ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1501ನೇ ಜನ್ಮದಿನದ ಅಂಗವಾಗಿ ಕಂಪ್ಲಿ ಪಟ್ಟಣದ ಮುಸ್ಲಿಂ ಸಮುದಾಯದವರು ಬುಧವಾರ ಈದ್‌ ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಆಚರಿಸಿದರು.

ಕಂಪ್ಲಿ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1501ನೇ ಜನ್ಮದಿನದ ಅಂಗವಾಗಿ ಪಟ್ಟಣದ ಮುಸ್ಲಿಂ ಸಮುದಾಯದವರು ಬುಧವಾರ ಈದ್‌ ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಆಚರಿಸಿದರು. ಪಟ್ಟಣದ ಸೈಯ್ಯದ್‌ಷಾಹ್ ಬಡೇಸಾಹೇಬ್ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ, ತತ್ವ ಹಾಗೂ ಆದರ್ಶಗಳನ್ನು ಸ್ಮರಿಸಿದರು.

ಮುಸ್ಲಿಂ ಧರ್ಮಗುರು ಸೈಯ್ಯದ್‌ಷಾಹ್ ಅಬುಲ್ ಹಸನ್ ಖಾದ್ರಿ ಉರುಫ್ ಆಜಂಪಾಷಾ ಸಾಹೇಬ್ ಸಜ್ಜಾದೇ ನಶೀನ್ ದಿವಾನಾಖಾನಾ ಮಾತನಾಡಿ, ಮಹಮ್ಮದ್ ಪೈಗಂಬರ್ ಅವರು ಮಾನವೀಯತೆ, ಪ್ರೀತಿ, ಸಹೋದರತ್ವ, ಶಾಂತಿ ಹಾಗೂ ಸೌಹಾರ್ದತೆಯ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಅವರ ತತ್ವಾದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಪ್ರತಿಯೊಬ್ಬರೂ ಪೈಗಂಬರ್ ಅವರ ಜೀವನ ಸಂದೇಶವನ್ನು ಅರಿತು, ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆ ನೆಲೆಸಲು ಎಲ್ಲರೂ ಪರಸ್ಪರ ಗೌರವದಿಂದ ಬದುಕಬೇಕು. ಸರ್ವಧರ್ಮೀಯರೊಂದಿಗೆ ಸಾಮರಸ್ಯ ಹಾಗೂ ಭಾವೈಕ್ಯತೆ ಬೆಳೆಸಿಕೊಂಡು ಸಹೋದರತ್ವದ ಭಾವನೆಯೊಂದಿಗೆ ಜೀವನ ನಡೆಸಬೇಕು ಎಂದು ಅವರು ಕರೆ ನೀಡಿದರು.

ಇದಕ್ಕೂ ಮುನ್ನ ಪಟ್ಟಣದ ಕೋಟೆಯ ಝಂಡಾಕಟ್ಟೆಯಿಂದ ಈದ್‌ ಮಿಲಾದ್ ಅಂಗವಾಗಿ ಮೆಕ್ಕಾ ಮತ್ತು ಮದೀನಾ ಸ್ತಬ್ಧಚಿತ್ರಗಳನ್ನು ಒಳಗೊಂಡ ಭವ್ಯ ಮೆರವಣಿಗೆ ಆರಂಭಗೊಂಡಿತು.

ಮೆರವಣಿಗೆಯಲ್ಲಿ ಮುಸ್ಲಿಂ ಧರ್ಮಗುರುಗಳಾದ ಸೈಯ್ಯದ್‌ಷಾಹ್ ಅಬುಲ್ ಹಸನ್ ಖಾದ್ರಿ, ಸೈಯ್ಯದ್‌ಷಾಹ್ ಅಬುತರಾಬ್ ಖಾದ್ರಿ, ಸೈಯ್ಯದ್‌ಷಾಹ್ ಚಾಂದ್‌ಪಾಷ ಖಾದ್ರಿ, ಸೈಯ್ಯದ್‌ಷಾಹ್ ಡಾ. ನೂರ್‌ಅಹ್ಮದ್ ಖಾದ್ರಿ ಭಾಗವಹಿಸಿದ್ದರು.

ಈದ್‌ ಮಿಲಾದ್ ಕಮಿಟಿ ಅಧ್ಯಕ್ಷ ಯು. ಜಹೀರುದ್ದೀನ್, ಉಪಾಧ್ಯಕ್ಷ ಎಂ. ನಾಸೀರ್‌ದ್ದೀನ್, ಪದಾಧಿಕಾರಿ ಬಿ. ಇಮ್ರಾನ್‌ಖಾನ್, ಅಬ್ದುಲ್ ಹಯಾತ್, ಬಿ. ನೂರ್, ರಾಜಾ, ಅಂಜುಮನ್ ಕಮಿಟಿ ಅಧ್ಯಕ್ಷ ಅಬ್ದುಲ್ ಕರೀಮ್ ಲಡ್ಡು, ಈದ್ಗಾ ಕಮಿಟಿ ಅಧ್ಯಕ್ಷ ಎಂ. ಇಸ್ಮಾಯಿಲ್ ಉಪಸ್ಥಿತರಿದ್ದರು.

ಡಿವೈಎಸ್‌ಪಿ ಪ್ರಸಾದ್ ಕೆ. ಗೋಖಲೆ ಹಾಗೂ ಪಿಐ ಕೆ.ಬಿ. ವಾಸುಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು.