ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸುಸ್ಥಿರ ಅಭಿವೃದ್ಧಿ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ತಿಳಿಸಿದರು.ನಗರದ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ನಿರ್ವಹಣಾಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಸುಸ್ಥಿರ ಅಭಿವೃದ್ಧಿ ಹಾಗೂ ನಿರ್ವಹಣಾಶಾಸ್ತ್ರದ ನಾವೀನ್ಯ ಅನುಸರಣೆಗಳು ಕುರಿತು ಆಯೋಜಿಸಿರುವ 2 ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ವ್ಯವಹಾರದ ಜೊತೆ ಜೊತೆಗೆ ಪರಿಸರಕ್ಕೆ ಕಡಿಮೆ ಹಾನಿ ಮಾಡುವ ವ್ಯವಸ್ಥೆ ಅಳವಡಿಸಿಕೊಳ್ಳುವುದು ಅವಶ್ಯಕ. ಹೊಸ ಆವಿಷ್ಕಾರಗಳ ಮೂಲಕ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕು. ವ್ಯವಹಾರವನ್ನು ಸುಸ್ಥಿರವಾಗಿ ನಡೆಸಲು ಸರ್ಕುಲರ್ ಆರ್ಥಿಕತೆ, ಸಂಪನ್ಮೂಲ ಸದ್ಬಳಕೆ, ಕಡಿಮೆ ತ್ಯಾಜ್ಯ ಉತ್ಪಾದನೆ ಮತ್ತು ಪುನರ್ ಬಳಕೆ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದರು.ಸರಣಿ ನಿರ್ವಹಣೆ ಮೂಲಕ ಕಂಪನಿಗಳು ಇಂಗಾಲ ಉತ್ಪಾದನೆಯನ್ನು ತಗ್ಗಿಸಬೇಕು. ಉದ್ಯೋಗಿಗಳನ್ನು ಒಳಗೊಳ್ಳುವಿಕೆಗಾಗಿ ಅವರಿಗೆ ಅರಿವು ಮೂಡಿಸಬೇಕು. ಮನೆಗಳಿಂದಲೂ ಪರಿಸರ ಪಾಠ ಆರಂಭ ಆಗಬೇಕು. ಸಮೂಹ ಸಾರಿಗೆ ಬಳಸಬೇಕು. ಸಾವಯವ ಆಹಾರ ಸೇವಿಸುವುದು ಸಹ ಸುಸ್ಥಿರ ಅಭಿವೃದ್ಧಿಗೆ ಸಹಕಾರಿ ಎಂದರು.
ಪರಿಸರದ ಬಳಕೆ ಹೆಚ್ಚಳ:ಈ ವೇಳೆ ಮುಖ್ಯ ಭಾಷಣಕಾರ ವಿಶ್ರಾಂತ ಕುಲಪತಿ ಪ್ರೊ.ಎಂ.ಎಸ್. ಸುಭಾಷ್ ಮಾತನಾಡಿ, ಸುಸ್ಥಿರ ಅಭಿವೃದ್ಧಿ ಎಂದರೆ ಭವಿಷ್ಯದ ಪೀಳಿಗೆಗೆ ತೊಂದರೆ ಆಗದಂತೆ ವರ್ತಮಾನದ ಜನರ ಅಗತ್ಯಗಳನ್ನು ಪೂರೈಸುವುದು. ಮಾನವ ಸುಸ್ಥಿರತೆ ಮುಖ್ಯ. ಜಾಗತಿಕವಾಗಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಪರಿಸರದ ಬಳಕೆ ಹೆಚ್ಚುತ್ತಿದೆ ಎಂದರು.
ಅರಣ್ಯ ಉತ್ಪನ್ನಗಳ ಬಳಕೆಯಲ್ಲಿ ನಮಗೆ ಆದಿವಾಸಿಗಳು ಮಾದರಿ. ದೊಡ್ಡ ಗುತ್ತಿಗೆದಾರರು ಅರಣ್ಯವನ್ನೇ ನಾಶಮಾಡುತ್ತಾರೆ. ಬಡತನದ ನಿರ್ಮೂಲನೆಯಿಂದ ಪರಿಸರ ಮೇಲಿನ ಹಾನಿ ಕಡಿಮೆ ಮಾಡಬಹುದು. ಬಡವರಿಗೆ ಪಡಿತರ, ಮಕ್ಕಳಿಗೆ ಅನ್ನ ದಾಸೋಹ ಉತ್ತಮ ಯೋಜನೆಗಳು. ಸುಸ್ಥಿರ ಕೃಷಿಯ ಪಾತ್ರವೂ ಮುಖ್ಯವಾದದ್ದು. ಸಾವಯವ ಕೃಷಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದರು.ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು. ಇನ್ಫೋಸಿಸ್ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ವಿನಾಯಕ್ ಹೆಗ್ಡೆ, ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಎಲ್.ಎನ್. ಮೂರ್ತಿ, ಡೀನ್ ಪ್ರೊ.ಎನ್. ಲಕ್ಷ್ಮೀ ಇದ್ದರು. ಡಾ.ಪಿ. ಸವಿತಾ ಸ್ವಾಗತಿಸಿದರು. ಪ್ರೊ.ಆರ್.ಎಚ್. ಪವಿತ್ರಾ ನಿರೂಪಿಸಿದರು.ವಿಶ್ವವಿದ್ಯಾನಿಲಯಗಳು ಸುಗಮವಾಗಿ ನಡೆಯಲು ಪ್ರೊ.ಕೆ.ಎಸ್.ರಂಗಪ್ಪ ಅಂತಹವರು ರಾಜ್ಯದ ಶಿಕ್ಷಣ ಸಚಿವರಾಗಬೇಕು. ವಿದೇಶಗಳಲ್ಲಿ ಭಾರತದ ವಿದ್ಯಾರ್ಥಿಗಳೇ ತುಂಬಿದ್ದಾರೆ. ವಿವಿಗಳಲ್ಲಿ ಇತ್ತೀಚೆಗೆ ಪ್ರಾಧ್ಯಾಪಕರ ನೇಮಕವಾಗಿಲ್ಲ. ವಿವಿಗಳಿಗೆ ಸಂಪನ್ಮೂಲ ಇಲ್ಲ. ಯುಕೆಜಿಗೆ ಲಕ್ಷಗಟ್ಟಲೆ ಶುಲ್ಕ ಕೊಡುವವರು ಸ್ನಾತಕೋತ್ತರ ಕೋರ್ಸುಗಳಿಗೆ ಸಾವಿರ ಲೆಕ್ಕದಲ್ಲಿ ಶುಲ್ಕ ಕಟ್ಟಲು ಮನಸ್ಸು ಮಾಡುವುದಿಲ್ಲ.
- ಪ್ರೊ.ಎಂ.ಎಸ್. ಸುಭಾಷ್, ವಿಶ್ರಾಂತ ಕುಲಪತಿ