ಸಾರಾಂಶ
ಚಿತ್ರದುರ್ಗ: ಮುರುಘಾಮಠದ ಮುಂಭಾಗದ ಅರಸನಕೆರೆಯಲ್ಲಿ ಜಯದೇವ ಶ್ರೀಗಳ ಕಂಚಿನ ಪ್ರತಿಮೆ ನಿರ್ಮಾಣ ಮಾಡಿ ಅದನ್ನೊಂದು ಪ್ರವಾಸಿ ತಾಣವನ್ನಾಗಿ ಮಾಡುವ ಅಗತ್ಯವಿದೆ ಎಂದು ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಲಹೆ ಮಾಡಿದರು. ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ ವತಿಯಿಂದ ಚಿತ್ರದುರ್ಗದ ಚಿನ್ಮೂಲಾದ್ರಿ ಬೃಹನ್ಮಠದ ತ್ರಿವಿಧ ದಾಸೋಹ ತತ್ವದ ರೂವಾರಿ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಮೆದೇಹಳ್ಳಿ ರಸ್ತೆಯ ಸೇತುವೆ ಬಳಿ ಭಾನುವಾರ ಹಮ್ಮಿಕೊಂಡಿದ್ದ ಜಗದ್ಗುರು ಜಯದೇವ ವೃತ್ತ ಮತ್ತು ನಾಮಫಲಕ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು, ಜಯದೇವ ಶ್ರೀಗಳ ಹೆಸರನ್ನು ಅಜರಾಮರ ಮಾಡಬೇಕು ಎಂದರು. ನಾಡಿನಲ್ಲಿ ತ್ರಿವಿಧ ರೀತಿಯ ದಾಸೋಹ ಮಾಡುವುದರ ಮೂಲಕ ಜನತೆಯನ್ನು ಉತ್ತಮ ದಾರಿಯತ್ತ ಕೊಂಡ್ಯೊಯ್ದ ಕೀರ್ತಿ ಜಯದೇವ ಶ್ರೀಗಳಿಗೆ ಸಲ್ಲುತ್ತದೆ. ಹಿಂದಿನ ಕಾಲದಲ್ಲಿ ಶಿಕ್ಷಣ ಇಲ್ಲದೆ ಜನತೆ ಪರದಾಡುತ್ತಿದ್ದಾಗ ನಾಡಿನ ಎಲ್ಲೆಡೆ ಶಾಲೆಗಳನ್ನು ತೆರೆಯುವುದರ ಮೂಲಕ ಅವರಿಗೆ ಅನ್ನದಾನ, ವಿದ್ಯಾದಾನ ಹಾಗೂ ಧರ್ಮದ ಬಗ್ಗೆ ತಿಳಿಸುವ ಕಾರ್ಯವನ್ನು ಜಯದೇವ ಶ್ರೀಗಳು ಮಾಡಿದ್ದರು. ಶ್ರೀಗಳು ಉದಾರ ಮನಸ್ಸು ಹೊಂದಿದವರಾಗಿದ್ದರು. ಕಷ್ಟ ಎಂದು ಬಂದವರಿಗೆ ಸಹಾಯ ಮಾಡುವುದರ ಮೂಲಕ ಕೊಡುಗೈ ದಾನಿಗಳಾಗಿದ್ದರು ಎಂದು ತಿಳಿಸಿದರು. ಸನ್ಯಾಸ ಸ್ವೀಕಾರ ಮಾಡಿದ ಸ್ವಾಮಿಗಳು ಸಮಾಜಕ್ಕೆ ಏನನ್ನು ನೀಡಬೇಕೋ ಅದೆನ್ನೆಲ್ಲ ಕೊಟ್ಟು ನಿಷ್ಠೆಯಿಂದ ಸಮಾಜ ಕಟ್ಟಿದ ಕೀರ್ತಿ ಜಯದೇವ ಶ್ರೀಗಳಿಗೆ ಸಲ್ಲುತ್ತದೆ. ಅವರ ಆದರ್ಶ ಮತ್ತು ತತ್ವಗಳನ್ನು ನಾವುಗಳು ಮೈಗೂಡಿಸಿಕೊಳ್ಳಬೇಕಿದೆ ಎಂದರು. ದಾವಣಗೆರೆಯ ವಿರಕ್ತ ಮಠದ ಡಾ.ಬಸವಪ್ರಭು ಮಹಾಸ್ವಾಮೀಜಿ ಮಾತನಾಡಿ, ಇಂದಿನ ಕಾಲದಲ್ಲಿ ಎಲ್ಲವೂ ಸಹಾ ಸುಲಭವಾಗಿ ಸಿಗುತ್ತದೆ ಆದರೆ ಜಯದೇವ ಶ್ರೀಗಳು ಇದ್ದ ಕಾಲದಲ್ಲಿ ಏನು ಇರಲಿಲ್ಲ. ಕಾರು, ಬಸ್ಸು, ವಿಮಾನ, ಮೊಬೈಲ್ ಫೋನ್, ದೂರವಾಣಿ ಇರಲಿಲ್ಲ. ಎತ್ತಿನ ಬಂಡಿ ಅಥವಾ ಕುದುರೆ ಗಾಡಿಯ ಮೇಲೆ ಹೋಗಬೇಕಿತ್ತು. ಇಂತಹ ಸಮಯದಲ್ಲಿ ಜಯದೇವ ಶ್ರೀಗಳು ನಾಡು ಸುತ್ತುವುದರ ಮೂಲಕ ಸಮಾಜ ಕಟ್ಟಿದರು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಯದೇವ ಹಾಸ್ಟೆಲ್ ತೆರೆದರು ಎಂದು ಶ್ಲಾಘಿಸಿದರು. ಶ್ರೀಗಳು ಪೀಠಾಧ್ಯಕ್ಷರಾದ ಸಮಯದಲ್ಲಿ ಮುರುಘಾ ಮಠ ಸಾಲದಲ್ಲಿ ಇತ್ತು. ಸಾಲ ತೀರಿಸುವುದರ ಮೂಲಕ ಮಠವನ್ನು ನವ ಕೋಟಿ ನಾರಾಯಣ ಎಂಬಂತೆ ಮಾಡಿದರು. ಜಯದೇವ ಶ್ರೀಗಳು ದೇಶವನ್ನು ಸುತ್ತುವುದರ ಮೂಲಕ ಬಡತನ, ಆಸಮಾನತೆ, ಅನಕ್ಷರತೆ, ದರಿದ್ರತನ, ಕಿತ್ತು ಹಾಕಿ ಶಿಕ್ಷಣವನ್ನು ನೀಡಿದರು ಎಂದು ಸ್ಮರಿಸಿದರು.ಇದೇ ವೇಳೆ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಎಂ.ಶಶಿಧರ್ ಬಾಬುರವರನ್ನು ಸನ್ಮಾನಿಸಲಾಯಿತು.
ಸಂಸದ ಗೋವಿಂದ ಕಾರಜೋಳ, ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ), ವಿಧಾನ ಪರಿಷತ್ತಿನ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ನಗರಸಭೆ ಅಧ್ಯಕ್ಷೆ ಸವಿತಾ ರಘು, ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಆಯುಕ್ತ ಎಂ.ಎಸ್.ಸೋಮಶೇಖರ್, ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆಯ ಅಧ್ಯಕ್ಷ ಸೋಮಶೇಖರ್ ಮಂಡಿಮಠ್, ನಗರಸಭೆ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಕೆ.ಬಿ.ಸುರೇಶ್, ವೀರಶೈವ ಮಹಾಸಭಾದ ಅಧ್ಯಕ್ಷ ಮಹಡಿ ಶಿವಮೂರ್ತಿ, ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ, ಮಲ್ಲಿಕಾರ್ಜನ್, ಜ್ಞಾನ ಮೂರ್ತಿ, ವಿದ್ಯಾ ವಿಕಾಸ ವಿದ್ಯಾಸಂಸ್ಥೆಯ ವಿಜಯಕುಮಾರ್, ಷಣ್ಮುಖಪ್ಪ, ಶರಣಯ್ಯ ಇದ್ದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಕೆ.ಎಂ.ವೀರೇಶ್ ಸ್ವಾಗತಿಸಿದರು. ಷಡಾಕ್ಷರಯ್ಯ ನಿರೂಪಿಸಿದರು.