ಹಾವೇರಿ: ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಪದವೀಧರರ ವಿಧಾನ ಪರಿಷತ್ ಚುನಾವಣೆಯನ್ನು ಗುರಿಯಾಗಿಸಿಕೊಂಡು ಹಾವೇರಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಆಲ್ ಇಂಡಿಯಾ ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪಕ್ಷದ ಜಿಲ್ಲಾ ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ತತ್ವ-ಸಿದ್ಧಾಂತಗಳನ್ನು ಗ್ರಾಮ ಮಟ್ಟದವರೆಗೆ ತಲುಪಿಸಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಮೂರು ವರ್ಷಗಳ ಆಡಳಿತದಲ್ಲಿದ್ದರೂ ಜನರ ನಿರೀಕ್ಷೆಗೆ ತಕ್ಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಆರು ಶಾಸಕರಿದ್ದರೂ ಜಿಲ್ಲೆಯ ಜನರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಇನ್ನೂ ಒಂದು ವಾರ ಮಳೆಯಾಗದಿದ್ದರೆ ಬೆಳೆಗಳು ಸಂಪೂರ್ಣ ಹಾನಿಯಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಕೂಡಲೇ ಹಾವೇರಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಪರಿಹಾರ, ಬೆಳೆ ವಿಮೆ ಹಾಗೂ ಅಗತ್ಯ ನೆರವು ನೀಡಬೇಕು. ಗ್ರಾಮೀಣ ಬಡವರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಬರಗಾಲ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಸಮಸ್ಯೆಗಳ ಕುರಿತು ಸರ್ಕಾರದಿಂದ ಪರಿಣಾಮಕಾರಿ ಕ್ರಮಗಳು ಕಂಡುಬರುತ್ತಿಲ್ಲ. ಕೃಷಿ ಪ್ರಧಾನ ಜಿಲ್ಲೆಯಾದ ಹಾವೇರಿಗೆ ಸಚಿವ ಸ್ಥಾನ ನೀಡದಿರುವುದು ಅನ್ಯಾಯವಾಗಿದ್ದು, ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ನೀಡಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯತಂತ್ರ ರೂಪಿಸುವುದು, ಪಕ್ಷದ ಸಂಘಟನೆ ಬಲಪಡಿಸುವುದು, ಹೊಸ ಸದಸ್ಯತ್ವ ಅಭಿಯಾನ ಹಾಗೂ ಗ್ರಾಮ ಮಟ್ಟದ ಸಂಘಟನಾ ಚಟುವಟಿಕೆಗಳನ್ನು ಚುರುಕುಗೊಳಿಸುವ ಕುರಿತು ಚರ್ಚೆ ನಡೆಸಲಾಯಿತು.
ಜಿಲ್ಲಾ ಮುಖಂಡರಾದ ರಾಕೇಶ್ ಜಿ.ಕೆ., ಬಿ.ಸಿ. ಲಂಬಿ, ಬ್ಯಾಡಗಿ ತಾಲೂಕು ಅಧ್ಯಕ್ಷ ಅಜೀಜ್ ಸಾಬ್ ಮನ್ನಂಗಿ, ಲಿಯಾಕತ್ ತಿಳವಳ್ಳಿ, ರಾಜು ಉಪ್ಪಾರ, ಲೋಹಿತ ಓಲೇಕಾರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.