ಜಿಲ್ಲಾ ಆಸ್ಪತ್ರೆಯಲ್ಲಿ 20 ಹಾಸಿಗೆಯ ಡಯಾಲೀಸಿಸ್ಸ್ ಘಟಕದ ಕಾಮಗಾರಿ ಜಿಲ್ಲೆಯ ಎಲ್ಲಾ ಪ್ರತಿನಿಧಿಗಳ ಅನುದಾನದಿಂದ ನಿರ್ಮಿಸುತ್ತಿರುವುದು ಉತ್ತಮ ಕಾರ್ಯಕ್ರಮವಾಗಿದೆ.
ಕನ್ನಡಪ್ರಭ ವಾರ್ತೆ ಕೋಲಾರನಗರದಲ್ಲಿ 50 ಹಾಸಿಗೆಗಳ ತುರ್ತು ಚಿಕಿತ್ಸಾ ಘಟಕ ಕೇಂದ್ರವನ್ನು 16 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವುದನ್ನು ಹಾಗೂ ನರಸಾಪುರದ ಹೆದ್ದಾರಿಯಲ್ಲಿ 12.5 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಲಾಗಿದೆ. ತುರ್ತು ಚಿಕಿತ್ಸಾ ಘಟಕವು ಜಿಲ್ಲಾ ಕೇಂದ್ರಕ್ಕೆ ಅತ್ಯವಶ್ಯಕವಾಗಿದ್ದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಅಲ್ಲದೆ ಗಡಿಭಾಗದಲ್ಲಿನ ಹೊರ ರಾಜ್ಯದ ಜನತೆಗೊ ಇಂತಹ ಆಸ್ಪತ್ರೆ ಅನಿವಾರ್ಯವಾಗಿತ್ತು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯಿಂದ ನಗರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿನ ತೀವ್ರ ನಿಗಾ ಘಟಕ (ಸಿ.ಸಿ.ಟಿ) ಡಯಾಲಿಸಿಸ್ ನೂತನ ಕಟ್ಟಡ ಹಾಗೂ ಇತರೆ ಆರೋಗ್ಯ ಸೇವೆಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.ಜಿಲ್ಲಾ ಆಸ್ಪತ್ರೆಯಲ್ಲಿ 20 ಹಾಸಿಗೆಯ ಡಯಾಲೀಸಿಸ್ಸ್ ಘಟಕದ ಕಾಮಗಾರಿ ಜಿಲ್ಲೆಯ ಎಲ್ಲಾ ಪ್ರತಿನಿಧಿಗಳ ಅನುದಾನದಿಂದ ನಿರ್ಮಿಸುತ್ತಿರುವುದು ಉತ್ತಮ ಕಾರ್ಯಕ್ರಮವಾಗಿದೆ. ದಿನೇ ದಿನೇ ಡಯಾಲೀಸಿಸ್ಸ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜಿಲ್ಲಾ ಆಸ್ಪತ್ರೆಗೆ ಅನಿವಾರ್ಯವಾಗಿತ್ತು ಎಂದರು.ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಆಡಳಿತಕ್ಕೆ ಬಂದ ನಂತರದಲ್ಲಿ ರಾಜ್ಯದಲ್ಲಿ ಸುಮಾರು 200 ಡಯಾಲೀಸಿಸ್ಸ್ ಕೇಂದ್ರಗಳಿಗೆ ಮಂಜೂರಾತಿ ನೀಡಿ ಗುಣಮಟ್ಟದ ಚಿಕಿತ್ಸೆಗಳ ಜೊತೆಗೆ ಔಷಧಗಳನ್ನು ನೀಡಲಾಗುತ್ತಿದೆ. ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿ 12.5 ಕೋಟಿ ರು. ವೆಚ್ಚದಲ್ಲಿ ಮುಳಬಾಗಿಲಿನಲ್ಲಿ ಎಂಸಿಎ 20 ಕೋಟಿ ರು. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಮಾಲೂರಿನಲ್ಲಿ 40 ಕೋಟಿ ರು. ವೆಚ್ಚದಲ್ಲಿ 100 ಹಾಸಿಕೆಗಳ ತಾಲೂಕು ಆಸ್ಪತ್ರೆಗೆ ಅನುಮತಿಸಿದೆ ಎಂದರು. ಕೋಲಾರದ ರಹಮತ್ ನಗರದಲ್ಲಿ ಹಾಗೂ ನೂಕಲಬಂಡೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಿದೆ. ಇದೇ ರೀತಿ ವಿವಿಧಡೆ ಪ್ರತಿ ಆರೋಗ್ಯ ಕೇಂದ್ರಕ್ಕೆ 60 ಲಕ್ಷ ರು.ಗಳಂತೆ 4 ಪಿಎಚ್‌ಸಿಗಳನ್ನು ಮಂಜೂರು ಮಾಡಿದೆ. ಸಾರ್ವಜನಿಕರಿಗೆ ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಇತರೆ ಅಗತ್ಯತೆ ಇರುವ ಇಲಾಖೆಗಳಲ್ಲಿ ಅಭಿವೃದ್ದಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಕೆಜಿಎಫ್‌ನಲ್ಲಿ 10 ಕೋಟಿ ರು. ವೆಚ್ಚದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಕೆ ಮಾಡಲು ಸಿಎಂ ಹಾಗೂ ನನ್ನ ಅನುದಾನ ಸಹ ನೀಡಲಾಗಿದೆ ಎಂದು ಹೇಳಿದರು.ಕ್ಯಾಲನೂರಿನಲ್ಲಿ 4 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತವಾದ ಆಸ್ಪತ್ರೆಯ ಕಾಮಗಾರಿ ಪ್ರಗತಿಯಲ್ಲಿದೆ, ಕೋಲಾರಕ್ಕೆ ರಾಜ್ಯದಲ್ಲಿಯೇ ಸಾವಿರಾರು ಕೋಟಿ ರು. ಗಳ ಅನುದಾನ ನಿಮ್ಮ ಜಿಲ್ಲಾ ಉಸ್ತುವಾರಿ ಸಚಿವರು ತಂದಿದ್ದಾರೆಂದು ಶ್ಲಾಘಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯರ ಸರ್ಕಾರ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ, ರಾಜ್ಯ ಬೊಕ್ಕಸ ಖಾಲಿ ಖಾಲಿ ಎಂದು ಟೀಕಿಸುವಂತ ವಿಪಕ್ಷದವರಿಗೆ ಉತ್ತರಿಸುವಂತಾಗಬೇಕು. ಪ್ರತಿ ಆಸ್ಪತ್ರೆಗೆ ಕಿಮೋ ಥೇರಪಿಯ ಸೌಲಭ್ಯ ಕಲ್ಪಿಸಲಾಗಿದೆ, ರಾಜ್ಯದಲ್ಲಿ 9 ಸೂಪರ್ ಸ್ಪೇಷಲ್ ಆಸ್ಪತ್ರೆಗಳಿಗೆ ಅಗತ್ಯವಾದ ವೈದ್ಯರ ತಜ್ಞರ ನೇಮಕಾತಿಗಳಿಗೆ ಅನುಮತಿಸಲಾಗಿದೆ, ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಸೌಲಭ್ಯಗಳಿಗಿಂತ ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗಲಿದೆ. ಪ್ರತಿ ತಾಲೂಕಿನಲ್ಲಿ 24*7 ಚಿಕಿತ್ಸೆಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲು ಈಗಾಗಲೇ ನೇಮಕಾತಿ ಪ್ರಗತಿಯಲ್ಲಿದೆ. ಗರ್ಭೀಣಿಯರ ಹೆರಿಗೆ ತಜ್ಞರು ಪ್ರತಿ ಆಸ್ಪತ್ರೆಯಲ್ಲೂ ಇರುವಂತೆ ಕ್ರಮ ಜರುಗಿಸಲಾಗುತ್ತಿದೆ. ಚಿಕಿತ್ಸೆಯ ಜೊತೆಗೆ ಉಚಿತ ಔಷಧ ಸೌಲಭ್ಯಗಳನ್ನು ಕಲ್ಪಸಿಲು ಸೂಚಿಸಲಾಗಿದೆ ಎಂದರು. ನಗರ ಯೋಜನಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ಡಾ.ಕೊತ್ತೂರು ಜಿ.ಮಂಜುನಾಥ್, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸ್ಸೀರ್ ಅಹ್ಮದ್, ಸಂಸದ ಎಂ.ಮಲ್ಲೇಶ್ ಬಾಬು, ಎಂಎಲ್ಸಿಗಳಾದ ಎಂ.ಎಲ್.ಅನಿಲ್‌ಕುಮಾರ್, ಇಂಚರ ಗೋವಿಂದರಾಜು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್ ಇತರರು ಇದ್ದರು.