ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಶೌಚಾಲಯ ನಿರ್ಮಾಣ ನಗರ ವ್ಯಾಪ್ತಿಯಲ್ಲಿ ನಾಮಫಲಕ ಅಳವಡಿಕೆ, ಸಿಸಿ ರಸ್ತೆಗಳ ನಿರ್ಮಾಣ ಐ ಮಾಸ್ಕ್ ದೀಪ ಹಾಗೂ ಬೀದಿ ದೀಪಗಳ ಅಳವಡಿಕೆ ಸಿಸಿ ರಸ್ತೆಗಳ ನಿರ್ಮಾಣ ನಗರಸಭೆ ಆವರಣದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ ಸೇರಿದಂತೆ 99 ವಿಷಯಗಳನ್ನು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಯಿತು.ನಗರಸಭಾ ಅಧ್ಯಕ್ಷ ಎಂ ಸಮೀವುಲ್ಲಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನಗರಸಭಾ ವ್ಯಾಪ್ತಿಯಲ್ಲಿ ವಸತಿಯ ನಿಲಯಗಳಲ್ಲಿರುವ ಕುಡಿಯುವ ನೀರಿನ ಸಂಪರ್ಕಗಳನ್ನು ಸಕ್ರಮಗೊಳಿಸಲಾಗುವುದು. ಮಾರುಕಟ್ಟೆ ಸುಂಕ ವಸೂಲಾತಿಗೆ ನಡೆಸುವುದು ದೇವಾಲಯಗಳ ಅಭಿವೃದ್ಧಿ ಕಾಮಗಾರಿಗೆ ಒತ್ತು ನೀಡಲಾಗುವುದು ಎಂದು ತಿಳಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್ ಮಾತನಾಡಿ, ಕೆಲ ಬಡಾವಣೆಗಳಲ್ಲಿ ರಸ್ತೆ ನಿರ್ಮಾಣದ ವೇಳೆ ಲೋಪವಾಗಿರುವುದನ್ನು ಅಧಿಕಾರಿಗಳೇ ದೃಢಪಡಿಸಿದ್ದಾರೆ. ಇನ್ನು ಕುಡಿಯುವ ನೀರು ಸಂಪರ್ಕ ಪೈಪ್ ಜಾಲ ನಾಪತ್ತೆಯಾಗಿದೆ. ವಿದ್ಯುತ್ ಪರಿವರ್ತಕ ಅಳವಡಿಕೆ ಕೂಡ ನಡೆದಿಲ್ಲ. ಮೂಲಸೌಕರ್ಯ ಕಲ್ಪಿಸದೇ ತರಾತುರಿಯಲ್ಲಿ ಖಾತೆ ಬಿಡುಗಡೆ, ಇ ಸ್ವತ್ತು ನೀಡುವುದೇ ಸೇರಿದಂತೆ ಯಾವುದೇ ಬಗೆಯ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಅಧಿಕಾರಿಗಳು ಹನ್ನೆರಡು ಲೇಔಟ್‌ಗಳ ಕಾಮಗಾರಿಗಳ ಪರಿಶೀಲನೆ ನಡೆಸಿದ ನಂತರವೇ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಸಭೆಯಲ್ಲಿ ಮಂಡಿಸಿರುವ ವಿಷಯಕ್ಕೆ ನಮ್ಮ ವಿರೋಧವಿದೆ. ಒತ್ತಡಕ್ಕೆ ಮಣಿದು ಬಡಾವಣೆಗಳ ದಾಖಲೆ ನೀಡಿದರೆ ಲೋಕಾಯುಕ್ತ ನ್ಯಾಯಲದಲ್ಲಿ ದಾವೆ ಹೂಡುವುದಾಗಿ ಎಚ್ಚರಿಸಿದರು.ಸದಸ್ಯರಾದ ಭಾಸ್ಕರ್, ಮೇಲುಗಿರಿಗೌಡ ದನಿಗೂಡಿಸಿದರು. ತಕ್ಷಣವೇ ಮಧ್ಯೆ ಪ್ರವೇಶಿಸಿದ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಹಿಂದಿನಿಂದಲೂ ನೀತಿ, ನಿಯಮ ರೂಪಿಸದೇ ಬಡಾವಣೆ ನಿರ್ಮಾಣ ಮಾಡಲಾಗಿದೆ. ಅಧಿಕಾರಿ ತಪ್ಪು ಮಾಡಿದ್ದರೆ ದಾಖಲೆ ಸಹಿತ ನ್ಯಾಯಾಲಯಕ್ಕೆ ದೂರು ನೀಡಿದರೆ ಲೋಪವೆಸಗಿದವರು ಮನೆಗೆ ಹೋಗುತ್ತಾರೆ. ಸದ್ಯದಲ್ಲಿಯೇ ಸ್ಥಳೀಯ ಯೋಜನಾ ಪ್ರಾಧಿಕಾರಕ್ಕೆ ನಾಮ ನಿರ್ದೇಶನ ನಡೆಯಲಿದ್ದು, ಚರ್ಚಿಸಿ ನಿಲುವು ಪ್ರಕಟಿಸಿ ಎಂದು ಸಲಹೆ ನೀಡಿದರು. ಬಹುಮತವಿಲ್ಲದವರು ಹೇಳಿದ್ದನ್ನು ಕೇಳಲಾಗದು. ನಮಗೇನು ಮಾಡಬೇಕೆನ್ನುವುದು ಗೊತ್ತಿದೆ ಎಂದು ಅಧ್ಯಕ್ಷ ಸಮೀವುಲ್ಲಾ ಖಾರವಾಗಿಯೇ ಪ್ರತಿಕ್ರಿಯಿಸಿದರು. ಅಸಮಾಧಾನ: ನಗರದ ಆಯಕಟ್ಟಿನ ಜಾಗಗಳಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುವ ಕೆಲ ಕಾಮಗಾರಿಗಳಲ್ಲಿ ಶೇ.೭ಕ್ಕಿಂತ(ಲೆಸ್) ಕಡಿಮೆ ಮೊತ್ತ ದಾಖಲಿಸಿರುವ ಗುತ್ತಿಗೆದಾರ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವೇ? ನೀವೇ ಉತ್ತರಿಸಿ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು. ಎಲ್ಲ ಟೆಂಡರ್ ಪ್ರಕ್ರಿಯೆ ಹೀಗೆಯೇ ನಡೆಯುತ್ತಿದ್ದು ಲೋಪವಾಗದಂತೆ ನೋಡಿಕೊಳ್ಳುವುದಾಗಿ ಅಧಿಕಾರಿಗಳು ಸಭೆಗೆ ಭರವಸೆ ನೀಡಿದರು.
ಆಕ್ಷೇಪ: ಹಾಸನ ರಸ್ತೆ ಬಡಾವಣೆಗೆ ಹೊಂದಿಕೊಂಡಂತಿರುವ ಡಾ.ಬಿ,ಆರ್.ಅಂಬೇಡ್ಕರ್ ಗ್ರಂಥಾಲಯ ಸ್ಥಳಾಂತರ ಕುರಿತ ವಿಷಯಕ್ಕೆ ಮೈತ್ರಿಕೂಟದ ಸದಸ್ಯರಾದ ಸಿ.ಗಿರೀಶ್, ಅಭಿರಾಮಿ, ಭಾಸ್ಕರ್, ಸುಜಾತಾ ರಮೇಶ್,ಶ್ವೇತಾ ರಮೇಶ್, ಮೇಲುಗಿರಿಗೌಡ ಹಾಗೂ ಕಾಂಗ್ರೆಸ್ ಸದಸ್ಯ ಎಂ.ಆರ್.ವೆಂಕಟಮುನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಮಸ್ಯೆಯ ಗಂಭೀರತೆ ಅರಿತ ಶಾಸಕರು ಪರಿಸ್ಥಿತಿ ಅವಲೋಕಿಸಿ ತೀರ್ಮಾನಿಸೋಣ ಎಂದು ಎಲ್ಲರನ್ನೂ ಸಮಾಧಾನಪಡಿಸಿದರು.ಅಚ್ಚರಿ: ವಿವಿಧ ಕಾಮಗಾರಿಗಳ ಅನುಷ್ಠಾನ, ಬಾಕಿ ಬಿಲ್ ಪಾವತಿ, ಹೊಸ ಶೆಡ್, ರಸ್ತೆ,ಚರಂಡಿ ನಿರ್ಮಾಣ, ಆರ್ಥಿಕ ನೆರವು ಸೇರಿದಂತೆ ಕೇವಲ ಎರಡೂವರೆ ತಾಸಿನಲ್ಲಿ ೯೯ ವಿಷಯಗಳಿಗೆ ಅನುಮೋದನೆ ಪಡೆದುಕೊಳ್ಳಲು ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಆಡಳಿತಾಧಿಕಾರಿಗಳ ಅವಧಿಯಲ್ಲಿನ ೪೮,೭೯ ಕೋಟಿ ರು.ವೆಚ್ಚದ ೨೦೨೪-೨೫ನೇ ಸಾಲಿನ ಆಯವ್ಯಯದ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಇಬ್ಬರು ಸದಸ್ಯರು ಗೈರಾಗಿದ್ದರೆ, ಬಿಜೆಪಿ ನಗರಸಭೆ ಸದಸ್ಯೆ ಸ್ವಪಕ್ಷೀಯರ ಜತೆ ಕುಳಿತುಕೊಳ್ಳದೇ ರಾಜಕೀಯ ವಿರೋಧಿಗಳ ಸಾಲಿನಲ್ಲಿ ಆಸೀನರಾಗಿದ್ದ ದೃಶ್ಯ ಕಂಡುಬಂದಿತು. ಉಪಾಧ್ಯಕ್ಷ ಮನೋಹರ್, ಪೌರಾಯುಕ್ತ ಕೃಷ್ಣಮೂರ್ತಿ ಹಾಜರಿದ್ದರು.