ಶಿಕ್ಷಕಿ ಲೀಲಾವತಿಗೆ ಚಿಕ್ಕಗೊಂಡನಹಳ್ಳಿ ಗ್ರಾಮಸ್ಥರಿಂದ ಭಾವುಕ ಬೀಳ್ಕೂಡುಗೆ

| Published : Nov 07 2025, 02:15 AM IST

ಶಿಕ್ಷಕಿ ಲೀಲಾವತಿಗೆ ಚಿಕ್ಕಗೊಂಡನಹಳ್ಳಿ ಗ್ರಾಮಸ್ಥರಿಂದ ಭಾವುಕ ಬೀಳ್ಕೂಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಮಾಡುವ ಕೆಲಸ ನಮ್ಮ ನಿವೃತ್ತಿಯ ವೇಳೆ ಪ್ರತಿಬಿಂಬಿತವಾಗುತ್ತದೆ. ಶಿಕ್ಷಕರ ವೃತ್ತಿ ಅತ್ಯಂತ ಗೌರವಯುತವಾದ ವೃತ್ತಿ, ಇದನ್ನು ಅತ್ಯಂತ ಪ್ರಾಮಾಣಿಕತೆಯಾಗಿ ಮಾಡಿದವರು ಶಿಕ್ಷಕಿ ಲೀಲಾವತಿಯವರು, ಅವರ ಸೇವೆಗೆ ಸಾಕ್ಷಿಯಾಗಿ ಇಡೀ ಗ್ರಾಮ ಅವರನ್ನು ಬೀಳ್ಕೊಡುತ್ತಿರುವುದು ಹರ್ಷದಾಯಕ.

ಶಾಲೆಯಲ್ಲಿ 23 ವರ್ಷ ಸೇವೆ ಸಲ್ಲಿಸಿದ ಶಿಕ್ಷಕಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮಕ್ಕಳ ಭವಿಷ್ಯಕ್ಕಾಗಿ, ಅವರ ಉತ್ತಮ ಬದುಕಿಗಾಗಿ ಅಕ್ಷರ ಕಲಿಸುವ ಶಿಕ್ಷಕರು ದೇವರಿಗೆ ಸಮಾನ, ಇಂತಹ ಶಿಕ್ಷಕಿಯೊಬ್ಬರು ಕಳೆದ ೨೩ ವರ್ಷಗಳಿಂದ ಒಂದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಗ್ರಾಮದ ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸಿದ್ದಾರೆ. ಇದೀಗ ಸೇವೆಯಿಂದ ನಿವೃತ್ತಿಗೊಂಡು ಶಿಕ್ಷಕಿಯನ್ನು ಇಡೀ ಗ್ರಾಮದ ಜನತೆ ಭಾವುಕತೆಯ ಬೀಳ್ಕೊಡುಗೆ ನೀಡುವ ಮೂಲಕ ವಿಶೇಷತೆ ಮೆರೆದರು.

ತಾಲೂಕಿನ ಕಸಬಾ ಹೋಬಳಿ, ದಿಂಡಗೂರು ಚಿಕ್ಕಗೊಂಡನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಲೀಲಾವತಿ ತಮ್ಮ ಸೇವಾ ಅವಧಿಯನ್ನು ಪೂರ್ಣಗೊಳಿಸಿ ನಿವೃತ್ತಿಯಾಗಿದ್ದಾರೆ. ಇವರ ಸೇವೆಯನ್ನು ಸ್ಮರಿಸಿ ಇವರ ಮುಂದಿನ ನಿವೃತ್ತಿಯ ಬದುಕು ಉತ್ತಮವಾಗಿರಲಿ ಎಂದು ಆಶಿಸಿ ಚಿಕ್ಕಗೊಂಡನಹಳ್ಳಿಯ ಗ್ರಾಮಸ್ಥರು ಅವರನ್ನು ಸನ್ಮಾನಿಸಿ ಗೌರವಿಸಿ, ಕಾಣಿಕೆ ನೀಡಿ ಭಾವುಕತೆಯಿಂದ ಬೀಳ್ಕೊಟ್ಟರು. ಇಡೀ ಗ್ರಾಮದ ಜನರೆಲ್ಲ ಅವರನ್ನು ಬೆಳ್ಳಿ ಲೇಪಿತ ರಥದಲ್ಲಿ ಕೂರಿಸಿ ಮೆರವಣಿಗೆ ನಡೆಸಿ ಗ್ರಾಮದ ಗಡಿವರೆಗೂ ಹೋಗಿ ಕಳುಹಿಸಿಕೊಟ್ಟರು. ಅವರನ್ನು ಊರಿಂದ ಬೀಳ್ಕೊಡುವಾಗ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳೆಲ್ಲ ಭಾವುಕರಾಗಿ ಕಣ್ಣೀರಿಟ್ಟಿದ್ದು ಇವರ ಮೇಲಿನ ಪ್ರೀತಿಗೆ ಸಾಕ್ಷಿಯಾಗಿತ್ತು.

ಬೀಳ್ಕೊಡುಗೆ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಗ್ರಾಮದವರಾದ ಆನಂದ್‌ರವರು ಗ್ರಾಮದ ಪರವಾಗಿ ಅಭಿನಂದಿಸಿ ಮಾತನಾಡಿ, ಲೀಲಾವತಿ ಮೇಡಂರವರು ಶಾಲೆಗೆ ಬರುವ ಮಕ್ಕಳನ್ನು ಅತ್ಯಂತ ಪ್ರೀತಿ, ಅಕ್ಕರೆಯಿಂದ ನೋಡಿಕೊಂಡು ಅಕ್ಷರ ಕಲಿಸಿದವರು, ಕ್ಲಸ್ಟರ್‌ನಲ್ಲೇ ಅತಿ ಹೆಚ್ಚು ಮಕ್ಕಳ ದಾಖಲಾತಿ ಹೊಂದಿದ ಶಾಲೆ ಎಂಬ ಹೆಗ್ಗಳಿಕೆ ನಮ್ಮೂರಿನದು, ಗ್ರಾಮಸ್ಥರಾದ ನಾವು ಶಾಲೆಯ ವಿಚಾರದಲ್ಲಿ ಅನಗತ್ಯ ಮೂಗು ತೂರಿಸುವ ಕೆಲಸ ಮಾಡಿಲ್ಲ, ರಾಜಕೀಯಕ್ಕೆ ಎಡೆ ಮಾಡಿ ಕೊಟ್ಟಿಲ್ಲ, ಶಾಲೆಯ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಸಹಕರಿಸಿದ್ದೇವೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗ್ರಾಮದ ಯುವಕರು, ಹಳೆ ವಿದ್ಯಾರ್ಥಿಗಳು ಸ್ಥಾಪಿಸಿರುವ ವಿದ್ಯಾಸಿರಿ ಯೂತ್ ಕ್ಲಬ್ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯವೆಂದರು.

೨೩ ವರ್ಷಗಳು ನಮ್ಮ ಶಾಲೆಯಲ್ಲಿ ಒಂದಿಷ್ಟು ಕಳಂಕ ಬರದಂತೆ ಅವರು ಮಾಡಿರುವ ಸೇವೆಗೆ ನಾವೆಲ್ಲ ಆಭಾರಿಯಾಗಿದ್ದು, ಅವರನ್ನು ಭಾರದ ಮನಸ್ಸಿನಿಂದ ಬೀಳ್ಕೊಡುತ್ತಿದ್ದೇವೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ಮಾತನಾಡಿ, ನಾವು ಮಾಡುವ ಕೆಲಸ ನಮ್ಮ ನಿವೃತ್ತಿಯ ವೇಳೆ ಪ್ರತಿಬಿಂಬಿತವಾಗುತ್ತದೆ. ಶಿಕ್ಷಕರ ವೃತ್ತಿ ಅತ್ಯಂತ ಗೌರವಯುತವಾದ ವೃತ್ತಿ, ಇದನ್ನು ಅತ್ಯಂತ ಪ್ರಾಮಾಣಿಕತೆಯಾಗಿ ಮಾಡಿದವರು ಶಿಕ್ಷಕಿ ಲೀಲಾವತಿಯವರು, ಅವರ ಸೇವೆಗೆ ಸಾಕ್ಷಿಯಾಗಿ ಇಡೀ ಗ್ರಾಮ ಅವರನ್ನು ಬೀಳ್ಕೊಡುತ್ತಿರುವುದು ಹರ್ಷದಾಯಕವೆಂದರು.

ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ವಿ.ಜಿ.ದ್ಯಾವೇಗೌಡ ಮಾತನಾಡಿದರು.

ಇದೇ ವೇಳೆ ಗ್ರಾಮಸ್ಥರು ಮತ್ತು ಗ್ರಾಮದ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿದ್ಯಾಸಿರಿ ಯೂತ್ ಕ್ಲಬ್‌ನ ಹಳೇ ವಿದ್ಯಾರ್ಥಿಗಳು ಶಿಕ್ಷಕಿ ಲೀಲಾವತಿ ದಂಪತಿಯನ್ನು ಅಭಿನಂದಿಸಿದರು.

ಬಿಆರ್‌ಸಿ ಅನಿಲ್‌ ಕುಮಾರ್, ಕಸಬಾ ಹೋಬಳಿ ಶಿಕ್ಷಣ ಸಂಯೋಜಕ ಲೋಕೇಶ್, ಬಾಗೂರು ಶಿಕ್ಷಣ ಸಂಯೋಜಕ ಜಯಪ್ರಕಾಶ್, ಹಿರಿಸಾವೆ ಹೋಬಳಿ ಶಿಕ್ಷಣ ಸಂಯೋಜಿಕ ಶ್ರೀನಿವಾಸ್, ಟಿಎಪಿಸಿಎಂಎಸ್ ನ ಉಪಾಧ್ಯಕ್ಷೆ ಕೆಪಿಸಿಎಂಎಸ್ ಉಪಾಧ್ಯಕ್ಷ ತಾರಾಮಣಿ ಆನಂದ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ರವಿ ಮತ್ತು ಶಿಕ್ಷಕರಾದ ಗಾಯತ್ರಿ, ರಾಘವೇಂದ್ರ ಸೇರಿ ಇತರರು ಇದ್ದರು.