವಿ.ಆರ್. ದೇಸಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಬಿವಿವಿ ಸಂಘದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ಶನಿವಾರ ಜರುಗಿದ 14ನೆಯ ಪದವಿ ಪ್ರದಾನ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನೂತನ ತಾಂತ್ರಿಕ ವೃತ್ತಿ ಬದುಕಿನಲ್ಲಿ ಸಾಂಪ್ರದಾಯಿಕ ತಂತ್ರಜ್ಞಾನದೊಂದಿಗೆ ಆಧುನಿಕ ಆರ್ಟಿಫಿಸಿಯಲ್ ಇಂಟಲಿಜೆನ್ಸ್ (ಎಐಎಮ್ಎಲ್) ಅಥವಾ ಡೀಪ್ ಲರ್ನಿಂಗ್‌ ನಂತಹ ವೃತ್ತಿ ಕೌಶಲ್ಯಗಳು ಹಾಗೂ ಬದುಕಿನ ಮೌಲ್ಯಗಳನ್ನು ಯುವ ಪದವಿಧರರು ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು ಧಾರವಾಡಐಐಟಿ ನಿರ್ದೇಶಕ ಪ್ರೊ.ವಿ.ಆರ್. ದೇಸಾಯಿ ಹೇಳಿದರು.

ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ಶನಿವಾರ ಜರುಗಿದ 14ನೆಯ ಪದವಿ ಪ್ರದಾನ ಸಮಾರಂಭದಲ್ಲಿ ನೂತನ ಪದವಿಧರರಿಗೆ ಪದವಿ ಪ್ರದಾನ ಮಾಡಿ ಮಾತನಾಡಿ, ಪ್ರಾಚೀನ ಕಾಲದಲ್ಲೇ ಭಾರತದಲ್ಲಿ ನಳಂದಾ ವಿಶ್ವವಿದ್ಯಾಲಯದಂತಹ ಶ್ರೇಷ್ಠ ಜ್ಞಾನ ನೀಡುವ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳಿದ್ದವು. ಭಾರತೀಯ ವೈದ್ಯಕೀಯ (ಆಯುರ್ವೇದ) ಪದ್ಧತಿ ಶ್ರೇಷ್ಠವಾದದ್ದು. ಯೋಗ ವಿಶ್ವಕ್ಕೆ ಭಾರತೀಯರು ನೀಡಿದ ಅಮೂಲ್ಯ ಕೊಡುಗೆ, ಯೋಗದ ವಿವಿಧ ಭಂಗಿಯ ಮೂಲ ಕಾರಣ, ಹಿನ್ನೆಲೆಯನ್ನು ಪುನರ್ ಅಧ್ಯಯನ ಮಾಡಿ ತಾಂತ್ರಿಕ ಹಾಗೂ ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ಲೇಷಿಸಿ ತಿಳಿದುಕೊಳ್ಳುವುದು ಅತ್ಯವಶ್ಯ ಎಂದು ಹೇಳಿದರು.

ಕೊನಾರ್ಕ್ ಸೂರ್ಯ ದೇವಾಲಯದ ರಥಚಕ್ರದ ಕಡ್ಡಿಗಳು ಆರು ನಿಮಿಷದ ನಿಖರತೆ ತೋರಿಸುವುದು, ಬ್ರಹದೀಶ್ವರ ದೇವಾಲಯದ ಭೂಕಂಪನ ನಿರೋಧಕ ತಂತ್ರಜ್ಞಾನ ಅಂದಿನ ಕಾಲದ ಭಾರತೀಯರ ಉನ್ನತ ತಾಂತ್ರಿಕತೆಗೆ ಸಾಕ್ಷಿಯಾಗಿವೆ. ಬದುಕಿನ ಎಲ್ಲ ಹಂತಗಳಲ್ಲಿ ಕನಿಷ್ಠ ಒತ್ತಡ ಗರಿಷ್ಠ ನೆಮ್ಮದಿ ಹಾಗೂ ಜ್ಞಾನದೊಂದಿಗೆ ಸುಸ್ಥಿರತೆ ಕಾಯ್ದುಕೊಂಡು ಸಾಧನೆ ಮಾಡಬೇಕು. ವೈಯಕ್ತಿಕ, ಸಾಮಾಜಿಕ ಹಾಗೂ ರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಮುಕ್ತತೆಯನ್ನು ಸಾಧಿಸುವುದು ಮುಖ್ಯ ಎಂದರು.

ಬೆಂಗಳೂರಿನ ಇಂಟೆಲ್‌ ಟೆಕ್ನಾಲಜಿ ಪ್ರೈ.ಲಿ. ಎಂಜಿನಿಯರಿಂಗ್ ಮ್ಯಾನೇಜರ್ ವಿನಯ್ ಕುಮಾರ್ ತೇಲಸಂಗ ಮಾತನಾಡಿ, ವೈಯಕ್ತಿಕ, ಸಾಮಾಜಿಕ ಮತ್ತು ವೃತ್ತಿಯ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಬೇಕು. ಉತ್ತಮ ಆರೋಗ್ಯ, ಓದುವ ಹವ್ಯಾಸ, ನಿರಂತರ ಕಲಿಕೆ ಇವುಗಳನ್ನು ರೂಢಿಸಿಕೊಂಡು ಕುಟುಂಬ ಹಾಗೂ ಸಮಾಜಕ್ಕೆ ಒಳ್ಳೆಯ ಹೆಸರು ತರುವಂತಹ ವ್ಯಕ್ತಿಗಳಾಗಿ ಎಂದು ಸಲಹೆ ನೀಡಿದರು.

ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ವೇದಿಕೆ ಮೇಲಿದ್ದರು. ಬಿವಿವಿ ಸಂಘದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಆರ್.ಎನ್. ಹೆರಕಲ್ ಸ್ವಾಗತಿಸಿ ಕಾಲೇಜಿನ ಸಾಧನೆ ಮತ್ತು ಅಭಿವೃದ್ಧಿಯ ಮೈಲುಗಳನ್ನು ಮೇಲುಕು ಹಾಕಿದರು. ಕಾಲೇಜಿನ ಪ್ರಾಚಾರ್ಯರಾದ ವೀಣಾ ಸೋರಗಾಂವಿ ಪರಿಚಯಿಸಿದರು. ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೆ.ಚಂದ್ರಶೇಖರ ವಂದಿಸಿದರು. ಡಾ.ಎಸ್. ಜಿ. ಕಂಬಾಳಿಮಠ ಮತ್ತು ಡಾ.ವಿಜಯಲಕ್ಷ್ಮಿ ಜಿಗಜಿನ್ನಿ ನಿರೂಪಿಸಿದರು. ಪ್ರಥಮ ರ್‍ಯಾಂಕ್‌ ಪಡೆದ 6 ಜನ ಪದವಿಧರರಿಗೆ ಚಿನ್ನದ ಪದಕ ಹಾಗೂ 227 ಪದವಿಧರರಿಗೆ ಪದವಿ ಪ್ರದಾನ ಮಾಡಲಾಯಿತು.

ಬಿವಿವಿ ಸಂಘದ ಸದಸ್ಯರಾದ ಮಹಾಂತೇಶ ಶೆಟ್ಟರ, ಸುರೇಶಬಾಬು ನಿಡಗುಂದಿ, ರುದ್ರಣ್ಣ ಅಕ್ಕಿಮರಡಿ, ರಾಜೇಂದ್ರ ತಪಶೆಟ್ಟಿ, ಪ್ರಭುಸ್ವಾಮಿ ಸರಗಣಾಚಾರಿ, ಕುಮಾರ ಯಳ್ಳಿಗುತ್ತಿ, ಬಿವಿವಿ ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಮದ್ರಾಸ್‌ ಐಐಟಿಯ ಪ್ರಾಧ್ಯಾಪಕ ಪ್ರೊ. ಜಿ.ಆರ್. ದೊಡ್ಡಗೌಡರ, ಪ್ರೊ. ಅಮ್ಲನ್ ಸೇನ್ ಗುಪ್ತಾ, ಮುಂಬಯಿ ಐಐಟಿಯ ಪ್ರೊ.ರವೀಂದ್ರ ಗುಡಿ, ಎನ್ಐಟಿಕೆಯ ಪ್ರೊ.ವಿಜಯಕುಮಾರ ದೇಸಾಯಿ, ಫಿಲಿಪ್ಸ್ ಕಂಪನಿಯ ಡಾ.ಟಿ.ವಿ. ರವಿ ಕಾಲೇಜಿನ ಡೀನ್‌ಗಳು, ವಿಭಾಗೀಯ ಮುಖ್ಯಸ್ಥರು, ಪ್ರಾಧ್ಯಾಪಕರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಭೂಕಂಪನ ನೀರೋಧಕ ತಂತ್ರಜ್ಞಾನ ಭಾರತೀಯರ ಆ ಕಾಲದ ಉನ್ನತ ತಾಂತ್ರಿಕತೆಗೆ ಸಾಕ್ಷಿಯಾಗಿದೆ. ಬದುಕಿನ ಎಲ್ಲ ಹಂತಗಳಲ್ಲಿ ಕನಿಷ್ಠ ಒತ್ತಡ ಗರಿಷ್ಠ ನೆಮ್ಮದಿ ಹಾಗೂ ಜ್ಞಾನದೊಂದಿಗೆ ಸುಸ್ಥಿರತೆ ಕಾಯ್ದುಕೊಂಡು ಸಾಧನೆ ಮಾಡಬೇಕು. ವೈಯಕ್ತಿಕ, ಸಾಮಾಜಿಕ ಹಾಗೂ ರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಮುಕ್ತತೆ ಸಾಧಿಸುವುದು ಅವಶ್ಯಕ.

- ಪ್ರೊ. ವಿ.ಆರ್.ದೇಸಾಯಿ ಧಾರವಾಡ ಐಐಟಿ ನಿರ್ದೇಶಕ