ನೈಸರ್ಗಿಕ ಕೃಷಿಗೆ ಒತ್ತು ನೀಡಿ: ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌

| Published : Mar 05 2024, 01:35 AM IST / Updated: Mar 05 2024, 09:15 AM IST

ನೈಸರ್ಗಿಕ ಕೃಷಿಗೆ ಒತ್ತು ನೀಡಿ: ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿಯಲ್ಲಿ ಆಹಾರೋತ್ಪಾದನೆ ಹೆಚ್ಚಿಸಲು ರಸಗೊಬ್ಬರ, ಕೀಟ ನಾಶಕ ಅಧಿಕವಾಗಿ ಬಳಸುತ್ತಿರುವುದು ಆತಂಕಕಾರಿಯಾಗಿದ್ದು, ಇದರಿಂದ ಮಣ್ಣು, ನೀರು, ಪರಿಸರ ಕಲುಷಿತಗೊಳ್ಳುವುದರ ಜೊತೆಗೆ ಮಾನವರ ಆರೋಗ್ಯದ  ಪರಿಣಾಮ ಉಂಟಾಗಲಿದೆ. ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು ಎಂದು ರಾಜ್ಯಪಾಲ  ಗೆಹಲೋತ್‌ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೃಷಿಯಲ್ಲಿ ಆಹಾರೋತ್ಪಾದನೆ ಹೆಚ್ಚಿಸಲು ರಸಗೊಬ್ಬರ, ಕೀಟ ನಾಶಕ ಅಧಿಕವಾಗಿ ಬಳಸುತ್ತಿರುವುದು ಆತಂಕಕಾರಿಯಾಗಿದ್ದು, ಇದರಿಂದ ಮಣ್ಣು, ನೀರು, ಪರಿಸರ ಕಲುಷಿತಗೊಳ್ಳುವುದರ ಜೊತೆಗೆ ಮಾನವರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಆದ್ದರಿಂದ ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಕರೆ ನೀಡಿದರು.

ಸೋಮವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೈಸರ್ಗಿಕ ಕೃಷಿಯಲ್ಲಿ ರಾಸಾಯನಿಕ, ಕೀಟನಾಶಕಗಳನ್ನು ಬಳಸುವುದಿಲ್ಲ. 

ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನೇ ಕೀಟನಾಶಕಗಳಾಗಿ ಉಪಯೋಗಿಸಲಾಗುತ್ತದೆ. ಇದರಿಂದಾಗಿ ಭೂಮಿಯ ಫಲವತ್ತತೆ ಮತ್ತು ಉತ್ಪಾದಕತೆ ಹೆಚ್ಚುತ್ತದೆ. ಸಾವಯವ ಗೊಬ್ಬರಗಳ ಬಳಕೆ ಭೂಮಿಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಉತ್ಪಾದನಾ ವೆಚ್ಚದಲ್ಲಿ ಕಡಿತವಾಗಿ, ಆದಾಯವನ್ನೂ ಹೆಚ್ಚಿಸುತ್ತದೆ ಎಂದರು.

ಮಣ್ಣಿನ ಆರೋಗ್ಯ ಮುಖ್ಯ: ಬೆಳೆ ಉತ್ಪಾದಕತೆ ಮತ್ತು ಆಹಾರದ ಗುಣಮಟ್ಟ ಮಣ್ಣಿನ ಆರೋಗ್ಯವನ್ನು ಅವಲಂಬಿಸಿರುತ್ತದೆ. 

ಇದನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಪ್ರಾರಂಭಿಸಿದರು, ದೇಶಾದ್ಯಂತ 28 ಕೋಟಿ ರೈತ ಕುಟುಂಬಕ್ಕೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಪದವಿ, ಸ್ನಾತಕೋತ್ತರ ಪದವಿ, ಡಾಕ್ಟರೇಟ್‌ ಪ್ರದಾನ ಮಾಡಿದರು. ಕೃಷಿಯಲ್ಲಿ ಸಾಧನೆ ಮಾಡಿರುವ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದ ಎಂ.ಸಿ.ರಂಗಸ್ವಾಮಿ ಅವರಿಗೆ ಗೌರವ ಡಾಕ್ಟರೆಟ್‌ ನೀಡಿ ಗೌರವಿಸಲಾಯಿತು. 

ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮಹಾ ನಿರ್ದೇಶಕ ಡಾ। ಹಿಮಾಂಶು ಪಾಠಕ್, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ। ಎಸ್.ವಿ.ಸುರೇಶ ಹಾಜರಿದ್ದರು.

ಕೃಷಿ ನವೋದ್ಯಮ ಪ್ರಾರಂಭಿಸಿ: ಕೃಷಿ ಸಚಿವ ಚಲುವರಾಯಸ್ವಾಮಿ
ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರವು ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಕೈಗೆಟುಕುವ ಬೆಲೆಯಲ್ಲಿ ಅಗತ್ಯವಿರುವ ಸಾಧನಗಳನ್ನು ಒದಗಿಸಿ ರೈತರಿಗೆ ಬೆಂಬಲ ನೀಡಲಾಗುತ್ತದೆ. 

ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಬೆಲೆ ಇದೆ ಎಂಬುದನ್ನು ಕಂಡುಕೊಂಡರೆ ರೈತರ ಆದಾಯವನ್ನು ದ್ವಿಗುಣಗೊಳ್ಳಲಿದೆ. ಪದವೀಧರ ವಿದ್ಯಾರ್ಥಿಗಳು ಈ ದಿಕ್ಕಿನಲ್ಲಿ ಕೃಷಿ ನವೋದ್ಯಮಗಳನ್ನು ಪ್ರಾರಂಭಿಸಲು ಕಾರ್ಯ ಪ್ರವೃತ್ತರಾಗಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಭತ್ತದ ಹಿಂಗಾರು ಬೆಳೆಯ ನಂತರ ಭೂಮಿಯ ತೇವಾಂಶ ಬಳಸಿಕೊಂಡು ದ್ವಿದಳ ಧಾನ್ಯ, ಎಣ್ಣೆ ಕಾಳು ಬೆಳೆಗಳನ್ನು ಬೆಳೆದರೆ ಧಾನ್ಯಗಳ ಉತ್ಪಾದನೆ ಹೆಚ್ಚಿಸಬಹುದು. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಕಾರ್ಯ ಪ್ರವೃತ್ತರಾಗಬೇಕು. 

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ನಿರುದ್ಯೋಗಿಗಳಿಗೆ ವಿವಿಧ ಬೆಳೆಯ ಬೀಜಗಳನ್ನು ಉತ್ಪಾದಿಸುವ ಕೌಶಲ್ಯ ತರಬೇತಿ ನೀಡಬೇಕು. ನೂತನ ಎಣ್ಣೆ ಕಾಳು ಬೆಳೆಗಳ ತಳಿಗಳನ್ನು ಅಭಿವೃದ್ದಿಪಡಿಸಿ ಬಿಡುಗಡೆ ಮಾಡಬೇಕು ಎಂದು ಸೂಚಿಸಿದರು.