ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ: ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ನಿರಂಜನ

| Published : Apr 05 2024, 01:14 AM IST / Updated: Apr 05 2024, 08:40 AM IST

ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ: ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ನಿರಂಜನ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಯ್ಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿಗೆ ಸ್ವಾಯತ್ತತೆ ದೊರೆತಿರುವ ಹಿನ್ನೆಲೆಯಲ್ಲಿ ಗುರುವಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

 ಬೆಂಗಳೂರು :  ವಿದ್ಯಾರ್ಥಿಗಳು ಇವತ್ತಿನ ಕಾಲಘಟ್ಟದಲ್ಲಿ ಬರೀ ಪಠ್ಯಪುಸ್ತಕ ಓದಿ ಹೆಚ್ಚು ಅಂಕ ಪಡೆಯುವುದಕ್ಕೆ ಸೀಮಿತವಾಗಬಾರದು, ತರಗತಿ ಪಾಠದ ಜೊತೆಗೆ ಹೆಚ್ಚು ಬೇಡಿಕೆ ಇರುವ ಕೌಶಲ್ಯ ತರಬೇತಿ, ಕೈಗಾರಿಕಾ ತರಬೇತಿ ಪಡೆಯುವುದು ಬಹಳ ಮುಖ್ಯ. ಆಗ ಮಾತ್ರ ಉದ್ಯೋಗಾವಕಾಶಗಳು ಬೇಗ ದೊರೆಯುತ್ತವೆ ಎಂದು ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ.ಎಸ್‌.ನಿರಂಜನ ಹೇಳಿದರು.

ರಾಮಯ್ಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿಗೆ ಸ್ವಾಯತ್ತತೆ ದೊರೆತಿರುವ ಹಿನ್ನೆಲೆಯಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಾದಂತೆ ಉದ್ಯೋಗಾಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತದೆ. ಹಾಗಾಗಿ ಉನ್ನತ ಶಿಕ್ಷಣ ಇಲಾಖೆಯು ವಿವಿಧ ಖಾಸಗಿ ಸಂಸ್ಥೆಗಳು, ಕೈಗಾರಿಕಾ ಸಂಘಟನೆಗಳು, ವಿದೇಶಿ ವಿವಿಗಳ ಸಹಯೋಗದಲ್ಲಿ ನಮ್ಮ ರಾಜ್ಯದ ಸರ್ಕಾರಿ ಪದವಿ, ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕೌಶಲ್ಯ ತರಬೇತಿ ಶಿಕ್ಷಣ ನೀಡುವ ಕೆಲಸಕ್ಕೆ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಹೇಳಿದರು.ಇವತ್ತಿನ ಜಾಗತಿಕ ಸ್ಪರ್ಧಾ ವ್ಯವಸ್ಥೆಯಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಬೇಕಾದರೆ ತರಗತಿ ಶಿಕ್ಷಣದ ಜೊತೆಗೆ ಕೌಶಲ್ಯಾಧಾರಿತ ಶಿಕ್ಷಣ, ಕೈಗಾರಿಕಾ ತರಬೇತಿಗಳು ಅಗತ್ಯವಶ್ಯಕ. ಖಾಸಗಿ ಕಾಲೇಜುಗಳು ಕೂಡ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಪ್ರಮಾಣ ಶೇ.37 ಇದೆ. ಇದು 2050ರ ವೇಳೆಗೆ ಶೇ.50 ತಲುಪುವ ಗುರಿ ಇದೆ. ಈ ಗುರಿ ತಲುಪಬೇಕಾದರೆ ಶಿಕ್ಷಣ ಸಂಸ್ಥೆಗಳ ಪಾತ್ರ ದೊಡ್ಡದಿದೆ. ಪ್ರಸ್ತುತ ನಮ್ಮ ಶಿಕ್ಷಣ ವ್ಯವಸ್ಥೆ ಇತರೆ ದೇಶಗಳಿಗೆ ಹೋಲಿಕೆ ಮಾಡಿಕೊಂಡರೆ ಬಹಳ ಹಿಂದೆ ಉಳಿದಿದ್ದೇವೆ. ಜಾಗತಿಕ ಮಟ್ಟದಲ್ಲಿ 200 ಕಾಲೇಜುಗಳ ಪೈಕಿ ನಮ್ಮ ರಾಜ್ಯದ ಒಂದು ಕಾಲೇಜು ಸಹ ಇಲ್ಲ. ಶಿಕ್ಷಣ ತಜ್ಞರು, ಬೋಧಕರು ಇದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸ್ಥಿತಿ ಇದೆ ಎಂದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜಗಾಂಧಿ ಹಾಗೂ ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ। ಎಂ.ಆರ್.ಜಯರಾಂ ಮಾತನಾಡಿದರು. ಕಾರ್ಯಕ್ರಮದಲ್ಲಿ ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ। ಎಂ.ಆರ್.ಜಯರಾಂ, ಕಾರ್ಯಕಾರಿ ನಿರ್ದೇಶಕ ಬಿ.ಎಸ್.ರಾಮಪ್ರಸಾದ್, ಹಣಕಾಸು ಅಧಿಕಾರಿ ಜಿ.ರಾಮಚಂದ್ರ, ರಾಮಯ್ಯ ಕಾಲೇಜಿನ ನಿರ್ದೇಶಕರಾದ ಜಾನಕಿರಾಮ್, ಕೋದಂಡರಾಮ್, ಪ್ರಾಂಶುಪಾಲರಾದ ಡಾ। ಜಿ.ವತ್ಸಲಾ ಇದ್ದರು.