ಸಾರಾಂಶ
ಭಾಲ್ಕಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮಹಾರಾಷ್ಟ್ರದ ಜಾಲ್ನಾದ ಮನೋಜ ದಾದಾ ಭಾಗಿಯಾಗಲಿದ್ದರೆ.
ಬೀದರ್ : ಮರಾಠಾ ಸಮಾಜದ ಸಮಸ್ಯೆಗಳ ಕುರಿತು ಹಾಗೂ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಏ.10ರಂದು ಭಾಲ್ಕಿಯ ಕಲವಾಡಿ ರಸ್ತೆಯಲ್ಲಿ ಅಂದು ಸಂಜೆ 4ಕ್ಕೆ ಮರಾಠಾ ಸಮಾಜದ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ ಎಂದು ಮರಾಠಾ ಸಮಾಜದ ಪ್ರಮುಖರು ಹಾಗೂ ಜಿಪಂ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ್ ತಿಳಿಸಿದರು.
ಅವರು ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಹಿರಂಗ ಸಭೆಯಲ್ಲಿ ಮಹಾರಾಷ್ಟ್ರದ ಜಾಲ್ನಾ ಮೂಲದ ಮನೋಜ (ದಾದಾ) ಜರಂಗೆ ಪಾಟೀಲ್ ಅವರು ಭಾಗಿಯಾಗಲಿದ್ದಾರೆ ಎಂದರು.
ಈ ಸಮಾವೇಶ ಯಾವುದೇ ಪಕ್ಷದ ವಿರುದ್ಧ ಅಲ್ಲ ನಮ್ಮ ಸಮಾಜದ ಸಂಘಟನೆ, ಶಿಕ್ಷಣ ಹಾಗೂ ಆರ್ಥಿಕವಾಗಿ ಅಭಿವೃದ್ಧಿಗಾಗಿ ಹಾಗೂ ಮರಾಠಾ ಸಮಾಜಕ್ಕೆ ಮೀಸಲಾತಿ ಕುರಿತು ಚರ್ಚಿಸಲಾಗುವುದು. ಬಹಿರಂಗ ಸಭೆಯಲ್ಲಿ ಜಿಲ್ಲೆಯ ಸುಮಾರು 50 ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸುವರು ಎಂದರು.
ಮನೋಜ ದಾದಾ ಅವರು ಉತ್ತಮ ವಾಗ್ಮಿಯಾಗಿದ್ದು ಮರಾಠಾ ಭಾಷೆಯಲ್ಲಿ ನಮ್ಮ ಜನರಿಗೆ ಸರಿಯಾಗಿ ತಿಳುವಳಿಕೆಯಾಗುವಂತೆ ಮಾತನಾಡುವವರಿದ್ದಾರೆ. ಇಡೀ ಮಹಾರಾಷ್ಟ್ರ ರಾಜ್ಯದಲ್ಲಿಯೇ ಮನೋಜ ದಾದಾ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಅವರನ್ನು ಬೀದರ್ ಜಿಲ್ಲೆಗೆ ಈ ಹಿಂದೆಯೇ ಆಮಂತ್ರಿಸಿದ್ದೇವೆ. ಆದರೆ ಅವರು ಈಗ ಸಮಯ ನೀಡಿದ್ದಾರೆ ಎಂದರು.
ಮರಾಠಾ ಸಮಾಜದ ಮೀಸಲಾತಿಗಾಗಿ ಕಳೆದ 2016ರಿಂದ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಕೂಡ ಮನೋಜ ದಾದಾ ಅವರ ಮುಂದಾಳತ್ವದಲ್ಲಿ ಹೋರಾಟ ಮಾಡಿದ್ದರು. ಮೀಸಲಾತಿ ಇನ್ನೂ ಸಿಕ್ಕಿಲ್ಲ ಎಂದ ಅವರು, ಸಮಾಜದ ಸಂಘಟನೆ ಮಾಡುವ ಉದ್ದೇಶದಿಂದ ಮಾತ್ರ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಮಾಜದಿಂದ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ಶೀಘ್ರ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಅದನ್ನೆಲ್ಲ ಮುಂಬರುವ ದಿನಗಳಲ್ಲಿ ಸ್ಪಷ್ಟಪಡಿಸುತ್ತೇವೆ ಎಂದು ಪದ್ಮಾಕರ ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ನಾರಾಯಣ ಗಣೇಶ ವಕೀಲರು, ವಿಜಯಕುಮಾರ ಪಾಟೀಲ್ ಕಣಜಿ, ಡಾ. ದಿನಕರ ಮೋರೆ, ರಾವಸಾಹೇಬ ಬಿರಾದಾರ, ಜನಾರ್ಧನ ಬಿರಾದಾರ, ಗಜರಾವ್ ಜಗತಾಪ, ಅನೀಲ ಕಾಳೆ, ಅಮರ ಜಾಧವ, ಸುನೀಲ ಶಿಂಧೆ, ಸಂತೋಷ ತಗರಖೇಡ ಹಾಗೂ ಮನೋಜ ಕದಮ ಇದ್ದರು.
ಖೂಬಾ ಜೊತೆ ಸೋಮನಾಥ ಪಾಟೀಲ್!
ಭಗವಂತ ಖೂಬಾ ಒಬ್ಬಂಟಿಯಾಗಿದ್ದಾರೆ. ಅವರ ಜೊತೆ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಓಡಾಡ್ತಿದ್ದಾರೆ ಓಡಾಡಲಿ. ನಾನು ನನ್ನ ಸಮಾಜದ ಪರ ಮಾತನಾಡುತ್ತಿದ್ದೇನೆ. ನನಗೆ ಸಮಾಜ ಮುಖ್ಯ. ಪಕ್ಷ ವಿರೋಧಿ ನಾನು ಮಾಡುತ್ತಿಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ್ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಇತ್ತೀಚೆಗೆ ಸೋಮನಾಥ ಪಾಟೀಲ್ ಪದ್ಮಾಕರ ಪಾಟೀಲ್ ಸ್ವಾರ್ಥಕ್ಕಾಗಿ ಮರಾಠಾ ಹೋರಾಟಕ್ಕಿಳಿದಿದ್ದಾರೆ ಅವರ ಬಗ್ಗೆ ಪಕ್ಷದ ಹೈಕಮಾಂಡ್ ಗಮನನಿಸುತ್ತಿದೆ ಎಂದಿದ್ದರು. ಈ ವಿಷಯವಾಗಿ ಪ್ರಶ್ನೆಗೆ ಉತ್ತರಿಸಿದ ಅವರು, ಸಮಾಜಕ್ಕಾಗಿನ ಹೋರಾಟ ಸ್ವಾರ್ಥ ಎಂದೆನಿಸಿದರೆ ಅಂಥ ಹತ್ತು ಹೋರಾಟಗಳಿಗೂ ನಾನು ಸಿದ್ಧ ಎಂದು ಪ್ರತ್ಯುತ್ತರ ನುಡಿದರು.