ಗ್ರಾಪಂ ಕೇಂದ್ರದಲ್ಲಿ ಸೌಲಭ್ಯಕ್ಕೆ ಒತ್ತು

| Published : Aug 04 2025, 12:15 AM IST

ಸಾರಾಂಶ

ಹಳ್ಳಿಗಳಿಂದ ವಿವಿಧ ಕೆಲಸ ಕಾರ್ಯಗಳಿಗಾಗಿ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಆಗಮಿಸುವ ಸಾರ್ವಜನಿಕರಿಗೆ ಗ್ರಾಪಂ ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಇದರ ಭಾಗವಾಗಿ ಗ್ರಾಪಂ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ತಾಲೂಕಿನ ತಿರುಮಣಿ ಗ್ರಾಮದಲ್ಲಿ ಗ್ರಾಪಂ ನೂತನ ಕಟ್ಟಡ ಕಾಮಗಾರಿ, ಜೆಪಿ ನಗರದ ದೇವಾಲಯದ ಜೀರ್ಣೋದ್ದಾರಕ್ಕೆ ಗುದ್ದಲಿ ಪೂಜೆ ಹಾಗೂ ತಿರುಮಣಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೆರವೇರಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಹಳ್ಳಿಗಳಿಂದ ವಿವಿಧ ಕೆಲಸ ಕಾರ್ಯಗಳಿಗಾಗಿ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಆಗಮಿಸುವ ಸಾರ್ವಜನಿಕರಿಗೆ ಗ್ರಾಪಂ ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಇದರ ಭಾಗವಾಗಿ ಗ್ರಾಪಂ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ ಎಂದರು.

ಅಂಗನವಾಡಿ ಕಟ್ಟಡ ಉದ್ಘಾಟನೆ

ಈ ಹಿಂದೆ ಹಳ್ಳಿಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರಿಂದ ಬಂದ ಮನವಿಯಂತೆ ಈ ದಿನ ಬೀಚಗಾನಹಳ್ಳಿ ಕ್ರಾಸ್ ನಲ್ಲಿರುವ ಜಯಂತಿ ಗ್ರಾಮದಲ್ಲಿ 5 ಲಕ್ಷ ವೆಚ್ಚದಲ್ಲಿ ದೇವಾಲಯ ಅಭಿವೃದ್ಧಿ ಕಾಮಗಾರಿ, ತಿರುಮಣಿ ಗ್ರಾಮದಲ್ಲಿ 16.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ 32 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾಗಿ ಹೇಳಿದರು.

ಕಟ್ಟಡ ಕಾಮಗಾರಿ ಗುಣಮಟ್ಟ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಆಗಾಗ ಪರೀಕ್ಷೆ ಮಾಡುವಂತೆ ಪಂಚಾಯತಿ ಅಧ್ಯಕ್ಷರು ಸೇರಿದಂತೆ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿಗ್ಬತ್‌ವುಲ್ಲಾ, ತಾಪಂ ಇಒ ನಾಗಮಣಿ, ಗ್ರಾಪಂ ಅಧ್ಯಕ್ಷೆ ಮಮತಾ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೆ.ವಿ ನಾರಾಯಣಸ್ವಾಮಿ, ಟಿಎಚ್ ಒ ಅಕ್ಷಯ್ ಶ್ರೀನಿವಾಸ್, ಪಿಡಿಒ ಶ್ರೀನಿವಾಸ, ಕಾಂಗ್ರೆಸ್ ಸ್ಥಳೀಯ ಮುಖಂಡರು, ತಿರುಮಣಿ ಗ್ರಾಮದ ಮುಖಂಡರು, ಗ್ರಾಪಂ ಸದಸ್ಯರು, ಗ್ರಾಪಂ ಸಿಬ್ಬಂದಿ, ಸಾರ್ವಜನಿಕರು ಹಾಗೂ ಇತರರು ಹಾಜರಿದ್ದರು.