ಸಾರಾಂಶ
ಯಲ್ಲಾಪುರ: ನಾಡಿನಲ್ಲಿ ನಡೆಯುವ ಅನೇಕ ಉತ್ಸವಗಳಿಗಿಂತ ವಿಭಿನ್ನವಾಗಿ ಪ್ರೇಕ್ಷಕರ ಮನವನ್ನು ಸೆಳೆಯುವ ಸಂಕಲ್ಪ ಉತ್ಸವ ಪ್ರಸ್ತುತ ೩೮ನೇ ಉತ್ಸವ ನ. ೧ರಿಂದ ೪ ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಂಕಲ್ಪದ ಅಧ್ಯಕ್ಷ ಪ್ರಮೋದ ಹೆಗಡೆ ತಿಳಿಸಿದರು.ಪಟ್ಟಣದ ಕಾಳಮ್ಮನಗರದ ತಮ್ಮ ನಿವಾಸದ ಬಳಿಯ ಮೌನ ಗ್ರಂಥಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ೩೮ನೇ ವರ್ಷದ ಸಂಕಲ್ಪ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಸಂಕಲ್ಪ ಉತ್ಸವ ಪಟ್ಟಣದ ಗಾಂಧೀ ಕುಟೀರದಲ್ಲಿ ನಡೆಯಲಿದೆ. ಪ್ರತಿವರ್ಷದಂತೆ ಸಾಂಸ್ಕೃತಿಕ, ಸಾಹಿತ್ಯ, ಗಮಕವಾಚನ, ಯೋಗನೃತ್ಯ, ಕೀರ್ತನೆ, ಭಕ್ತಿಸಂಗೀತ, ಯಕ್ಷಗಾನ, ವೈದ್ಯಕೀಯ ಶಿಬಿರ ಹೀಗೆ ಎಲ್ಲ ಸಾಂಸ್ಕೃತಿಕ ಸಂಗಮಗಳೇ ಇಲ್ಲಿ ಅನಾವರಣಗೊಳ್ಳಲಿದೆ. ಅದರಲ್ಲೂ ಯಕ್ಷಗಾನಕ್ಕೆ ಹೆಚ್ಚು ಮಹತ್ವ ನೀಡಿ, ಆ ಕಲೆಯನ್ನು ಆರಾಧಿಸಿಕೊಂಡು ಬಂದಿದ್ದೆವು. ಆದರೆ, ಈ ಬಾರಿ ಕೆರೆಮನೆ ಮೇಳಕ್ಕೆ ಯಕ್ಷಗಾನ ಸಾಧನೆಗಾಗಿ ಯುನೆಸ್ಕೋ ಮಾನ್ಯತೆ ದೊರಕಿದ್ದು, ಯಕ್ಷಗಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಸಫಲತೆ ಕಂಡಿದೆ. ಆ ದೃಷ್ಟಿಯಿಂದ ನಮ್ಮ ಆದ್ಯತೆಯ ಕಾರ್ಯಕ್ಕೆ ಸಾರ್ಥಕ್ಯ ತಂದಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೧೫ ಗಣ್ಯರಿಗೆ ಸಂಕಲ್ಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದರು.ಸಂಕಲ್ಪ ಸಂಚಾಲಕ ಪ್ರಸಾದ ಹೆಗಡೆ ಮಾತನಾಡಿ, ಸಂಕಲ್ಪ ಉತ್ಸವವು ತಾಲೂಕಿಗೆ ಸೀಮಿತವಾಗಿರದೇ, ನಾಡಿನ ಉತ್ಸವವನ್ನಾಗಿ ಆಚರಿಸುತ್ತ ಬಂದಿದ್ದೇವೆ. ಈ ಬಾರಿ ಆಚರಿಸಲಾಗುವ ೩೮ನೇ ಉತ್ಸವದಲ್ಲಿ ಪ್ರತಿವರ್ಷದಂತೆ ಎಲ್ಲ ಕಲಾಸಹೃದಯರ ನೆರವು ನಮಗೆ ಅತ್ಯಗತ್ಯ. ಎಲ್ಲರ ಸಹಕಾರ ನಮ್ಮ ಬಯಕೆಯಾಗಿದೆ. ಉತ್ಸವದ ಭಾಗವಾಗಿ ಡಿಸೆಂಬರ್ ತಿಂಗಳಿನಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು. ಹಿರಿಯ ಸಂಘಟಕ, ತಾಳಮದ್ದಲೆ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಪ್ರಶಾಂತ ಹೆಗಡೆ, ಗೋಪಣ್ಣ ತಾರೀಮಕ್ಕಿ, ನಾರಾಯಣ ಭಟ್ಟ, ಲೋಕನಾಥ ಗಾಂವ್ಕರ, ರವಿ ಬಿಡಾರ, ಪ್ರದೀಪ ಯಲ್ಲಾಪುರಕರ್ ಉಪಸ್ಥಿತರಿದ್ದರು.
15 ಸಾಧಕರಿಗೆ ಸಂಕಲ್ಪ ಪ್ರಶಸ್ತಿಈ ವರ್ಷ ಸಂಕಲ್ಪ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಿ. ಶಂಕರ ಭಟ್ಟ, ಎಂ.ಆರ್. ಹೆಗಡೆ, ವಿಶ್ವನಾಥ ಶರ್ಮ ನಾಡಗುಳಿ, ಪ್ರಶಾಂತ ನಾತು, ಪ್ರದೀಪ ಪೈ, ಶ್ರೀನಿವಾಸ ಹೆಬ್ಬಾರ ಶಿರಸಿ, ಗಜಾನನ ಗಾಂವ್ಕರ, ವಿನಾಯಕ ಭಟ್ಟ ಮೂರುರು, ಹಿಮವತಿ ಭಟ್ಟ, ಶಂಕರ ಭಟ್ಟ ತಾರೀಮಕ್ಕಿ, ಸಿ.ಆರ್. ಶ್ರೀಪತಿ ಚಿಪಗೇರಿ, ಮಹೇಶ ಹೊಸಕೊಪ್ಪ, ಗಂಗಾ ಖಾಂಡೇಕರ, ಚಂದ್ರಶೇಖರ ನಾಯಕ, ಎಂ. ರಾಜಶೇಖರ ಇವರಿಗೆ ನೀಡಲಾಗುತ್ತಿದೆ.