ಕಂಪ್ಲಿ: ಪಟ್ಟಣದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಸುಗಮ ಕಾರ್ಯನಿರ್ವಹಣೆ ಹಾಗೂ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನ್ಯಾಯಾಲಯಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಕುರಿತು ಶುಕ್ರವಾರ ನ್ಯಾಯಾಲಯ ಆವರಣದಲ್ಲಿ ಭದ್ರತಾ ಪರಿಶೀಲನಾ ಸಭೆ ನಡೆಯಿತು.
ನ್ಯಾಯಾಲಯದ ಪ್ರಭಾರ ನ್ಯಾಯಾಧೀಶ ಸಿದ್ಧಲಿಂಗಯ್ಯ ಬಿ. ಗಂಗಾಧರಮಠ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನ್ಯಾಯಾಲಯದ ಭದ್ರತೆ, ಸ್ವಚ್ಛತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.ಸಭೆಯಲ್ಲಿ ನ್ಯಾಯಾಲಯದ ಆವರಣ ಮತ್ತು ಕಟ್ಟಡದ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಕುರಿತು ಪ್ರಸ್ತಾಪಿಸಲಾಯಿತು. ನ್ಯಾಯಾಲಯದ ಆವರಣದಲ್ಲಿ ನಡೆಯುವ ಚಟುವಟಿಕೆಗಳ ಮೇಲ್ವಿಚಾರಣೆಗೆ ಹಾಗೂ ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಸಿಸಿ ಕ್ಯಾಮೆರಾಗಳು ಅತ್ಯಗತ್ಯವಾಗಿದೆ. ಶೀಘ್ರದಲ್ಲೇ ಈ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವ ಅಗತ್ಯವನ್ನು ಅಧಿಕಾರಿಗಳು ಒತ್ತಿ ಹೇಳಿದರು.
ಅಗ್ನಿ ಅವಘಡಗಳಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಅಗ್ನಿಶಾಮಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು, ಅಗ್ನಿಶಾಮಕ ಸಾಧನಗಳನ್ನು ಅಳವಡಿಸುವುದು ಮತ್ತು ಅವುಗಳ ನಿರ್ವಹಣೆಯನ್ನು ನಿಯಮಿತವಾಗಿ ಪರಿಶೀಲಿಸುವ ಕುರಿತು ಸಲಹೆ ನೀಡಲಾಯಿತು.ನ್ಯಾಯಾಧೀಶರ ಭದ್ರತೆಗೆ ಸಂಬಂಧಿಸಿದ ವಿಷಯವೂ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬಂತು. ನ್ಯಾಯಾಧೀಶರಿಗೆ ಸೂಕ್ತ ಭದ್ರತೆ ಒದಗಿಸುವುದು ಹಾಗೂ ನ್ಯಾಯಾಲಯದ ಆವರಣದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸುವ ಅಗತ್ಯವನ್ನು ಅಧಿಕಾರಿಗಳು ಅಭಿಪ್ರಾಯಪಟ್ಟರು. ನ್ಯಾಯಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ನ್ಯಾಯಾಲಯದ ಎದುರು ಭಾಗದಲ್ಲಿ ಅಳವಡಿಸಲಾಗಿರುವ ಮಕ್ಕಳ ಆಟೋಪಕರಣಗಳನ್ನು ಭದ್ರತಾ ದೃಷ್ಟಿಯಿಂದ ಉದ್ಯಾನದ ಮತ್ತೊಂದು ಭಾಗಕ್ಕೆ ಸ್ಥಳಾಂತರಿಸುವ ಕುರಿತು ಚರ್ಚಿಸಲಾಯಿತು. ಇದರಿಂದ ನ್ಯಾಯಾಲಯದ ಕಾರ್ಯ ಚಟುವಟಿಕೆಗಳಿಗೆ ಅಡಚಣೆ ಉಂಟಾಗದಂತೆ ನೋಡಿಕೊಳ್ಳಬಹುದು ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ನ್ಯಾಯಾಲಯದ ಕಟ್ಟಡಕ್ಕೆ ಅಗತ್ಯವಿರುವ ಪೀಠೋಪಕರಣ, ಆವರಣ ಗೋಡೆ ನಿರ್ಮಾಣ, ಕಟ್ಟಡದ ದುರಸ್ತಿ ಕಾರ್ಯಗಳು ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಕುರಿತೂ ಸಮಗ್ರವಾಗಿ ಚರ್ಚೆ ನಡೆಯಿತು. ನ್ಯಾಯಾಲಯದ ಸುಗಮ ಕಾರ್ಯ ನಿರ್ವಹಣೆಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲು ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಇಂಟೆಲಿಜೆನ್ಸ್ ಡಿವೈಎಸ್‌ಪಿ ಸುರೇಶ್ ತಳವಾರ್, ತೋರಣಗಲ್ ಉಪ ವಿಭಾಗದ ಡಿವೈಎಸ್‌ಪಿ ಪ್ರಸಾದ್ ಕೆ.ಗೋಖಲೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಪಿ.ಬಿ. ಪ್ರಕಾಶ, ಕಂಪ್ಲಿ ಪೊಲೀಸ್ ಠಾಣೆಯ ಪಿಐ ಕೆ.ಬಿ. ವಾಸುಕುಮಾರ್, ಅಗ್ನಿಶಾಮಕ ದಳದ ಡಿಎಫ್‌ಒ ಹನುಮನಗೌಡ ಪಾಟೀಲ್, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಲೋಕೋಪಯೋಗಿ ಇಲಾಖೆ ಎಇ ಆನಂದ್ ಪೆಮ್ಮಾರ್, ಆಂತರಿಕ ಭದ್ರತಾ ವಿಭಾಗದ ಹೆಡ್ ಕಾನ್ಸ್‌ಟೇಬಲ್ ರಾಜಶೇಖರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.