ಯುವ ಜನರು ಓದಿನ ಜತೆಗೆ ಕ್ರೀಡೆಗೆ ಹೆಚ್ಚಿನ ಒತ್ತು ನೀಡಿದರೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರು ಪಡೆಯಬಹುದು, ಆ ದಿಸೆಯಲ್ಲಿ ಸರ್ಕಾರ ಯುವ ಜನರಿಗೆ ಹೆಚ್ಚಿನ ಆದ್ಯತೆ ನೀಡುವತ್ತ ಗಮನಹರಿಸಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾದ ಕೆ.ಜೆ.ಜಾರ್ಜ್ ಸಚಿವರು ತಿಳಿಸಿದರು.

ಗೋಣಿಕೊಪ್ಪ : ಯುವ ಜನರು ಓದಿನ ಜತೆಗೆ ಕ್ರೀಡೆಗೆ ಹೆಚ್ಚಿನ ಒತ್ತು ನೀಡಿದರೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರು ಪಡೆಯಬಹುದು, ಆ ದಿಸೆಯಲ್ಲಿ ಸರ್ಕಾರ ಯುವ ಜನರಿಗೆ ಹೆಚ್ಚಿನ ಆದ್ಯತೆ ನೀಡುವತ್ತ ಗಮನಹರಿಸಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾದ ಕೆ.ಜೆ.ಜಾರ್ಜ್ ಸಚಿವರು ತಿಳಿಸಿದರು.

ಅವರು ಗೋಣಿಕೊಪ್ಪ ಕಾಲ್ಸ್ ಶಾಲಾ ಆವರಣದಲ್ಲಿ ಭಾನುವಾರ ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.ಕೊಡಗು‌ ಜಿಲ್ಲೆ ಕ್ರೀಡೆಯ ತವರೂರಾಗಿದ್ದು, ಯುವ ಜನರು ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಹೆಸರು ಗಳಿಸಬೇಕು ಎಂದು ಕರೆ ನೀಡಿದರು. ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಮಾತನಾಡಿ, ಇಡೀ ದೇಶದಲ್ಲೇ ಶ್ರೇಷ್ಠ ಕ್ರೀಡಾ ಜಿಲ್ಲೆಯಾಗಿರುವ ಕೊಡಗಿನಲ್ಲಿ ಇಂತಹ ಕ್ರೀಡಾಕೂಟ ನಡೆಯುತ್ತಿರುವುದು ಇಲ್ಲಿಯ ಜನರ ಕ್ರೀಡಾ ಮನಸ್ಥಿತಿ ಹಾಗೂ ಕ್ರೀಡೆಗೆ ನೀಡುವ ಪ್ರೋತ್ಸಾಹಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಶ್ರೇಷ್ಠ ಕ್ರೀಡಾಪಟುಗಳನ್ನು ನೀಡಿದ ಮಣ್ಣು ನಮ್ಮ ಕೊಡಗು. ಇಂದಿನ ಈ ಪ್ರತಿಯೋಗಿತದಲ್ಲಿ ಭಾಗವಹಿಸಿದ ಎಲ್ಲರೂ ಉತ್ತಮ ಕ್ರೀಡಾ ಪ್ರದರ್ಶನವನ್ನು ನೀಡಿ, ಉತ್ತಮ ಹೆಸರು ಗಳಿಸುವಂತಾಗಲಿ ಎಂದು ಹಾರೈಸಿದರು.ಕ್ರೀಡಾ ಪ್ರಾಧಿಕಾರದ‌ ರಾಜ್ಯ ಉಪಾಧ್ಯಕ್ಷ ಅರುಣ್ ಮಾಚಯ್ಯ, ಸಂಸ್ಥೆಯ ಮುಖ್ಯಸ್ಥ ಅಶ್ವಿನಿ ನಾಚಪ್ಪ ಇತರರು ಇದ್ದರು.

ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್ (ಎಎಸ್ಎಫ್) ಮತ್ತು ಕಾಲ್ಸ್, ಎನ್‌ಇಬಿ ಸ್ಪೋರ್ಟ್ಸ್ ಎಂಟರ್‌ಟೈನ್‌ಮೆಂಟ್ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಬೃಹತ್ ಮ್ಯಾರಥಾನ್‌ನಲ್ಲಿ ಒಟ್ಟು 5,902 ಮಂದಿ ಭಾಗವಹಿಸಿದ್ದರು. 21 ಕಿ.ಮೀ ಮತ್ತು 10 ಕಿ.ಮೀ ವಿಭಾಗಗಳು ಮಾತ್ರವಲ್ಲ ವಿಶೇಷವಾಗಿ 5 ಕಿ.ಮೀ ‘ಮಜಾ ರನ್‌’ ಸಹ ಇತ್ತು.