ಹಿಂದುಳಿದ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಗ್ರಾಮೀಣ ರಸ್ತೆಗಳ ಸುಧಾರಣೆ ಮೊದಲ ಹೆಜ್ಜೆಯಾಗಬೇಕು. ಇದರಿಂದ ಕೃಷಿ ಅವಲಂಬಿತ ಜನತೆ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಜೊತೆಗೆ ರೈತರಿಗೆ ಅನುಕೂಲವಾಗುವಂತೆ ನೀರಾವರಿ ಯೋಜನೆಗಳಿಗೆ ಒತ್ತು ನೀಡಿ ಮತ್ತಷ್ಟು ಬಲಪಡಿಸಬೇಕು ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಬೀಳಗಿ ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಿಂದುಳಿದ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಗ್ರಾಮೀಣ ರಸ್ತೆಗಳ ಸುಧಾರಣೆ ಮೊದಲ ಹೆಜ್ಜೆಯಾಗಬೇಕು. ಇದರಿಂದ ಕೃಷಿ ಅವಲಂಬಿತ ಜನತೆ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಜೊತೆಗೆ ರೈತರಿಗೆ ಅನುಕೂಲವಾಗುವಂತೆ ನೀರಾವರಿ ಯೋಜನೆಗಳಿಗೆ ಒತ್ತು ನೀಡಿ ಮತ್ತಷ್ಟು ಬಲಪಡಿಸಬೇಕು ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಬೀಳಗಿ ಶಾಸಕ ಜೆ.ಟಿ. ಪಾಟೀಲ ಹೇಳಿದರು.

ನೂತನ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಜರುಗಿದ ಡಾ.ಡಿ.ಎಂ. ನಂಜುಂಡಪ್ಪ ವರದಿಯ ಪ್ರಾದೇಶಿಕ ಅಸಮತೋಲನ ನಿವಾರಣೆ ಉನ್ನತಾಧಿಕಾರ ಸಮಿತಿಯ ಬಾಗಲಕೋಟೆ ಜಿಲ್ಲಾಮಟ್ಟದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಹಿಂದುಳಿದ, ಅತಿ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ತಾಲೂಕುಗಳೆಂದು ಗುರುತಿಸುವುದರೊಂದಿಗೆ ಹಂಚಿಕೆ ಕೂಡ ಆಗಬೇಕು. ಮುಖ್ಯವಾಗಿ ಆ ತಾಲೂಕಿನ ಶಿಕ್ಷಣ ಕ್ಷೇತ್ರವನ್ನು ಗುಣಮಟ್ಟದಿಂದ ಕೂಡಿರುವಂತೆ ಅಭಿವೃದ್ಧಿಪಡಿಸಬೇಕು. ಜಿಲ್ಲೆಯಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯ ಕೇವಲ ಪದವೀಧರರನ್ನು ನೀಡುವ ಕೆಲಸವನ್ನಷ್ಟೇ ಮಾಡದೆ ರೈತರಿಗೆ ಬೆಳೆಗಳ ಕುರಿತು ಸಂಪೂರ್ಣ ಮಾಹಿತಿ ಹಾಗೂ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮಾತನಾಡಿ, ಒಂದು ತಾಲೂಕಿನಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲ ಹಾಗೂ ನೈಸರ್ಗಿಕ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲು ನೀಡಿದ ಮಾದರಿಯಂತೆ ಹಿಂದುಳಿದ ತಾಲೂಕುಗಳಿಗೂ ಮೀಸಲು ವ್ಯವಸ್ಥೆ ತರಲು ಸರ್ಕಾರ ಗಮನಹರಿಸಬೇಕು ಎಂದು ಸಲಹೆ ನೀಡಿದ ಅವರು, ಕೇರಳ ಮಾದರಿಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಬೆಳೆಸಿದರೆ ಬದಾಮಿ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ ಗ್ರಾಮೀಣ ಪ್ರದೇಶದ ಜನತೆಗೆ ಡಿಜಿಟಲ್ ಮಾರುಕಟ್ಟೆ ಬಗ್ಗೆ ತರಬೇತಿ ನೀಡಬೇಕು. ಚೆಕ್ ಡ್ಯಾಮ್‌ಗಳ ನಿರ್ಮಾಣದ ಮೂಲಕ ನೀರಾವರಿ ಸುಧಾರಿಸಿದರೆ ರೈತರಿಗೆ ದೊಡ್ಡ ಮಟ್ಟದ ಸೌಲಭ್ಯ ಒದಗಿಸಬಹುದಾಗಿದೆ, ಎಂದು ಹೇಳಿದರು.

ಪ್ರಾದೇಶಿಕ ಅಸಮತೋಲನ ನಿವಾರಣೆ ಉನ್ನತಾಧಿಕಾರ ಸಮಿತಿ ಸದಸ್ಯ ಕಾರ್ಯದರ್ಶಿ ಡಾ.ಎಂ.ವಿಶಾಲ ಅವರು ಪ್ರಮುಖವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ತೋಟಗಾರಿಕೆ ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಅರಣ್ಯಾಧಿಕಾರಿ ರುಥ್ರೇನ್, ಸಮಿತಿಯ ಸದಸ್ಯರಾಗಿರುವ ಸಂಗೀತ ಕಟ್ಟಿಮನಿ, ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕ ಪ್ರೊ.ಸಿದ್ದಪ್ಪ ಟಿ. ಬಾಗಲಕೋಟೆ ಸೇರಿದಂತೆ ಇತರರು ಇದ್ದರು.