ಕನ್ನಡಪ್ರಭ ವಾರ್ತೆ ಮಂಡ್ಯ

ಶಿಸ್ತು, ಸೇವಾ ಮನೋಭಾವ, ಮಾನವೀಯತೆಯನ್ನು ರೂಢಿಸಿಕೊಂಡಾಗ ಉತ್ತಮ ಆರೋಗ್ಯ ಸೇವಕರಾಗಿ ರೂಪುಗೊಳ್ಳಬಹುದು ಎಂದು ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಮೆಡಿಕಲ್ ಕಾಲೇಜಿನ ಅಲೈಡ್ ಹೆಲ್ತ್ ಸೈನ್ಸಸ್‌ನ ಪ್ರಾಂಶುಪಾಲ ಡಾ.ಎಚ್.ಕೆ.ಮೇಜರ್ ಮಂಜುನಾಥ್ ತಿಳಿಸಿದರು.

ಇಲ್ಲಿನ ಅಶೋಕನಗರದ ತಾರಾ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ನಡೆದ ತಾರಾ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ವಾರ್ಷಿಕೋತ್ಸವ ಹಾಗೂ ವೈದ್ಯರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಜ್ಞಾನ, ಕೌಶಲ್ಯ, ಸಮಯಪ್ರಜ್ಞೆ, ಸೇವಾ ಮನೋಭಾವ ಉತ್ತಮ ಆರೋಗ್ಯ ವ್ಯವಸ್ಥೆಯ ಬುನಾದಿಯಾಗಿದೆ. ವೈದ್ಯಕೀಯ ಸಹಾಯಕರಾಗುವವರಿಗೆ ನಿಸ್ವಾರ್ಥ ಹಾಗೂ ಸಮರ್ಪಣಾ ಮನೋಭಾವದಿಂದ ಆರೋಗ್ಯ ಸೇವೆಯಲ್ಲಿ ತೊಡಗಬೇಕು. ವೈದ್ಯರಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುವವರು ಆರೋಗ್ಯ ಸೇವಕರು. ಇಂದಿನ ವಿದ್ಯಾರ್ಥಿಗಳೇ ಭವಿಷ್ಯದ ಆರೋಗ್ಯ ಸೇವಕರಾಗುವುದರಿಂದ ಈಗಿನಿಂದಲೇ ಕೆಲಸದ ಬಗೆಗಿನ ಜ್ಞಾನ, ಕೌಶಲ್ಯವನ್ನು ರೂಢಿಸಿಕೊಳ್ಳಬೇಕು. ರೋಗಿಗಳೊಂದಿಗೆ ಉತ್ತಮ ಸಂಪರ್ಕವನ್ನಿಟ್ಟುಕೊಂಡು ಆರೈಕೆ ಮಾಡಬೇಕು. ಆಗ ಸಮಾಜದ ಗೌರವಕ್ಕೂ ಪಾತ್ರರಾಗುವುದಾಗಿ ಸಲಹೆ ನೀಡಿದರು.

ಹೊಸ ತಂತ್ರಜ್ಞಾನ, ಸಂಶೋಧನೆ, ಆಧುನೀಕತೆಯ ಬೆಳವಣಿಗೆ ಈ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾ ನಿರಂತರ ಕಲಿಕೆಯಲ್ಲಿ ತೊಡಗಬೇಕು. ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಕಡೆ ಹೆಚ್ಚು ಗಮನಹರಿಸಬೇಕು. ರೋಗಿಗಳನ್ನು ಗೌರವಿಸುತ್ತಾ ಅವರೊಂದಿಗೆ ಸಂಪರ್ಕ ಕೌಶಲ್ಯವನ್ನು ಹೆಚ್ಚಿಸಿಕೊಂಡರೆ ಉತ್ತಮ ಆರೋಗ್ಯ ಸೇವೆಯನ್ನು ನೀಡಿದ ಕೀರ್ತಿಗೆ ಪಾತ್ರರಾಗುತ್ತೀರಿ ಎಂದರು.


ವೈದ್ಯರು ರೋಗಿಗೆ ಚಿಕಿತ್ಸೆ ನೀಡಬಹುದು. ಆದರೆ, ರೋಗಿಯ ಬಳಿ ಸದಾ ಕಾಲ ಇದ್ದು ಅವರ ಆರೈಕೆಯಲ್ಲಿ ತೊಡಗುವವರು ಆರೋಗ್ಯ ಸೇವಕರು. ರೋಗಿ ಗುಣಮುಖವಾಗುವಲ್ಲಿ ಆರೋಗ್ಯ ಸಹಾಯಕರ ಪಾತ್ರ ಮಹತ್ವದ್ದಾಗಿದೆ. ಹಾಗಾಗಿ ಈ ಪವಿತ್ರ ವೃತ್ತಿಯನ್ನು ಪ್ರೀತಿಯಿಂದ, ವಿಶಾಲ ಮನೋಭಾವದಿಂದ ಸ್ವೀಕರಿಸಿ. ಸಮಾಜಕ್ಕೆ ಮುಕ್ತವಾಗಿ ತೆರೆದುಕೊಂಡು ಸೇವೆ ಸಲ್ಲಿಸಬೇಕು ಎಂದರು.

ಮೈಸೂರಿನ ಸಂತಸ ಐವಿಎಫ್ ನಿರ್ದೇಶಕಿ ಡಾ.ಸೌಮ್ಯ ದಿನೇಶ್ ಮಾತನಾಡಿ, ಆರೋಗ್ಯ ಸಹಾಯಕರ ಮೊಗದಲ್ಲಿ ಕಾಣುವ ಒಂದು ನಗು ರೋಗಿಯಲ್ಲಿ ಎಷ್ಟೋ ನಿರಾಳ ಭಾವವನ್ನು ಮೂಡಿಸುತ್ತದೆ. ರೋಗಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಉತ್ತಮ ಸಂಪರ್ಕವನ್ನಿಟ್ಟುಕೊಂಡು ಆರೈಕೆ ಮಾಡಬೇಕು. ಆರೋಗ್ಯ ಸಹಾಯಕರಿಗೆ ಸಾಕಷ್ಟು ಬೇಡಿಕೆ ಇದೆ. ವೃತ್ತಿಯನ್ನು ಆರಿಸಿಕೊಳ್ಳುವವರು ಸಹನೆ, ತಾಳ್ಮೆ ಜೊತೆಗೆ ಉತ್ತಮ ಜ್ಞಾನ, ಕೌಶಲ್ಯವನ್ನಿಟ್ಟುಕೊಂಡು ಸೇವಾ ಮನೋಭಾವದೊಂದಿಗೆ ರೋಗಿಯ ಶುಶ್ರೂಷೆ ಮಾಡುವಂತೆ ತಿಳಿಸಿದರು.

ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರಾದ ಡಾ.ಬೆಟ್ಟಸ್ವಾಮಿ, ಡಾ.ಜವರೇಗೌಡ, ಡಾ.ವೀರಭದ್ರಪ್ಪ, ಡಾ.ಕೆ.ಎನ್.ಜಗದೀಶ್, ಡಾ.ಕೆ.ಎಸ್.ಸತೀಶ್, ಡಾ.ಜಿ.ಬಿ.ಚಿಕ್ಕಬೋರೇಗೌಡ, ಡಾ.ಎ.ಬಿ.ಪುಟ್ಟಸ್ವಾಮಿಗೌಡ, ಡಾ.ಶ್ವೇತಾ, ಡಾ.ಕುಮಾರ್, ಡಾ.ಮಾದೇಶ್ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಿಮ್ಸ್ ನಿವೃತ್ತ ಅಧೀಕ್ಷಕ ಡಾ.ರಾಮಲಿಂಗೇಗೌಡ, ಹಿರಿಯ ಶಸ್ತ್ರಚಿಕಿತ್ಸಕ ಡಾ.ಬಿ.ಕೆ.ಸುರೇಶ್, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸಿದ್ದಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಕೆ.ಬಿ.ಜವರೇಗೌಡ, ಡಾ.ಚಂದ್ರಶೇಖರ್, ಡಾ.ತಾರಾ ಚಂದ್ರಶೇಖರ್, ಡಾ.ಸಿರಿ, ಧೀಮಂತ್ ಹಾಜರಿದ್ದರು.ಪರಿಶ್ರಮ, ನಿರಂತರ ಕಲಿಕೆ ಇಲ್ಲದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ. ವಿದ್ಯಾರ್ಥಿಗಳಾದವರು ದೊಡ್ಡ ಕನಸುಗಳನ್ನು ಕಾಣಬೇಕು. ಅದನ್ನು ಸಾಧಿಸುವ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಆಗ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಸಾಧ್ಯವಿದೆ. ಆರೋಗ್ಯ ಕ್ಷೇತ್ರ ವಿಸ್ತಾರವಾಗಿ ಬೆಳೆದಿದೆ. ವಿಪುಲ ಅವಕಾಶಗಳಿವೆ. ಆ ಅವಕಾಶಗಳನ್ನು ಬಳಸಿಕೊಂಡು ವೃತ್ತಿಯಲ್ಲಿ ಶ್ರೇಷ್ಠ ಸಾಧನೆ ಮಾಡಬೇಕು.

- ಡಾ.ಚಂದ್ರಶೇಖರ್, ತಾರಾ ಡಯಾಗ್ನೋಸ್ಟಿಕ್ ಸೆಂಟರ್