ಸಿರಿಧಾನ್ಯ ಮೌಲ್ಯವರ್ಧನೆಗೆ ಒತ್ತು: ಚೆಲುವರಾಯಸ್ವಾಮಿ ಶ್ಲಾಘನೆ

| Published : Jun 23 2024, 02:00 AM IST

ಸಿರಿಧಾನ್ಯ ಮೌಲ್ಯವರ್ಧನೆಗೆ ಒತ್ತು: ಚೆಲುವರಾಯಸ್ವಾಮಿ ಶ್ಲಾಘನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ವಿವಿಯಿಂದ ಅಭಿವೃದ್ಧಿಪಡಿಸಿದ ವಿವಿಧ ತಾಂತ್ರಿಕತೆಗಳ ಉತ್ಪನ್ನ, ಕೃಷಿ ಪರಿಕರಗಳನ್ನು ರೈತರು ಮತ್ತು ಸಾರ್ವಜನಿಕರಿಗೆ ಪರಿಚಯಿಸಲು ಸಂತೆ ಆಯೋಜಿಸಿರುವುದು ಸಂತಸದ ವಿಷಯ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಶ್ಲಾಘಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹೆಬ್ಬಾಳದ ಜಿಕೆವಿಕೆಯಲ್ಲಿ ಶನಿವಾರ ಆಯೋಜಿಸಿದ್ದ ‘ಕೃಷಿ ವಿವಿಯ ಉತ್ಪನ್ನಗಳ ಸಂತೆ’ ಉದ್ಘಾಟಿಸಿ ಅವರು ಮಾತನಾಡಿದರು. ವಿವಿಯಿಂದ ಅಭಿವೃದ್ಧಿಪಡಿಸಿದ ವಿವಿಧ ತಾಂತ್ರಿಕತೆಗಳ ಉತ್ಪನ್ನ, ಕೃಷಿ ಪರಿಕರಗಳನ್ನು ರೈತರು ಮತ್ತು ಸಾರ್ವಜನಿಕರಿಗೆ ಪರಿಚಯಿಸಲು ಸಂತೆ ಆಯೋಜಿಸಿರುವುದು ಸಂತಸದ ವಿಷಯ. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧನೆಗೆ ಒತ್ತು ನೀಡುತ್ತಿರುವ ಪರಿಣಾಮ ಮಾರುಕಟ್ಟೆ ವಿಸ್ತಾರಗೊಂಡು ಬೆಳೆಗಾರರಿಗೂ ಅನುಕೂಲವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷಿ ವಿವಿಯ ವ್ಯಾಪ್ತಿಗೊಳಪಡುವ ವಿವಿಧ ಕೃಷಿ ಸಂಶೋಧನಾ, ವಿಸ್ತರಣೆ ಹಾಗೂ ಕೃಷಿ ಮಹಾ ವಿದ್ಯಾನಿಲಯಗಳಲ್ಲಿ ಉತ್ಪಾದಿಸಲಾದ ಕೃಷಿ ಉತ್ಪನ್ನಗಳು, ತಂತ್ರಜ್ಞಾನ ಹಾಗೂ ತಾಂತ್ರಿಕತೆಯನ್ನು ಪರಿಚಯಿಸಲು ಮುಂದಾಗಿರುವುದು ಪ್ರಶಂಸನೀಯ ಎಂದರು.

328 ತಳಿ ಅಭಿವೃದ್ಧಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಡಾ। ಎಸ್‌.ವಿ.ಸುರೇಶ ಮಾತನಾಡಿ, ಬೆಂಗಳೂರು ಕೃಷಿ ವಿವಿಯು ಆರು ದಶಕದ ಸುದೀರ್ಘ ಅವಧಿಯಲ್ಲಿ 485 ತಂತ್ರಜ್ಞಾನ, 328 ತಳಿಗಳನ್ನು ಅಭಿವೃದ್ಧಿಪಡಿಸಿದೆ. ಈ ಎಲ್ಲ ತಳಿಗಳು ಇಂದಿಗೂ ನಾಡಿನ ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ವಿವರಿಸಿದರು.

ವಿವಿಯ ತಂತ್ರಜ್ಞಾನ, ತಾಂತ್ರಿಕತೆ, ಉತ್ಪನ್ನಗಳನ್ನು ಏಕಗವಾಕ್ಷಿ ಯೋಜನೆಯಡಿ ತಲುಪಿಸಲು ಸಹಾಯಕವಾಗುವಂತೆ ಪ್ರಪ್ರಥಮ ಬಾರಿಗೆ ಸಂತೆ ಆಯೋಜಿಸಲಾಗಿದೆ. ಅರ್ಧ ದಿನದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿರುವುದಾಗಿ ತಿಳಿಸಿದರು.