ಮಧುಗಿರಿಯ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿ: ಕೆ.ಎನ್‌. ರಾಜಣ್ಣ

| Published : Jan 24 2024, 02:06 AM IST

ಮಧುಗಿರಿಯ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿ: ಕೆ.ಎನ್‌. ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಮಧುಗಿರಿ ಅಭಿವೃದ್ಧಿಗೆ 25 ಕೋಟಿ ರು. ಅನುದಾನ ಬಿಡುಗಡೆ

ಕನ್ನಡಪ್ರಭ ವಾರ್ತೆ ಮಧುಗಿರಿ

ಪಟ್ಟಣದ ಜನತೆಗೆ ಮೂಲಭೂತ ಸೌಕರ್ಯ ಒದಗಿಸುವ ಜೊತೆಗೆ ನಗರ ಅಭಿವೃದ್ಧಿ ಪಡಿಸಲು 25 ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ನಗರದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ಕೊಡಬೇಕೆಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದರು.

ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಬಿಡುಗಡೆಯಾಗಿರುವ ಅನುದಾನದಲ್ಲಿ ಗುಣಮಟ್ಟದ ಚರಂಡಿ ವ್ಯವಸ್ಥೆ, ಮುಚ್ಚಿರುವ ಒಳಚರಂಡಿಗಳನ್ನು ಪತ್ತೆ ಹಚ್ಚಿ ಪುನರ್‌ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬಿದ್ದ ಮಳೆ ನೀರು ಚರಂಡಿಗಳಲ್ಲಿ ಹರಿಯುವಂತೆ ಮಾಡಬೇಕು. ರಸ್ತೆ ರಿಪೇರಿ, ನಗರದ ಜನತೆಗೆ ಕುಡಿವ ನೀರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಇಲ್ಲಿವರೆಗೂ ಉಪಯೋಗಿಸದೇ ಇರುವ ನೀರಿರುವ ಬೋರ್‌ವೆಲ್ಲ್‌ಗಳನ್ನು ಸರಿಪಡಿಸಿ ನೀರು ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಒಟ್ಟಾರೆ ಪಟ್ಟಣದ ಜನತೆಗೆ ಸಮಗ್ರ ಮೂಲಸೌಲಭ್ಯ ಒದಗಿಸಿ ಕೊಡಲು ಅನುದಾನ ಬಳಸುವಂತೆ ಸಭೆಯಲ್ಲಿದ್ದ ಮುಖ್ಯಾಧಿಕಾರಿ ಸುರೇಶ್‌ ಅವರಿಗೆ ಸಲಹೆ ನೀಡಿದರು.

ವಿದ್ಯಾರ್ಥಿ ನಿಲಯಗಳಲ್ಲಿ ಮೇಲ್ವಿಚಾರಕರು ಮಕ್ಕಳಿಗೆ ಮೆನು ಪ್ರಕಾರ ಊಟ, ತಿಂಡಿ ಕೊಡುತ್ತಿದ್ದಾರೆಯೇ ಎಂಬುದನ್ನು ಗಮನಿಸಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ನಿಲಯಗಳಲ್ಲಿ ವಾತವರಣವಿರಬೇಕು. ಶಿಥಿಲಗೊಂಡಿರುವ ವಿದ್ಯಾರ್ಥಿ ನಿಲಯಗಳ ರಿಪೇರಿಗೆ ಹಣ ಮಂಜೂರು ಮಾಡಲು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿಮಣ್ಣನ್‌ ಗಮನಕ್ಕೆ ತಂದಿದ್ದು, ಈಗಾಗಲೇ ಅವರು ಮಧುಗಿರಿಗೆ ಬಂದು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು ರಿಪೇರಿಗೆ ಹಣ ನೀಡುತ್ತಾರೆ ಎಂದರು.

ನಮ್ಮ ಕ್ಷೇತ್ರಕ್ಕೆ 1500 ಸಾವಿರ ಮನೆಗಳು ಮಂಜೂರಾಗಿದ್ದು, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಹಳ್ಳಿಗಳಲ್ಲಿ ಪಕ್ಷ ಬೇಧ ಮಾಡಬಾರದು. ಸಣ್ಣ ಸಣ್ಣ ಜಾತಿ ಜನಾಂಗವನ್ನು ಪತ್ತೆ ಹಚ್ಚಿ ಸೂರಿಲ್ಲದ ಕಡು ಬಡವರಿಗೆ ಮನೆ ಮಾಡಿಕೊಡಬೇಕು ಎಂದು ತಾಪಂ ಇಒ ಲಕ್ಷ್ಮಣ್‌ ಅವರಿಗೆ ಸೂಚಿಸಿದರು.

ಸರ್ಕಾರಿ ಇಲಾಖೆ ಕಟ್ಟಡಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿ, ಸಾರ್ವಜನಿಕರ ಅನುಕೂಲಕ್ಕೆ ನರೇಗಾ ಯೋಜನಯಡಿ ರಸ್ತೆ ಮಾಡಿ, ಶಾಲಾ ಕೊಠಡಿ, ಶೌಚಾಲಯ, ಅಂಗನವಾಡಿ ಕಟ್ಟಡಗಳನ್ನು ಶೀಘ್ರ ಪ್ರಾರಂಭಿಸಿ ಕೆಲಸ ಮಾಡುಬೇಕು. ಜಿಪಂಯಿಂದ ಸಕಾಲಕ್ಕೆ ಸರಿಯಾಗಿ ಟೆಂಡರ್‌ ಕರೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ ಆದಷ್ಠೂ ಬೇಗ ಟೆಂಡರ್‌ ಕರೆದು ಕಾಮಗಾರಿ ನಿರ್ವಹಿಸುವಂತೆ ತಿಳಿಸಿದರು. ಸಭೆಯಲ್ಲಿ ಎಂಎಲ್‌ಸಿ ಆರ್‌. ರಾಜೇಂದ್ರ, ಪ್ರಭಾರ ತಹಸೀಲ್ದಾರ್‌ ಶ್ರೀನಿವಾಸ್, ರಷ್ಮೇ ಇಲಾಖೆ ಸಹಾಯಕ ನಿರ್ದೇಶಕ ಟಿ. ಲಕ್ಷ್ಮೀನರಸಯ್ಯ, ಕೃಷಿ ಅಧಿಕಾರಿ ಹನುಮಂತರಾಯಪ್ಪ, ಅಬಕಾರಿ ಅಧಿಕಾರಿ ರಾಮೂರ್ತಿ, ಅರಣ್ಯಾಧಿಕಾರಿ ಸುರೇಶ್‌, ಗ್ರಾಮೀಣ ಕುಡಿವ ನೀರು ಸಹಾಯಕ ನಿರ್ದೇಶಕ ಲೋಕೇಶ್‌ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.