ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರದೈಹಿಕವಾಗಿ ಆರೋಗ್ಯದಿಂದ ಇದ್ದರೆ ಮಾತ್ರ ಮಾನಸಿಕವಾಗಿಯೂ ಸದೃಢರಾಗಿರಲು ಸಾಧ್ಯ ಎಂಬ ಸತ್ಯ ಅರಿತು ಪಠ್ಯದಷ್ಟೇ ಪ್ರಮುಖವಾಗಿರುವ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಮನವಿ ಮಾಡಿದರು.ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶಾಲಾಶಿಕ್ಷಣ ಇಲಾಖೆಯಿಂದ ತಾಲ್ಲೂಕು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.ಕ್ರೀಡೆಯಿಂದ ಆತ್ಮಸ್ಥೈರ್ಯ
ಇಂದಿನ ಪೋಷಕರು ಮಕ್ಕಳ ಅಂಕ ಗಳಿಕೆಯ ಕಡೆ ಮಾತ್ರವೇ ಗಮನಹರಿಸುವುದರಿಂದ ಇಂದಿನ ಮಕ್ಕಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಲು ಕಾರಣವಾಗಿದೆ, ಕ್ರೀಡೆಗಳು ಓದಲು ಆತ್ಮಸ್ಥೈರ್ಯ ತುಂಬುತ್ತವೆ ಎಂಬುದನ್ನು ಮರೆಯಬಾರದು. ಸದಾ ನಾಲ್ಕು ಗೋಡೆಗಳ ನಡುವೆ ಓದಿಗೆ ಸೀಮಿತರಾದರೆ ಅವರಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಎಂಬ ಕಾರಣದಿಂದಲೇ ಸಮಗ್ರ ಶಿಕ್ಷಣದ ಭಾಗವಾಗಿ ಕ್ರೀಡೆಗಳಿಗೂ ಆದ್ಯತೆ ನೀಡಲಾಗಿದೆ ಎಂದ ಅವರು, ಮಕ್ಕಳು ಕ್ರೀಡೆ, ವ್ಯಾಯಾಮ ಮರೆಯಬಾರದು ಎಂದರು.ಕ್ರೀಡೆಗಳ ಬಗ್ಗೆ ನಿರ್ಲಕ್ಷ್ಯ ಬೇಡ, ಪಠ್ಯಕ್ಕಿಂತ ಹೆಚ್ಚಿನ ಸಾಧನೆ ಕ್ರೀಡೆಗಳಲ್ಲಿ ಮಾಡಿ ರಾಷ್ಟ್ರ ಮೆಚ್ಚುವ ವ್ಯಕ್ತಿಗಳಾಗಿರುವವರು ನಮ್ಮ ಕಣ್ಣ ಮುಂದೆ ಇದ್ದಾರೆ ಎಂದು ಉದಾಹರಿಸಿದರು.
ತೀರ್ಪುಗಾರರ ಹೊಣೆಕ್ಷೇತ್ರ ಸಮನ್ವಯಾಧಿಕಾರಿ ಪ್ರವೀಣ್ ಮಾತನಾಡಿ, ಕ್ರೀಡೆಗಳಲ್ಲಿ ತೀರ್ಪುಗಾರರ ಜವಾಬ್ದಾರಿ ಹೆಚ್ಚಿನದಾಗಿದೆ, ನೀವು ನಿಷ್ಪಕ್ಷಪಾತ ತೀರ್ಪು ನೀಡಿ, ಯಾವುದೇ ಗೊಂದಲಕ್ಕೆ ಅವಕಾಶ ನೀಡದಿರಿ ಎಂದು ಮನವಿ ಮಾಡಿ, ಮಕ್ಕಳು ಕ್ರೀಡೆಗಳಲ್ಲಿ ಗೆಲುವು,ಸೋಲಿನ ಕುರಿತು ಚಿಂತಿಸದೇ ಛಲದಿಂದ ಆಟವಾಡಿ ಎಂದು ಕೋರಿದರು.ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ ಮಾತನಾಡಿ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ತೀರ್ಪುಗಾರರ ತೀರ್ಪಿಗೆ ಬದ್ದರಾಗಿ, ಯಾವುದೇ ಗೊಂದಲಕ್ಕೆ ಅವಕಾಶ ನೀಡದಿರಿ ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ವಿ.ಮುರಳಿಮೋಹನ್, ಕೆ.ಟಿ.ನಾಗರಾಜ್, ಜಿ.ಶ್ರೀನಿವಾಸ್, ನಾರಾಯಣರೆಡ್ಡಿ, ಎಂ.ಎನ್.ಶ್ರೀನಿವಾಸಮೂರ್ತಿ, ಆಂಜನೇಯ, ಖಾಸಗಿ ಶಾಲೆಗಳ ಪಾಲ್ಗುಣ, ಸತೀಶ್‌ಕುಮಾರ್, ಮುಖ್ಯಶಿಕ್ಷಕ ಓ.ಮಲ್ಲಿಕಾರ್ಜುನ್, ಚಂದ್ರಪ್ಪ, ಕೃಷ್ಣೇಗೌಡ ಇದ್ದರು.