ಗ್ರಾಮೀಣ ಶಾಲೆ, ಕಾಲೇಜಲ್ಲಿ ಕನ್ನಡ ಸಾಹಿತ್ಯಕ್ಕೆ ಒತ್ತು: ಶರಣಪ್ಪ ಅಂಗಡಿ

| Published : Dec 24 2023, 01:45 AM IST

ಗ್ರಾಮೀಣ ಶಾಲೆ, ಕಾಲೇಜಲ್ಲಿ ಕನ್ನಡ ಸಾಹಿತ್ಯಕ್ಕೆ ಒತ್ತು: ಶರಣಪ್ಪ ಅಂಗಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನಾಡು-ನುಡಿಯ ಏಳಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದ ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಶಿಕ್ಷಕ ಶಶಿಧರಸ್ವಾಮಿ, ಪುಸ್ತಕ ಎಂದರೆ ಜ್ಞಾನ ಭಂಡಾರ.

ಕಾರಟಗಿ: ಗ್ರಾಮೀಣ ಪ್ರದೇಶಗಳ ಎಲ್ಲ ಶಾಲಾ-ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಹೆಚ್ಚು ಕಾರ್ಯಕ್ರಮಗಳು ನಡೆದರೆ ಮಾತ್ರವೇ ಮಕ್ಕಳಲ್ಲಿ ಕನ್ನಡ ಮತ್ತು ಕನ್ನಡ ಸಾಹಿತ್ಯಾಸಕ್ತಿ ಹುಟ್ಟಿಕೊಳ್ಳಲು ಸಾಧ್ಯ ಎಂದು ಖಾಸಗಿ ಶಾಲಾ ಒಕ್ಕೂಟದ ತಾಲೂಕಾಧ್ಯಕ್ಷ ಶರಣಪ್ಪ ಅಂಗಡಿ ಹೇಳಿದರು.ಇಲ್ಲಿನ ಜೆ.ಪಿ. ನಗರದ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್‌ನ ಆವರಣದಲ್ಲಿ ಕಸಾಪ ಘಟಕ ಆಯೋಜಿಸಿದ್ದ ಕನ್ನಡ ಕಾರ್ತಿಕೋತ್ಸವ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ವಿಸ್ತರಿಸುವ ಅವಶ್ಯಕತೆ ಇನ್ನು ಇದೆ. ಈ ನಿಟ್ಟಿನಲ್ಲಿ ತಾಲೂಕು ಘಟಕ ಗ್ರಾಮೀಣ ಭಾಗದಲ್ಲೂ ಸಾಹಿತ್ಯಿಕ ಚಟುವಟಿಕೆಗಳನ್ನು ವಿಸ್ತರಿಸುವ ಮೂಲಕ ಅಲ್ಲಿನ ಮಕ್ಕಳಲ್ಲೂ ಕನ್ನಡ ಸಂಸ್ಕೃತಿ, ಸಾಹಿತ್ಯ, ನಾಡು-ನುಡಿಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಖಾಸಗಿ ಶಾಲೆಗಳು ಇನ್ನು ಮುಂದೆ ಕನ್ನಡ ಸಾಹಿತ್ಯದ ಎಲ್ಲ ಕಾರ್ಯಕ್ರಮಗಳಿಗೆ ಕೈಜೋಡಿಸುತ್ತದೆ ಎಂದು ಭರವಸೆ ನೀಡಿದರು.ಕನ್ನಡ ನಾಡು-ನುಡಿಯ ಏಳಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದ ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಶಿಕ್ಷಕ ಶಶಿಧರಸ್ವಾಮಿ, ಪುಸ್ತಕ ಎಂದರೆ ಜ್ಞಾನ ಭಂಡಾರ. ಎಂದೂ ಕರಗದ ಸಂಪತ್ತು. ಮನುಷ್ಯನ ಆರೋಗ್ಯಕರ ವಿಕಸನದಲ್ಲಿ ಪುಸ್ತಕಗಳ ಪಾತ್ರ ಅತ್ಯಂತ ಮಹತ್ವದ್ದು ಎಂದರು.ಮಕ್ಕಳು ಸದಾ ಮೊಬೈಲ್, ಟಿವಿ ನೋಡುತ್ತಾ ಕಾಲ ಕಳೆಯಲು ಹೆಚ್ಚು ಇಷ್ಟಪಡುತ್ತಾರೆ. ಇದು ಆತಂಕಕಾರಿ ಬೆಳವಣಿಗೆ. ಪುಸ್ತಕಗಳನ್ನು ಓದುವ ತಾಳ್ಮೆ ಇಂದಿನ ಮಕ್ಕಳಲ್ಲಿ ಕಾಣದಾಗಿದೆ. ಇದಕ್ಕೆ ಮನೆಯ ಪರಿಸರವೂ ಕಾರಣವಾದೀತು. ಮನೆಯಲ್ಲಿ ದೊಡ್ಡವರಿಗೆ ಪುಸ್ತಕ ಓದುವ ಹವ್ಯಾಸ ಇಲ್ಲದಿರುವಾಗ ಅದು ಮಕ್ಕಳಿಗೆ ಹೇಗೆ ತಾನೇ ಬರಲು ಸಾಧ್ಯ? ಪಠ್ಯ ಪುಸ್ತಕಗಳ ಹೊರತಾಗಿ ಒಳ್ಳೆಯ ಅನ್ಯ ಪುಸ್ತಕಗಳನ್ನು ಓದುವುದರಿಂದ ಮಕ್ಕಳಲ್ಲಿ ಭಾಷಾ ಜ್ಞಾನ, ಪದಗಳ ಪರಿಚಯ, ಸಾಹಿತ್ಯದಲ್ಲಿ ಆಸಕ್ತಿ ಬೆಳೆಯುತ್ತದೆ. ನೈತಿಕತೆ, ಸೃಜನಶೀಲತೆ ಮತ್ತು ಪ್ರಬುದ್ಧತೆ ಅರಳಲು ಸಾಧ್ಯವಾಗುತ್ತದೆ. ಯಾವುದೇ ವಿಷಯದ ಬಗ್ಗೆ ವಿಶ್ಲೇಷಿಸುವ, ಸ್ವಂತ ಅಭಿಪ್ರಾಯಗಳನ್ನು ವ್ಯೆಕ್ತಪಡಿಸುವ ಸಾಮರ್ಥ್ಯವನ್ನು ಹೊಂದಬಹುದಾಗಿದೆ. ಭಾಷಾಪ್ರೇಮ ಇಮ್ಮಡಿಯಾಗುತ್ತದೆ ಎಂದರು.ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸರ್ದಾರ ಅಲಿ ಮತ್ತು ಚೆನ್ನಬಸಪ್ಪ ವಕ್ಕಳದ ಮಾತನಾಡಿದರು.ಈ ಸಂದರ್ಭದಲ್ಲಿ ಸಿಆರ್‌ಪಿ ಭೀಮಣ್ಣ ಕರಡಿ, ರಮೇಶ್ ಕುಕನೂರು, ಮಲ್ಲಿಕಾರ್ಜುನ ಯತ್ನಟ್ಟಿ ಇದ್ದರು. ಕಸಾಪ ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ್ ಚಿಕೇನಕೊಪ್ಪ, ಶಿಕ್ಷಕಿ ಪಲ್ಲವಿ ಕಾರ್ಯಕ್ರಮ ನಿರ್ವಹಿಸಿದರು.