ತುರ್ತು ಪರಿಸ್ಥಿತಿ ಭಾರತ ಇತಿಹಾಸದ ಕರಾಳ ಅಧ್ಯಾಯ: ಬಿಜೆಪಿಯ ನವೀಲೆ ಅಣ್ಣಪ್ಪ, ಅಮಿತ್‌ ಶೆಟ್ಟಿ

| Published : Jun 26 2024, 12:32 AM IST

ಸಾರಾಂಶ

ದೇಶದಲ್ಲಿ ಹೇರಿದ ತುರ್ತು ಪರಿಸ್ಥಿತಿಗೆ ಇಂದಿಗೆ ೫೦ ವರ್ಷವಾಗಿದೆ. ಜೂ.೨೮ಕ್ಕೆ ಡಿಸಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಹುಡಾ ಮಾಜಿ ಅಧ್ಯಕ್ಷ ನವಿಲೇ ಅಣ್ಣಪ್ಪ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ತಿಳಿಸಿದರು. ಹಾಸನ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲಾ ಬಿಜೆಪಿ ಘಟಕದ ಸುದ್ದಿಗೋಷ್ಠಿ । ಎಮರ್ಜೆನ್ಸಿಗೆ 50 ವರ್ಷ । 28ಕ್ಕೆ ಡಿಸಿ ಕಚೇರಿ ಮುತ್ತಿಗೆ ನಿರ್ಧಾರ ಕನ್ನಡಪ್ರಭ ವಾರ್ತೆ ಹಾಸನ

ದೇಶದಲ್ಲಿ ಹೇರಿದ ತುರ್ತು ಪರಿಸ್ಥಿತಿಗೆ ಇಂದಿಗೆ ೫೦ ವರ್ಷವಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೊಂದು ಕರಾಳ ಅಧ್ಯಾಯವಾಗಿದೆ. ಈ ಸಂಬಂಧ ಜೂ.೨೮ಕ್ಕೆ ಡಿಸಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಹುಡಾ ಮಾಜಿ ಅಧ್ಯಕ್ಷ ನವಿಲೇ ಅಣ್ಣಪ್ಪ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ‘೧೯೭೫ರ ಜೂ.೨೫ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸಲಹೆಯ ಆಧಾರದಲ್ಲಿ ರಾಷ್ಟ್ರಪತಿ ಅಂತಹ ಕ್ರಮ ತೆಗೆದುಕೊಂಡಿದ್ದರು. ತುರ್ತು ಪರಿಸ್ಥಿತಿ ಜಾರಿಯಾಗಿ ಈ ಜೂನ್ ೨೫ಕ್ಕೆ ೪೯ ವರ್ಷ ತುಂಬಲಿದ್ದು, ೫೦ನೇ ವರ್ಷ ಆರಂಭವಾಗುತ್ತಿದೆ. ಇಂದಿರಾ ಗಾಂಧಿ ಅವರ ಆಯ್ಕೆಯನ್ನು ರದ್ದುಗೊಳಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ೧೯೭೫ರ ಜೂ.೨೪ರಂದು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಅದರ ಮರುದಿನವೇ ರಾಷ್ಟ್ರಪತಿ ತುರ್ತು ಪರಿಸ್ಥಿತಿ ಘೋಷಿಸಿದ್ದರು’ ಎಂದು ತಿಳಿಸಿದರು.

‘೧೯೭೫ರ ಜೂ.೨೫ರಂದು ಆಂತರಿಕ ಕ್ಷೋಭೆಯ ಕಾರಣ ನೀಡಿ, ಸಂವಿಧಾನದ ೩೫೨ (೧)ನೇ ವಿಧಿಯ ಅಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಆದರೆ, ಅಂದಿನ ಸರ್ಕಾರದ ಈ ಕ್ರಮಕ್ಕೆ ದೇಶದಾದ್ಯಂತ ತೀವ್ರ ಟೀಕೆಗೆ ಗುರಿಯಾಗಿತ್ತು. ಹಲವು ಮೂಲಭೂತ ಹಕ್ಕುಗಳನ್ನೂ ಮೊಟಕುಗೊಳಿಸಲಾಗಿತ್ತು. ಪ್ರಕಟಣೆಗೂ ಮುನ್ನ ಪತ್ರಿಕೆಗಳು, ಸರ್ಕಾರದ ‘ಪತ್ರಿಕಾ ಸಲಹೆಗಾರ’ರಿಂದ ಅನುಮತಿ ಪಡೆಯಬೇಕಿತ್ತು. ಪ್ರತಿಭಟಿಸಲು ಯತ್ನಿಸಿದ ನಾಗರಿಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಕೆಲ ಪತ್ರಕರ್ತರನ್ನೂ ಜೈಲಿಗೆ ಹಾಕಲಾಗಿತ್ತು’ ಎಂದು ಕಿಡಿಕಾರಿದರು.

‘೧೯೭೭ರ ಮಾ.೨೧ ತುರ್ತು ಪರಿಸ್ಥಿತಿ ಹಿಂಪಡೆಯಲಾಯಿತು. ಅಂದಿನ ವಿರೋಧ ಪಕ್ಷಗಳ ನಾಯಕರಲ್ಲಿ ಪ್ರಮುಖರಾಗಿದ್ದ ಎಲ್.ಕೆ.ಆಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ, ‘ಇಂದಿರಾ ಗಾಂಧಿ ಅವರು ಮಾಧ್ಯಮಗಳಿಗೆ ಬಾಗಲು ಹೇಳಿದ್ದರು. ಆದರೆ, ಅವು ತೆವಳಿದವು’ ಎಂದಿದ್ದರು’. ೧೯೭೮ರಲ್ಲಿ ಸಂವಿಧಾನದ ೩೫೨ನೇ ವಿಧಿಗೆ ತಂದ ತಿದ್ದುಪಡಿಯಲ್ಲಿ ‘ಆಂತರಿಕ ಕ್ಷೋಭೆ’ ಎಂಬುದನ್ನು ತೆಗೆದು ‘ಸಶಸ್ತ್ರ ಬಂಡಾಯ’ ಎಂದು ಸೇರಿಸಲಾಯಿತು’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾತನಾಡಿ, ‘ಬಿಜೆಪಿ ವತಿಯಿಂದ ಈಗಾಗಲೇ ಅನೇಕ ಕಾರ್ಯಕ್ರಮವನ್ನು ಯೋಜನೆ ಮಾಡಲಾಗಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಈಗಾಗಲೇ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗಿದೆ. ಜನ ಸಂಗ್ರಹದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯ ದಿನದ ಅಂಗವಾಗಿ ಜೂ.೨೩ ರಿಂದ ಜು.೬ರ ವರೆಗೂ ಎಲ್ಲಾ ಬೂತ್‌ಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ನಗರ ಮಂಡಲದ ಅಧ್ಯಕ್ಷ ಯೋಗೀಶ್, ರಾಜ್ಯ ಓಬಿಸಿ ಮೋರ್ಚಾದ ಕಾರ್ಯದರ್ಶಿ ಪ್ರಸನ್ನಕುಮಾರ್ ಸೇರಿ ಇತರರು ಇದ್ದರು.