ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಈ ಭಾಗದ ರೈತರ ಜೀವನಾಡಿಯಾಗಿರುವ ಬೆಲ್ಲತ್ತ ಸಾನೆಕೆರೆ ಹಾಗೂ ಹೊಂಗನೂರು ಹಿರಿಕೆರೆಗಳನ್ನು ಅಭಿವೃದ್ಧಿ ಪಡಿಸಿ, ನಾಲೆಗಳ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸಲು ಬದ್ಧನಾಗಿದ್ದು, ಮೊದಲ ಹಂತದಲ್ಲಿ ಎರಡು ಕೆರೆಗಳಿಗೆ ತಲಾ ಒಂದು ಕೋಟಿ ರು. ಬಿಡುಗಡೆಯಾಗಿದೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.ತಾಲೂಕಿನ ಹೊಂಗನೂರು ಗ್ರಾಪಂ ವ್ಯಾಪ್ತಿಗೆ ಬರುವ ಬೆಲ್ಲತ್ತ ಸಾನೆಕೆರೆ ಹಾಗೂ ಹೊಂಗನೂರು ಹಿರಿಕೆರೆಗಳ ಅಭಿವೃದ್ಧಿ ಮತ್ತು ನಾಲೆಗಳ ದುರಸ್ತಿಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ಬಿಡುಗಡೆಯಾಗಿರುವ ೨ ಕೋಟಿ ರು. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ತಂದೆ ರಾಚಯ್ಯ ಅವರು ತಾಲೂಕಿನ ಅವಳಿ ಜಲಾಶಯಗಳ ನಿರ್ಮಾಣ, ಬೆಲ್ಲತ್ತ ಡ್ಯಾಂ, ಹೊಂಗನೂರು ಹಿರಿಕೆರೆಗಳನ್ನು ನಿರ್ಮಾಣ ಮಾಡಿ ಈ ಭಾಗದಲ್ಲಿ ಹೆಚ್ಚು ನೀರಾವರಿ ಪ್ರದೇಶವನ್ನಾಗಿಸಿದರು. ರೈತರು ಜಮೀನುಗಳಿಗೆ ನೀರು ಹರಿಸಿ ವರ್ಷಕ್ಕೆ ಎರಡು ಬೆಳೆಗಳನ್ನು ಬೆಳೆಯುವಂತೆ ಮಾಡಿದ್ದರು. ಈಗ ಅವರ ಮಗನಾಗಿ ನಾನು ಸಹ ಈ ಕೆರೆಗಳನ್ನು ಅಭಿವೃದ್ಧಿ ಪಡಿಸಿ, ಕ್ಷೇತ್ರದ ಜನರ ಅಭಿವೃದ್ಧಿಗೆ ಹೆಚ್ಚಿನ ಅದ್ಯತೆ ನೀಡಿದ್ದೇನೆ ಎಂದರು.ಮಳೆ ಕಡಿಮೆಯಾಗಿರುವುದರಿಂದ ಕೆರೆಗಳು ತುಂಬುತ್ತಿಲ್ಲ. ಇವುಗಳಿಗೆ ನೀರು ಸರಾಗವಾಗಿ ಸೇರುವಂತೆ ಮಾಡುವುದು ಹಾಗೂ ಫೀಡರ್ ಕಾಲುವೆಗಳ ಮುಖಾಂತರ ಈ ಭಾಗದ ರೈತರ ಜೀವನವನ್ನು ಹಸನುಗೊಳಿಸುವುದಾಗಿ ತಿಳಿಸಿದರು. ಸಣ್ಣ ನೀರಾವರಿ ಸಚಿವರಾಗಿರುವ ಬೋಸರಾಜ್ ಅವರು ಇತ್ತೀಚೆಗೆ ಹೊಂಗನೂರು ಹಿರಿಕೆರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ಬಳಿಕ ಬೆಲ್ಲತ್ತ ಮತ್ತು ಹಿರಿಕೆರೆಗಳ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಅಧಿಕಾರಿಗಳು ೨೪ ಕೋಟಿ ರು.ಗಳ ಡಿಪಿಆರ್ ಸಲ್ಲಿಸಿದ್ದರು. ಇದನ್ನು ಅನುಮೋದಿಸಿರುವ ಸಚಿವರು ಮೊದಲ ಹಂತದಲ್ಲಿ ಎರಡು ಕೆರೆಗಳ ಅಭಿವೃದ್ಧಿಗೆ ತಲಾ ಒಂದು ಕೋಟಿ ರು. ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದರು.
ಗ್ರಾಮದ ಮುಂಭಾಗದಲ್ಲಿರುವ ಬಿಳಿಕೆರೆಯನ್ನು ಅಭಿವೃದ್ಧಿಪಡಿಸಲು, ಜಂಗಲ್ ತೆರವು ಮಾಡಿ ನೀರು ತುಂಬಿಸಲು ಕ್ರಮ ವಹಿಸುತ್ತೇವೆ. ರೇಚಂಬಳ್ಳಿಯಿಂದ ಮುರಟಿ ಪಾಳ್ಯದವರೆಗೆ ರಸ್ತೆ ಅಭಿವೃದ್ಧಿ, ಹುಂಡಿ ಭಾಗದ ರಸ್ತೆಯಿಂದ ಮೇಲ್ಭಾಗದ ಜಮೀನುಗಳ ರಸ್ತೆ ಅಭಿವೃದ್ಧಿ, ಹೊಂಗನೂರು ಮುಖ್ಯರಸ್ತೆಯಿಂದ ನಂಜರಾಜ ಗ್ರಾಮದವರೆಗೆ ರಸ್ತೆ ಡಾಂಬರೀಕರಣ ಮಾಡುವುದು ಸೇರಿದಂತೆ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಅನುದಾನ ಲಭ್ಯತೆ ಆಧಾರದಲ್ಲಿ ಈ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗತ್ತಿಕೊಳ್ಳುವುದಾಗಿ ತಿಳಿಸಿದರು.ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಹೊಂಗನೂರು ಚಂದ್ರು ಮಾತನಾಡಿ, ಹೊಂಗನೂರು ಗ್ರಾಮವು ಮಾಜಿ ರಾಜ್ಯಪಾಲ ದಿ. ಬಿ.ರಾಚಯ್ಯ ಅವರು ಹಾಗೂ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಅಚ್ಚುಮೆಚ್ಚು. ಅದೇ ರೀತಿ ಗ್ರಾಮಸ್ಥರು ಸಹ ಅವರಿಗೆ ಆಭಾರಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಶೇ.೯೦ ರಷ್ಟು ಮತಗಳನ್ನು ಅವರಿಗೆ ನೀಡಿದ್ದಾರೆ. ಅದರಂತೆ ಗ್ರಾಮದ ಅಭಿವೃದ್ಧಿಗೆ ಅವರು ಶ್ರಮಿಸುತ್ತಿದ್ದಾರೆ. ಸುಮಾರು ೫೦ ವರ್ಷಗಳ ಹಿಂದೆ ಅವರ ತಂದೆಯವರ ಕಾಲದಲ್ಲಿ ನಿರ್ಮಾಣವಾಗಿದ್ದ ಕೆರೆಗಳನ್ನು ಈಗ ಶಾಸಕರು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಸಚಿವರಾಗಿ ಬರಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಹೊಂಗನೂರು ಗ್ರಾಪಂ ಅಧ್ಯಕ್ಷ ನವೀನ್‌ಕುಮಾರ್, ಸದಸ್ಯರಾದ ದಿವಾಕರ್, ರಂಗಸ್ವಾಮಿ ನಾಯಕ, ಚಾಮದಾಸ್, ಶಂಕರ್, ಕವಿತಾ ನಟರಾಜು, ಮಣಿಕಂಠಸ್ವಾಮಿ, ಮೋಹನ್, ಮುಖಂಡರಾದ ಸಿ.ಮಹದೇವ್, ಪುಟ್ಟಸ್ವಾಮಿ, ವೀರಣ್ಣ, ನಾಗಯ್ಯ, ಶ್ರೀಧರ್, ರವಿ, ಕಾಳೇಗೌಡ, ಜಡೇಸ್ವಾಮಿ, ಸಿದ್ದಲಿಂಗಸ್ವಾಮಿ, ಚಿನ್ನಸ್ವಾಮಿ, ಕುನ್ನನಾಯಕ, ಮೋಹನ್, ಮಹೇಶ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ನಿರಂಜನ್, ಇಂಜಿನಿಯರ್ ಅಭಿಲಾಷ್, ಗುತ್ತಿಗೆದಾರ ಮಹೇಶ್, ಶಾಸಕರ ಅಪ್ತ ಸಹಾಯಕ ಹೊಂಗನೂರು ಚೇತನ್ ಇದ್ದರು.