ಕೇವಲ ಶೈಕ್ಷಣಿಕ ಸಾಧನೆಯಿಂದ ಮಾತ್ರ ಯಶಸ್ಸು ಸಾಧ್ಯವಿಲ್ಲ. ನಮ್ಮ ವ್ಯಕ್ತಿತ್ವ ರೂಪಿಸುವ ಜೀವನ ಕೌಶಲ್ಯಗಳು, ಕಷ್ಟಪಟ್ಟು ಅತ್ಯಂತ ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡುವ ಕಾರ್ಯದಿಂದ ಗುರಿಮುಟ್ಟಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಸಕೀನಾಬೇಗಂ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಕೇವಲ ಶೈಕ್ಷಣಿಕ ಸಾಧನೆಯಿಂದ ಮಾತ್ರ ಯಶಸ್ಸು ಸಾಧ್ಯವಿಲ್ಲ. ನಮ್ಮ ವ್ಯಕ್ತಿತ್ವ ರೂಪಿಸುವ ಜೀವನ ಕೌಶಲ್ಯಗಳು, ಕಷ್ಟಪಟ್ಟು ಅತ್ಯಂತ ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡುವ ಕಾರ್ಯದಿಂದ ಗುರಿಮುಟ್ಟಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಸಕೀನಾಬೇಗಂ ಪಾಟೀಲ ಹೇಳಿದರು.

ನಗರದ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆದ ವ್ಯಕ್ತಿತ್ವ ವಿಕಸನ ಹಾಗೂ ಸ್ವಚ್ಛತಾ ಶ್ರಮದಾನ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿ ದೆಸೆಯಲ್ಲಿ ನಾವು ಕಲಿಯುವ ಪಾಠಗಳು ನಮ್ಮ ಜೀವನದುದ್ದಕ್ಕೂ ಮಾರ್ಗದರ್ಶನ ನೀಡುತ್ತವೆ. ಈ ವಯಸ್ಸಿನಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುವುದರಿಂದ ಉತ್ತಮ ನಾಯಕರಾಗಿ, ಸಶಕ್ತ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯ. ಜೀವನದಲ್ಲಿ ಯಶಸ್ಸು ಗಳಿಸಲು ಅದಕ್ಕೆ ಸರಿಯಾದ ಯೋಜನೆ ರೂಪಿಸಬೇಕು. ಹಿಡಿದ ಛಲ ಬಿಡದೆ ಕನಸು ನನಸಾಗಿಸಬೇಕು ಎಂದರು.

ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಯಶಸ್ಸು ಗಳಿಸಲು ಒಳ ಮಾರ್ಗಗಳು ಇವೆ. ಕಠಿಣ ದುಡಿಮೆ, ನಿರಂತರ ಸಾಧನೆ, ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲ, ತುಡಿತ ಇವು ಯಶಸ್ಸಿನ ಮೆಟ್ಟಿಲುಗಳು. ಸಾಧನೆಯ ಉತ್ತುಂಗಕ್ಕೇರಿದವರ, ಮಹಾನ್ ಸಾಧಕರ ಜೀವನ ಕ್ರಮವನ್ನು, ಅವರ ಯಶೋಗಾಥೆ ಅವಲೋಕಿಸಿದರೆ ಯಶಸ್ಸಿನ ಗುಟ್ಟು ನಮಗೆ ಅರಿವಾಗುತ್ತದೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾನ್ ಸಾಧಕರು ಹಲವಾರು ಜನರು ಇದ್ದಾರೆ. ಇಂತಹ ಸಾಧಕರ, ಸಾಧನೆಯ ಹಿಂದಿನ ಪ್ರೇರಕಶಕ್ತಿ ಗಮನಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ನೀಗಿಸಬೇಕಾದರೆ ಶಿಕ್ಷಣವೆಂಬ ಹಸಿವು ಪಡೆಯಬೇಕು. ಸಂಸ್ಕಾರ ಪಡೆದು ವಿಶ್ವವನ್ನೇ ಬೆರಗುಗೊಳಿಸುವ ಸಾಮರ್ಥ್ಯ ಹೊಂದಬೇಕು. ವಿದ್ಯಾರ್ಥಿಗಳು ಡಾ.ಅಬ್ದುಲ್ ಕಲಾಂ ರಂತಹ ಮಹಾನ್‌ ನಾಯಕರ ಜೀವನ ಮಾರ್ಗ ಅನುಸರಿಸಬೇಕು. ಮೊಬೈಲ್‌ನಿಂದ ದೂರವಿದ್ದು ಜೀವನ ರೂಪಿಸಿಕೊಳ್ಳಬೇಕು. ತಂದೆ ತಾಯಿ ಹಾಕಿದ ಮಾರ್ಗದಲ್ಲಿ ನಡೆದು ಶಿಕ್ಷಣವೆಂಬ ಸಂಸ್ಕಾರ ಪಡೆಯಬೇಕು. ಅದೇ ರೀತಿ ನಾವು ವಾಸಿಸುವ ಕೋಣೆಗಳು, ಆವರಣ, ಅಡುಗೆ ಮನೆ ಸ್ವಚ್ಛತೆಯಿಂದ ಕೂಡಿರಬೇಕು ಎಂದು ಕಿವಿಮಾತು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಮಾತನಾಡಿ, ವಿದ್ಯಾರ್ಥಿಗಳು ನಡೆ-ನುಡಿ, ಆಚಾರ- ವಿಚಾರ ಉತ್ತಮಗೊಳಿಸಿಕೊಳ್ಳಬೇಕು. ನಿತ್ಯದ ಜೀವನದಲ್ಲಿ ಸಂಸ್ಕಾರಯುತವಾಗಿ ಬದುಕಬೇಕು. ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಯಶಸ್ವಿ ಮಹಿಳೆ ಇರಬೇಕಾದರೆ, ನಾವು ಶಿಕ್ಷಣವಂತರಾಗಬೇಕು ಎಂದು ಹೇಳಿದರು.

ನಿಲಯ ಪಾಲಕರಾದ ಹಣಮಂತ ಅರವತ್ತು, ಅಶೋಕ ತಳವಾರ, ಮಲ್ಲು ವಾಲಿಕಾರ, ರವೀಂದ್ರಕುಮಾರ ಚವ್ಹಾಣ, ರಮೇಶ ಬಿರಾದಾರ, ಉಮರ ಮಿರ್ಜಿ, ಪುಂಡಲೀಕ ನಂದಗೊಂಡ, ಮಹೇಶ ಸೊಲಂಕರ, ಶಿವಾನಂದ ಅಂಗಡಿ, ರಾಕೇಶ ಕಾಳೆ, ಯಶೋಧ ಕುಕನೊರ, ನಿಂಗಮ್ಮ ಕೊಪ್ಪದ, ಜ್ಯೋತಿ ಔರಸಂಗ, ಅಶ್ವಿನಿ ಹೊಗಾರ, ಶೊಭಾ ಬಿರಗೊಂಡ ಹಾಗೂ ನಿಲಯ ಸಿಬ್ಬಂದಿ ಮತ್ತು ಕಚೇರಿ ಸಿಬ್ಬಂದಿ ಭಾಗವಹಿಸಿದರು. ನಿಲಯ ಪಾಲಕ ಸಂಗನಬಸು ನಾಗಣಸೂರ ಸ್ವಾಗತಿಸಿ, ಕುಮಾರಿ ಲಕ್ಷ್ಮಿ ನಾದ ನಿರೂಪಿಸಿ, ಪುಂಡಲೀಕ ಗೊಂದಳಿ ವಂದಿಸಿದರು.

ಕೆಲಸ ಯಾವುದೇ ಇರಲಿ ಅದನ್ನು ಶಿಸ್ತುಬದ್ಧವಾಗಿ, ಸಮಯ ಮಿತಿಯೊಳಗೆ, ಅತ್ಯುತ್ತಮವಾಗಿ ಮಾಡಬೇಕೆಂಬ ತುಡಿತ- ಆಸೆಯೇ ಸಾಧನೆ, ಯಶಸ್ಸಿನ ಮೊದಲ ಮೆಟ್ಟಿಲು. ಹೀಗಾಗಿ ಉತ್ಕೃಷ್ಟತೆ ತಲುಪಬೇಕೆಂಬ ಹಂಬಲ ಇರಬೇಕು. ಮಾಡುವ ಕೆಲಸವನ್ನು ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ, ಆತ್ಮಸಾಕ್ಷಿ ಮೆಚ್ಚುವಂತೆ ಸಮಯ ಮಿತಿಯೊಳಗೆ ಮಾಡಿ ಮುಗಿಸುವುದೇ ಗುರಿಯಾಗಿರಿಸಿಕೊಳ್ಳಬೇಕು. ಸಿಗುವ ಸಣ್ಣ ಪುಟ್ಟ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಕುಶಲತೆ ಮೈಗೂಡಿಸಿಕೊಳ್ಳಬೇಕು. ಸಾವಿರ ಮೈಲಿಯ ಪ್ರಯಾಣವೂ ಮೊದಲ ಹೆಜ್ಜೆಯಿಂದಲೇ ಪ್ರಾರಂಭವಾಗುತ್ತದೆ. ಅವಕಾಶಗಳು ಯಶಸ್ಸು ತಲುಪುವ ಏಣಿ ಇದ್ದಂತೆ.

ಸಕೀನಾಬೇಗಂ ಪಾಟೀಲ, ಉಪನ್ಯಾಸಕರು, ಸರ್ಕಾರಿ ಪಿಯು ಕಾಲೇಜು