ಹಗರಿಬೊಮ್ಮನಹಳ್ಳಿ: ಗಿಡ ಮರ ಆಧಾರಿತ ತೋಟಗಾರಿಕೆ ಕೃಷಿಯಿಂದ ಬರ ಹಿಮ್ಮೆಟ್ಟಿಸಲು ಸಾಧ್ಯವಾಗುವಂತೆಯೇ, ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಮೌಲ್ಯವರ್ಧನೆಯತ್ತ ಚಿಂತಿಸಿದರೆ ಮಾತ್ರ ಕೃಷಿ ಹಾಗೂ ಕೃಷಿಕ ಕುಟುಂಬಗಳ ನೆಮ್ಮದಿ ಸಾಧ್ಯವಾಗುತ್ತದೆ ಎಂದು ಮ್ಯಾನೋರ್ ಕೃಷಿ ಫಾರ್ಮ್‌ನ ವ್ಯವಸ್ಥಾಪಕ ವಸಂತ್ ಮಾಲವಿ ಪ್ರತಿಪಾದಿಸಿದರು. ಕೂಡ್ಲಿಗಿಯ ತೋಟಗಾರಿಕೆ ಇಲಾಖೆ, ಪರಂಪರಾಗತ ಕೃಷಿ ವಿಕಾಸ ಯೋಜನೆ ಮತ್ತು ಮಂಡ್ಯದ ಕರ್ಟಸಿ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಕೃಷಿ ಅಧ್ಯಯನ ಪ್ರವಾಸ ನಿಮಿತ್ತ ಪಟ್ಟಣದ ಹೊರವಲಯದಲ್ಲಿರುವ ಅವರ ಮ್ಯಾನೋರ್ ಕೃಷಿ ಫಾರ್ಮ್‌ಗೆ ಭೇಟಿ ನೀಡಿದ ಹುಲಿಕೆರೆ ಹಾಗೂ ಸಕಲಾಪುರ ಹಟ್ಟಿಯ 50ಕ್ಕೂ ಹೆಚ್ಚು ರೈತರನ್ನುದ್ದೇಶಿಸಿ ಮಾತನಾಡಿದರು.

ತಮ್ಮ ತೋಟದುದ್ದಕ್ಕೂ ರೈತರನ್ನು ಸುತ್ತಾಡಿಸಿದ ಅವರು, ಪ್ರತಿ ಗಿಡದಿಂದ ಲಭಿಸುವ ಆದಾಯದ ಲೆಕ್ಕಾಚಾರಗಳನ್ನು ಮನವರಿಕೆ ಮಾಡಿಕೊಟ್ಟರು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಪ್ರತಿ ರೈತ ಚಿಂತಿಸಲು ಈಗ ಸಕಾಲವಾಗಿದೆ. ಕುಟುಂಬದ ಸದಸ್ಯರ ಜೊತೆಗೂಡಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು. ನಿಮ್ಮ ನಿಮ್ಮ ಕೃಷಿ ಉತ್ಪನ್ನಗಳಿಗೆ ನೀವೇ ಮಾರುಕಟ್ಟೆ ಸೃಷ್ಟಿಸಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.

ತೋಟದಲ್ಲಿನ 150ಕ್ಕೂ ಹೆಚ್ಚಿನ ಸಮಗ್ರ ಉತ್ಪನ್ನಗಳಿಗೆ ನಾವೇ ಬೆಲೆ ಕಟ್ಟುವ ಜತೆಗೆ ಸಾಮಾಜಿಕ ಜಾಲತಾಣಗಳ ಸಹಯೋಗದಲ್ಲಿ ಸಾವಿರಾರು ಗ್ರಾಹಕರ ಮನೆ ಬಾಗಿಲಿಗೆ ವಿತರಿಸುತ್ತೇವೆ. ಉತ್ಪಾದನೆ ಮತ್ತು ಮಾರಾಟದ ವಿಷಯದಲ್ಲಿ ಅಳವಡಿಸಿಕೊಳ್ಳಬೇಕಾಗಿರುವ ಪ್ರಾಮಾಣಿಕ ಹೆಜ್ಜೆಗಳ ಕುರಿತು ರೈತರಿಗೆ ಮನದಟ್ಟು ಮಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೈತ ವಿಶ್ವೇಶ್ವರ ಸಜ್ಜನ ಮಾತನಾಡಿ, ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಅವಾಂತರಗಳು ರೈತರ ಕೃಷಿ ಬದುಕನ್ನು ಅತಂತ್ರವಾಗಿಸಿವೆ. ಮಾರುಕಟ್ಟೆಯ ಅಪಾರ ಜ್ಞಾನವಿರುವ ವಸಂತ್ ಮಾಲವಿ ಅವರ ಸಂಪರ್ಕದಲ್ಲಿದ್ದರೆ ಕೃಷಿ ದಲ್ಲಾಳಿಗಳಿಂದ ರೈತರು ಮುಕ್ತರಾಗಬಹುದು ಎಂದು ಆಶಿಸಿದರಲ್ಲದೇ; ತಮ್ಮ ಜಮೀನಿನ ಬೇಲ ಹಾಗೂ ಇತರೇ ಕಾಡಿನ ಹಣ್ಣಗಳ ಮೌಲ್ಯವರ್ದನೆಗೆ ಕೈಗೊಂಡಿರುವ ಉಪಾಯಗಳನ್ನು ವಿವರಿಸಿದರು.ಇದೇ ವೇಳೆ ಕೂಡ್ಲಿಗಿ ತೋಟಗಾರಿಕೆ ಸಹಾಯಕ ನಿರ್ದೇಶಕ ಸಮೀವುಲ್ಲಾ, ಕರ್ಟಸಿ ಇಂಡಿಯಾ ಸಿಇಒ ಪದ್ಮಕಲಾ, ಯೋಗಗುರು ಶಶಿಧರ ಗುರೂಜಿ ಮಾತನಾಡಿದರು. ಫಾರ್ಮ್‌ ಹೌಸ್‌ನ ಚಂದ್ರರೇಖಾ ಉಪಸ್ಥಿತರಿದ್ದರು.