ಭಾವೈಕ್ಯದ ಮೊಹರಂ ಆಚರಣೆ

| Published : Jul 18 2024, 01:33 AM IST

ಸಾರಾಂಶ

ಅಮ್ಮಿನಬಾವಿಯಲ್ಲಿ ಸರ್ವ ಸಮಾಜಗಳ ಜನತೆಯ ನೇತೃತ್ವದಲ್ಲಿ ಬುಧವಾರ ಮೊಹರಂ ಹಬ್ಬದಾಚರಣೆ ನಡೆಯಿತು. ಬೆಳ್ಳಿಯ ಎರಡು ಪಾಂಜಾಗಳನ್ನು ಸ್ಥಾಪನೆ ಮಾಡಿ ಗ್ರಾಮದಲ್ಲಿ ಜಾನಪದ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ಧಾರವಾಡ:

ತ್ಯಾಗ ಮತ್ತು ಬಲಿದಾನದ ಸಂಕೇತವಾದ ಮೊಹರಂ ಹಬ್ಬವನ್ನು ಜಿಲ್ಲಾದ್ಯಂತ ಹಿಂದೂ-ಮುಸ್ಲಿಂ ಸಮುದಾಯದವರು ಭಾವೈಕ್ಯತೆಯಿಂದ ಆಚರಿಸಿದರು.

ಹಿಂದೂಗಳು ಸಹ ಆಚರಿಸುವ ಮುಸ್ಲಿಂ ಹಬ್ಬ ಮೊಹರಂ ಮಾತ್ರ. ದೇವರನ್ನು ಕೂರಿಸುವುದು, ಮೆರವಣಿಗೆ ಹಾಗೂ ನೀರಿಗೆ ಕಳುಹಿಸುವ ಪ್ರಕ್ರಿಯೆಯಿಂದ ಹಿಡಿದು ಇಡೀ ಹಬ್ಬವನ್ನು ಹಿಂದೂ-ಮುಸ್ಲಿಂ ಸೇರಿಕೊಂಡು ಆಚರಿಸುವುದು ವಿಶೇಷ. ನಗರಕ್ಕಿಂತ ಗ್ರಾಮೀಣದಲ್ಲಿ ಸಂಪೂರ್ಣ ಭಾವೈಕ್ಯದ ಹಬ್ಬ ಇದಾಗಿದ್ದು, ತಾಲೂಕಿನ ಉಪ್ಪಿನ ಬೆಟಗೇರಿ, ಅಮ್ಮಿನಬಾವಿ, ಯಾದವಾಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಬ್ಬ ಸಾಂಪ್ರದಾಯಿಕವಾಗಿ ಆಚರಣೆಗೊಂಡಿತು.

ರಾಜ್ಯದೆಲ್ಲೆಡೆ ಮೊಹರಂ ನಿಮಿತ್ತದ ಡೋಲಿಗಳನ್ನು ಕಾಗದ ಬಳಸಿ ತಯಾರಿಸುತ್ತಾರೆ. ಆದರೆ, ಉಪ್ಪಿನಬೆಟಗೇರಿಯಲ್ಲಿ ಅಲಿಂ ಫೀರಾ ಮಸೂತಿಯಲ್ಲಿ ಸಸಿಗಳಿಂದ ತಯಾರಿಸುವ ಪದ್ಧತಿ ವಿಶೇಷ. ವಿಜಯಪುರ ಬಿಟ್ಟರೆ ರಾಜ್ಯದ ಉಪ್ಪಿನ ಬೆಟಗೇರಿಯಲ್ಲಿ ಮಾತ್ರ ಈ ಪದ್ಧತಿ ಇದೆ. ವಿಜಯಪುರದಲ್ಲಿ ಮಣ್ಣಿನ ಲೇಪನದಲ್ಲಿ ಬೀಜ ನೆಟ್ಟು ಸಸಿ ಬೆಳೆಸಿದರೆ, ಉಪ್ಪಿನಬೆಟಗೇರಿಯಲ್ಲಿ ಜೈದರ ಹತ್ತಿಯ ಮೇಲೆ ಸಸಿಗಳನ್ನು ಬೆಳೆಸುತ್ತಾರೆ. ಮಣ್ಣಿನಲ್ಲಿ ಸಸಿಗಳು ಬೆಳೆಯುವುದು ಸಾಮಾನ್ಯ. ಆದರೆ, ಇಲ್ಲಿ ಹತ್ತಿಯಲ್ಲಿ ಸಸಿ ಬೆಳೆಸಲಾಗುತ್ತದೆ. ಹೀಗಾಗಿ ದೂರದ ಊರುಗಳಿಂದ ಈ ಸಸಿ ಡೋಲಿ ನೋಡಲು ಜನರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ದೇವರು ಹೊಳೆಗೆ ಹೋಗುವ ದಿನ ಬುಧವಾರ ಡೋಲಿ ಹೊತ್ತು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.

ಹಾಗೆಯೇ, ಅಮ್ಮಿನಬಾವಿಯಲ್ಲಿ ಸರ್ವ ಸಮಾಜಗಳ ಜನತೆಯ ನೇತೃತ್ವದಲ್ಲಿ ಬುಧವಾರ ಮೊಹರಂ ಹಬ್ಬದಾಚರಣೆ ನಡೆಯಿತು. ಬೆಳ್ಳಿಯ ಎರಡು ಪಾಂಜಾಗಳನ್ನು ಸ್ಥಾಪನೆ ಮಾಡಿ ಗ್ರಾಮದಲ್ಲಿ ಜಾನಪದ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಅದೇ ರೀತಿ ಉಳಿದ ಗ್ರಾಮಗಳಲ್ಲಿ ಪಂಜಾಗಳ ನಿರ್ಮಾಣ ಮಾಡಿ ಗ್ರಾಮದಲ್ಲಿ ಮೆರವಣಿಗೆ ಮೂಲಕ ಹೊಳೆಗೆ ಒಯ್ಯಲಾಯಿತು.

ಇನ್ನು, ನಗರದ ಇರಾನಿ ಮುಸ್ಲಿಂ ಸಮುದಾಯದ ಜನರು ತಮ್ಮ ಆರಾಧಕ ಹುಸೇನ ನಿಧನದ ಪ್ರತೀಕವಾಗಿ ಮೊಹರಂ ಹಬ್ಬದಲ್ಲಿ ಬ್ಲೇಡ್‌ನಿಂದ ಎದೆ ಚುಚ್ಚಿಕೊಂಡು ಪ್ರಾರ್ಥಿಸುತ್ತಾ ಆಚರಿಸಿದರು. ನಂತರ ಮೊಹರಂ ಹಬ್ಬದ ಪಂಜಾಗಳ ಮೆರವಣಿಗೆ ನಡೆಸಿದರು. ಜನತ್ ನಗರದಿಂದ ಹೊಸಯಲ್ಲಾಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಪಂಚಾಗಳ ಮೆರವಣಿಗೆ ನಡೆಯಿತು. ಮೆರವಣಿಗೆ ಉದ್ದಕ್ಕೂ ಎದೆ ಬಡಿದುಕೊಂಡು ದೇವರ ನಾಮ ಸ್ಮರಣೆಯಲ್ಲಿ ಭಕ್ತಿ ಸೇವೆ ಸಮರ್ಪಣೆ ಮಾಡಿದರು.