ಹಾವೇರಿ ನಗರದ ರಜನಿ ಸಭಾಂಗಣದಲ್ಲಿ ಬೃಹತ್ ಸಿದ್ಧಚಕ್ರ ಮಹಾಮಂಡಲದ ವಿಧಾನ ಮಹೋತ್ಸವದ ಆರನೇ ದಿನವಾದ ಬುಧವಾರ ಜೈನ ಮಹಿಳಾ ಸಮಾವೇಶ ನಡೆಯಿತು. ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ಹಾವೇರಿ: ಜೈನ ಸಮುದಾಯದ ಶ್ರಾವಕಿಯರು ಪ್ರತಿದಿನ ಜಿನ ದರ್ಶನ ಪಾಲಿಸುವ ಜತೆಗೆ ಕುಲಾಚಾರ ಕುರಿತು ಮಕ್ಕಳಿಗೆ ಕಲಿಸಿ ಕೊಡಬೇಕು. ಲೌಖಿಕ ಶಿಕ್ಷಣ, ಲೌಖಿಕ ಸಂಸ್ಕಾರ ಕೊಡಿಸುವ ಮುಖಾಂತರ ಸಮಾಜದ ಪರಿವರ್ತನೆಗೆ ಮಹತ್ವ ನೀಡಬೇಕು ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಹೇಳಿದರು.
ನಗರದ ರಜನಿ ಸಭಾಂಗಣದಲ್ಲಿ ಬೃಹತ್ ಸಿದ್ಧಚಕ್ರ ಮಹಾಮಂಡಲದ ವಿಧಾನ ಮಹೋತ್ಸವದ ಆರನೇ ದಿನವಾದ ಬುಧವಾರ ಜೈನ ಮಹಿಳಾ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಮಾಜದ ತಾಯಂದಿರಿಂದ ಧರ್ಮ ಉಳಿಸುವ ಕಾರ್ಯವಾಗಬೇಕು. ಮಕ್ಕಳಿಗೆ ಜನುಮ ಕೊಡುವಂತಹ ದಾತರು ಶ್ರಾವಕಿಯರು. ಜೈನ ಧರ್ಮದಲ್ಲಿ ಬಹುಪುಣ್ಯದಿಂದ ಜನ್ಮ ಪಡೆದಿದ್ದೀರಿ. ಜೈನ ಧರ್ಮ ಶ್ರೇಷ್ಠ ಮತ್ತು ಸರ್ವೋತ್ತಮವಾದುದು. ಧರ್ಮದ ಮೂಲವನ್ನು ಕಾಪಾಡಿಕೊಂಡು ಹೋಗಬೇಕಿದೆ. ವಿಧಾನಗಳು, ಪಂಚ ಕಲ್ಯಾಣಗಳನ್ನು ನಡೆಸಿಕೊಂಡು ಹೋಗಬೇಕು. ಮೊದಲು ಅಹಿಂಸಾ ಧರ್ಮ ರಕ್ಷಣೆ ಮಾಡಬೇಕು. ಮಾತನಾಡಿದರೆ ಅಹಿಂಸಾ, ಕೃತಿ, ಕಾಯದಲ್ಲಿ ಅಹಿಂಸೆ, ಉಡುಗೆ ತೊಡಗೆಯಲ್ಲಿ ಅನುಕರಣೆ ಮಾಡಿಕೊಂಡವರೆಲ್ಲ ನಮ್ಮ ಪೂರ್ವಜರು. ಆದರ್ಶದ ಜೀವನ ನಡೆಸಿಕೊಂಡು ಬಂದಿದ್ದಾರೆ ಎಂದರು.ಪ್ರತಿ ಊರಲ್ಲಿಯೂ ವಿಶೇಷ ವಿಧಾನಗಳನ್ನು ಆಯೋಜಿಸಿ, ಶ್ರಾವಕ ಸಂಸ್ಕಾರಗಳನ್ನು ಕೊಡುವ ಶಿಬಿರಗಳನ್ನು ನಡೆಸಬೇಕು. ಕೇವಲ ಮಂತ್ರಗಳನ್ನು ನಡೆಸುವ ಶಿಬಿರ ನಡೆಸದೇ ಜೈನ ತತ್ವಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕಾರ್ಯವಾಗಬೇಕು. ಧರ್ಮದ ಮೂಲ ತಿಳಿಸುವ ಕೆಲಸ ಆಗಬೇಕು. ಮುಸ್ಲಿಂ, ಸಿಖ್, ಹಿಂದೂ ಎಲ್ಲ ಸಮಾಜದವರು ಲೌಕಿಕ ಶಿಕ್ಷಣಕ್ಕೆ ಆದ್ಯತೆ ಕೊಟ್ಟಂತೆ ಜೈನ ಧರ್ಮಕ್ಕೂ ಆದ್ಯತೆ ನೀಡಬೇಕು. ಧರ್ಮದ ಸಂಸ್ಕಾರ, ಸಂಸ್ಕೃತಿಗೆ ಪ್ರಾತಿನಿಧ್ಯ ಕೊಡಬೇಕಿದೆ ಎಂದರು.
ದೇವೇಂದ್ರಕೀರ್ತಿ ಭಟ್ಟಾರಕಾಚಾರ್ಯರು ಮಾತನಾಡಿ, ಬೃಹತ್ ಸಿದ್ಧಚಕ್ರದಲ್ಲಿ ಜೈನಧರ್ಮದ ಆಗಮ ಪರಿಚಯವಾಗುತ್ತದೆ. ಸಮಾಜ ಉಳಿದರೆ ಧರ್ಮವೂ ಉಳಿಯುತ್ತದೆ ಎಂದರು.ಹರ್ಷಾ ನಾಗರಾಜ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು. ದಾವಣಗೆರೆ ಅಖಿಲ ಕರ್ನಾಟಕ ಮಹಿಳಾ ಒಕ್ಕೂಟ ಅಧ್ಯಕ್ಷೆ ಪದ್ಮಾ ಪ್ರಕಾಶ ದೀಪ ಪ್ರಜ್ವಲನೆ ನೆರವೇರಿಸಿದರು. ಸಿದ್ಧಚಕ್ರ ಆರಾಧನಾ ಮಹೋತ್ಸವ ಸಮಿತಿ ಅಧ್ಯಕ್ಷೆ ಸುಜಾತಾ ನಡುವಿನಮನಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಡಾ. ನೀರಜಾ ನಾಗೇಂದ್ರಕುಮಾರ ಅವರು ಪ್ರಸಕ್ತ ಸಾಮಾಜಿಕ ಅಭಿವೃದ್ಧಿಯಲ್ಲಿ ಜೈನ ಮಹಿಳೆಯರ ಪಾತ್ರ ಕುರಿತು ಹಾಗೂ ಶ್ರವಣಬೆಳಗೊಳ ಬಾಹುಬಲಿ ಪ್ರಾಕೃತ ವಿದ್ಯಾಪೀಠದ ನಿವೃತ್ತ ಪ್ರಾಕೃತ ಪ್ರಾಧ್ಯಾಪಕಿ ಡಾ. ಕುಸುಮಾ ಪ್ರಕಾಶ ಅವರು ಜೈನ ನೋಂಪಿಗಳ ಮಹತ್ವ ಉಪನ್ಯಾಸ ನೀಡಿದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ, ತುಮಕೂರಿನ ಜಲಜಾ, ಗೋಕಾಕ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಚಂದಾ ಶೋಲಾಪುರೆ, ಬೆಳ್ಳೂರಿನ ಲಲಿತಾ ಪ್ರಸನ್ನ ಕುಮಾರ, ಹುಬ್ಬಳ್ಳಿಯ ತ್ರಿಶಲಾ ಮಾಲಗಿತ್ತಿ, ತೀರ್ಥಹಳ್ಳಿಯ ಡಾ. ಜೀವೇಂದರ ಜೈನ, ಬೆಳಗಾವಿಯ ಲಲಿತಾ ಮಗದುಮ್, ಬಬಿತಾ ಕಾರ್ಗಲ್, ಮಹಾಲಕ್ಷ್ಮೀ ಪ್ರಮೋದಕುಮಾರ, ಚಂದ್ರಕಲಾ ಜೈನ, ವರ್ಷಾ ಹೂಲಿ, ಶ್ರೀದೇವಿ ದುಂಡಸಿ, ವಿನೋದಾ ಜೈನ, ಪ್ರೇಮಾ ಸಾತಗೊಂಡ, ಉಷಾ ಕಳಸೂರ, ಪದ್ಮಾ ಮಾಣಿಕಚಂದ ಲಾಡರ, ಆರತಿ ಹಜಾರಿ, ಸ್ವರೂಪ ಉಪಾಧ್ಯೆ, ಬಬಿತಾ ದೊಡ್ಡಮನಿ ಉಪಸ್ಥಿತರಿದ್ದರು.