ರೈತ ಮಹಿಳೆಯರ ಜೀವನೋಪಾಯ ಸುಧಾರಣೆಗೆ ಒತ್ತು: ಶಶಿಕಾಂತ ಶಿವಪೂರೆ

| Published : Sep 14 2025, 01:05 AM IST

ಸಾರಾಂಶ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಹಿಳಾ ರೈತರ ಸಬಲೀಕರಣ, ಶಾಶ್ವತ ಕೃಷಿ ಪದ್ಧತಿಗಳ ಬಲವರ್ಧನೆ ಮತ್ತು ಗ್ರಾಮೀಣ ಜೀವನೋಪಾಯ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ.

ಮುದ್ದು ಮಲ್ಲೇಶ್ವರ ಸಂಜೀವಿನಿ ಕಂಪನಿಯ 2ನೇ ವಾರ್ಷಿಕ ಮಹಾಸಭೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಹಿಳಾ ರೈತರ ಸಬಲೀಕರಣ, ಶಾಶ್ವತ ಕೃಷಿ ಪದ್ಧತಿಗಳ ಬಲವರ್ಧನೆ ಮತ್ತು ಗ್ರಾಮೀಣ ಜೀವನೋಪಾಯ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಶಿಕಾಂತ ಶಿವಪೂರೆ ಹೇಳಿದರು.

ತಾಲೂಕಿನ ಮೋಕಾ ಗ್ರಾಮದ ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ- ಬೆಂಗಳೂರು ಹಾಗೂ ಜಿಪಂ, ತಾಪಂ ಬಳ್ಳಾರಿ ಮತ್ತು ಮೋಕಾ ಗ್ರಾಪಂ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮುದ್ದು ಮಲ್ಲೇಶ್ವರ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯ 2ನೇ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ ಮಾತನಾಡಿದರು. ಮುದ್ದು ಮಲ್ಲೇಶ್ವರ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯಲ್ಲಿ ಒಟ್ಟು 6 ಗ್ರಾಪಂನ 1000 ಜನ ಮಹಿಳೆಯರು ಷೇರುದಾರರಾಗಿದ್ದು, 10 ನಿರ್ದೇಶಕರನ್ನು ಒಳಗೊಂಡಿದೆ. ಕಂಪನಿಯು ಮುಖ್ಯ ಕಚೇರಿಯ ಮೋಕಾ ಗ್ರಾಪಂಯಲ್ಲಿ ಸ್ಥಾಪಿತವಾಗಿದೆ. ಪ್ರತಿಯೊಬ್ಬ ಷೇರುದಾರರು ತಲಾ ₹1500 ಬಂಡವಾಳ ಹೂಡಿದ್ದು, ಒಟ್ಟು ₹15 ಲಕ್ಷ ಷೇರು ಬಂಡವಾಳ ಕಂಪನಿಯು ಹೊಂದಿದೆ. ಕಂಪನಿಯ ಎಲ್ಲ ಮಹಿಳೆಯರು ಮಾಲೀಕರಿದ್ದಂತೆ ಎಂದರು.

ಕಾರ್ಯಕ್ರಮದಲ್ಲಿ ಸಂಜೀವಿನಿ ಮಾಸಿಕ ಸಂತೆ ಆಯೋಜಿಸಲಾಗಿತ್ತು. ಮೋಕಾ ಗ್ರಾಪಂ ಅಧ್ಯಕ್ಷರಾದ ಈರಾಳು ಫಕೀರಮ್ಮ, ಜಿಪಂ ಸಹಾಯಕ ಆಡಳಿತ ಅಧಿಕಾರಿ ಬಸವರಾಜ ಹಿರೇಮಠ, ಬಳ್ಳಾರಿ ತಾಪಂ ಇಒ ಶ್ರೀಧರ ಐ. ಬಾರಿಕರ್, ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರೋಜಾ, ಮೋಕಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜ್ಯೋತಿ ಐ., ಮೋಕಾ ಗ್ರಾಪಂ ಅಭಿವೃದ್ಧಿ ಅಧಿಕಾರಿ ವೆಂಕಟಮ್ಮ, ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ, ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ್ ಪಿ., ರಘು ವರ್ಮ, ಅಪೂರ್ವ ಕಾಂತರಾಜು ಕೆ.ಕೆ., ಬಳ್ಳಾರಿ ತಾಪಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ವಿ. ಗಂಗಾಧರ, ಎಂಕೆಪಿಸಿ ಸಿಇಒ ಬಸವರಾಜ, ಕಂಪನಿಯ ಅಧ್ಯಕ್ಷೆ ರಾಜೇಶ್ವರಿ ಭಾಗವಹಿಸಿದ್ದರು.