ಸಮನ್ವಯತೆಯಿಂದ ಪಕ್ಷ ಸಂಘಟನೆಗೆ ಒತ್ತು: ಬಸವರಾಜ ಪಾಟೀಲ್‌ ಇಟಗಿ

| Published : Apr 08 2024, 01:04 AM IST

ಸಮನ್ವಯತೆಯಿಂದ ಪಕ್ಷ ಸಂಘಟನೆಗೆ ಒತ್ತು: ಬಸವರಾಜ ಪಾಟೀಲ್‌ ಇಟಗಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರಿನ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಾರ್ಯಾಲಯದ ಆವರಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಡಿಸಿಸಿ ಹೊಸ ಅಧ್ಯಕ್ಷ ಬಸವರಾಜ ಪಾಟೀಲ್‌ ಇಟಗಿಯವರು ಅಧಿಕಾರ ಸ್ವೀಕರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಪಕ್ಷದಲ್ಲಿರುವ ಆಂತರೀಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರ ಸಲಹೆ, ಸಹಕಾರ, ಮಾರ್ಗದರ್ಶನದೊಂದಿಗೆ ಸಮನ್ವಯತೆಯಿಂದ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿಕೊಂಡು ಹೋಗುವುದಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ್‌ ಇಟಗಿ ಆಶಯ ವ್ಯಕ್ತಪಡಿಸಿದರು.

ಸ್ಥಳೀಯ ಡಿಸಿಸಿ ಕಚೇರಿ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು. ಸಮಾಜದಲ್ಲಿನ ಕುಟುಂಬಗಳಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ ಅದೇ ರೀತಿ ರಾಜಕೀಯ ಪಕ್ಷಗಳಲ್ಲಿ ಮುಖಂಡರುಗಳ ನಡುವೆ ವಿಭಿನ್ನವಾದ ಆಲೋಚನೆಗಳಿರುತ್ತವೆ ಅವುಗಳನ್ನು ಬದಿಗಿಟ್ಟು ಪಕ್ಷದ ಮುಖಂಡರು, ಕಾರ್ಯಕತರಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರು ಎಲ್ಲರೊಂದಿಗೂ ಸಮಾಲೋಚನೆ ನಡೆಸಿ ಅವುಗಳನ್ನು ನಿವಾರಿಸಲಾಗುವುದು ಎಂದರು.

ಎಐಸಿಸಿ ಹಾಗೂ ಕೆಪಿಸಿಸಿಯ ಹಿರಿಯ ಮುಖಂಡರು ನಮ್ಮ ಮೇಲೆ ವಿಶ್ವಾಸವನ್ನಿಟ್ಟು ಡಿಸಿಸಿ ಹುದ್ದೆಗೆ ಆಯ್ಕೆ ಮಾಡಿದ್ದಾರೆ, ಎಲ್ಲರ ಸಹಕಾರದಿಂದ, ಸಮನ್ವಯತೆಯಿಂದ ಕೆಲಸ ಮಾಡುವುದಾಗಿ ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತ ಕುಮಾರ ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ಈ ಹಿಂದೆ ಅನೇಕ ಹಿರಿಯರು, ಮುಖಂಡರು ಡಿಸಿಸಿ ಅಧ್ಯಕ್ಷರಾಗಿ ಹೋಗಿದ್ದಾರೆ. ವಿವಿಧ ಕಾರಣಗಳಿಂದ ಇಷ್ಟು ದಿನಗಳ ಕಾಲ ಖಾಲಿಯಿದ್ದ ಹುದ್ದೆಗೆ ಎಐಸಿಸಿ ಹಾಗೂ ಕೆಪಿಸಿಸಿ ಮುಖಂಡರು ಸಮರ್ಥರಾದ ಬಸವರಾಜ ಪಾಟೀಲ್ ಇಟಗಿ ಅವರನ್ನು ನೇಮಿಸಿರುವುದು ಉತ್ತಮ ತೀರ್ಮಾನವಾಗಿದೆ. ಇಟಗಿ ಅವರು ಎಲ್ಲವನ್ನು ಸರಿಪಡಿಸಿಕೊಂಡು ಪಕ್ಷವನ್ನು ಮುನ್ನಡೆಸುವಂತಹ ಶಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು ನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮೊಹಮ್ಮದ್‌ ಶಾ ಆಲಂ, ಸುಖಾನಿ, ಸೈಯದ್‌ ಯಾಸೀನ್‌ ಸೇರಿ ಹಲವಾರು ಮುಖಂಡರು ಮಾತನಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಶರಣಗೌಡ ಬಯ್ಯಾಪುರ, ಮಾಜಿ ಶಾಸಕ ಅಮರೇಗೌಡ ಬಯ್ಯಾಪು, ಮುಖಂಡರಾದ ರಾಮಣ್ಣ ಇರಬಗೇರಾ, ಪಾಮಯ್ಯ ಮುರಾರಿ, ಎ.ರಾಜಶೇಖರ ನಾಯಕ, ಅಬ್ದುಲ್‌ ಕರೀಂ, ಸಾಜೀದ್‌ ಸಮೀರ, ತಾಯಣ್ಣ ನಾಯಕ, ಅಮರೇಗೌಡ ಹಂಚಿನಾಳ ಸೇರಿ ವಿವಿಧ ಬ್ಲಾಕ್ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು. ಕೆಪಿಸಿಸಿ ರಾಜ್ಯ ವಕ್ತಾರ ಡಾ.ರಜಾಕ ಉಸ್ತಾದ ನಿರ್ವಹಿಸಿದರು.