ಜಿಡಿಪಿಗೆ ಮುಖ್ಯ ಕೊಡುಗೆ ಕೃಷಿ ಕ್ಷೇತ್ರದ್ದಾಗಿದ್ದು, ಕೃಷಿ ಉತ್ಪನ್ನಗಳ ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡಿಂಗ್‌ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಹೇಳಿದರು.
ಶಿವಮೊಗ್ಗ: ಜಿಡಿಪಿಗೆ ಮುಖ್ಯ ಕೊಡುಗೆ ಕೃಷಿ ಕ್ಷೇತ್ರದ್ದಾಗಿದ್ದು, ಕೃಷಿ ಉತ್ಪನ್ನಗಳ ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡಿಂಗ್‌ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಹೇಳಿದರು.
ಇಲ್ಲಿನ ನವುಲೆಯ ಕೃಷಿ ಕಾಲೇಜಿನಲ್ಲಿ “ಅಡಕೆ ಸಮೃದ್ಧಿಗಾಗಿ ಕಾಳು ಮೆಣಸಿನ ಅಂತರ ಬೆಳೆ” ಎಂಬ ವಿಷಯದ ಬಗ್ಗೆ ಏರ್ಪಡಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿ, ಕಾಳು ಮೆಣಸು ಸೇರಿದಂತೆ ಯಾವುದೇ ಸಂಬಾರು ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡಿದಾಗ ಆರ್ಥಿಕತೆ ಬೆಳೆಯಲು ಸಾಧ್ಯವಾಗುತ್ತದೆ. ಆದ್ದರಿಂದ ರೈತರು ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.ಗೋವಾದಿಂದ ಕನ್ಯಾಕುಮಾರಿವರೆಗೆ ಕಾಳು ಮೆಣಸನ್ನು ಪ್ಲಾಂಟೇಷನ್ ಬೆಳೆಯಾಗಿ ಬೆಳೆಯಲಾಗುತ್ತಿದೆ. ಅಡಕೆ ಮತ್ತು ಸಿಲ್ವರ್ ಓಕ್ ಮರಗಳಿಗೆ ಕಾಳು ಮೆಣಸ ಬಳ್ಳಿಯನ್ನು ಹಬ್ಬಿಸಬೇಕು. ಊರು-ಕೇರಿಗಳಲ್ಲಿ ನೂರಾರು ತಳಿಗಳನ್ನು ಬೆಳೆದು ರೈತರು ಪ್ರಸಿದ್ಧಪಡಿಸಿದ್ದಾರೆ. ಈ ತಳಿಗಳಿಗೆ ಟ್ಯಾಗ್‌ಲೈನ್ ನೀಡಿ, ಬ್ರ್ಯಾಂಡಿಂಗ್ ಮಾಡಿ ಮಾರಾಟ ಮಾಡಿದರೆ ಉತ್ತಮ ಆದಾಯ ಪಡೆಯಲು ಸಾಧ್ಯವಾಗುತ್ತದೆ. ಕಾಳು ಮೆಣಸಿನ ಪ್ರತಿ ತಳಿಗಳೂ ವಿಶೇಷವಾಗಿದ್ದು, ತಳಿಗಳ ಉತ್ಪಾದನೆಯನ್ನು ಹೆಚ್ಚಿಸುವುದು, ಸಾವಯವವಾಗಿ ಬೆಳೆಯುವುದು ಮತ್ತು ಮಾರುಕಟ್ಟೆ, ರಫ್ತು ಇತರೆ ವಿಷಯಗಳ ಕುರಿತು ಕಾರ್ಯಾಗಾರದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಪ್ರಧಾನಮಂತ್ರಿ ಕೃಷಿಕ ಯೋಜನೆಯಡಿ ರೈತರಿಗೆ ಶೇ.50 ಸಬ್ಸಿಡಿ ಯೊಂದಿಗೆ ₹30 ಲಕ್ಷ ಸಾಲ ನೀಡಲಾಗುವುದು. ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ಪ್ರಾಜೆಕ್ಟ್ ವರದಿ ಸಿದ್ಧಪಡಿಸಲು ಮತ್ತು ಸಾಲ ಕೊಡಿಸುವಲ್ಲಿ ಸಹಾಯ ನೀಡಲಾಗುವುದು ಎಂದರು.₹2.10 ಕೋಟಿ ವೆಚ್ಚದಲ್ಲಿ ಮೂಡಿಗೆರೆಯಲ್ಲಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದು, ಇಲ್ಲಿ ಕಾಳು ಮೆಣಸು ಬೆಳೆಗಾರರು ಉಚಿತವಾಗಿ ಸಂಸ್ಕರಣೆ ಮಾಡಿಕೊಳ್ಳಬಹುದು. ಹಾಗೂ ಕೆಪಿಕ್‌ಯಿಂದ ರೈತರಿಗೆ, ಬೆಳೆಗಾರರಿಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಐಸಿಎಆರ್-ಐಐಎಸ್‌ಆರ್ ಕೊಝಿಕೊಡ್ ನಿರ್ದೇಶಕ ಆರ್.ದಿನೇಶ್ ಮಾತನಾಡಿ, ಕಾಳುಮೆಣಸು ಹಲವಾರು ರೈತರ ಜೀವನೋಪಾಯವಾಗಿದ್ದು, ಶೇ.15ರಷ್ಟು ಮಾತ್ರ ರಫ್ತು ಮಾಡಲಾಗುತ್ತಿದೆ. ರಫ್ತಿನ ಪ್ರಮಾಣ ಇನ್ನೂ ಹೆಚ್ಚುವ ನಿಟ್ಟಿನಲ್ಲಿ ಬೆಳೆಯನ್ನು ಉತ್ತೇಜನಗೊಳಿಸಬೇಕಿದೆ ಎಂದರು.ಐಸಿಎಆರ್-ಐಐಎಸ್‌ಆರ್ ನಿರ್ದೇಶಕ(ಕೊಝಿಕೊಡ್) ಡಾ.ಬಾಲಚಂದ್ರ ಹೆಬ್ಬಾರ್ ಮಾತನಾಡಿ , ಇಡಿ ವಿಶ್ವ ಉತ್ತಮ ಆದಾಯ ನೀಡುವ ಬೆಳೆ ಕಾಳು ಮೆಣಸು ಎಂದು ನಂಬಿದೆ. ಶಿವಮೊಗ್ಗ ಅಡಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯುವ ಜಿಲ್ಲೆಯಾಗಿದ್ದು, ಅಡಕೆ ಜೊತೆ ಅಂತರ ಬೆಳೆಯಾಗಿ ಕಾಳುಮೆಣಸನ್ನು ಬೆಳೆದರೆ ಉತ್ತಮ ಆದಾಯ ಪಡೆಯಲು ಸಾಧ್ಯವಾಗುತ್ತದೆ. ಈ ಬೆಳೆ ಹವಾಮಾನ ಸೂಕ್ಷ್ಮತೆಯನ್ನು ಉತ್ತಮವಾಗಿ ನಿರ್ವಹಿಸಲು ಸಹಕಾರಿಯಾಗಿದೆ. ನೋಡಲೂ ಚೆನ್ನಾಗಿ ಕಾಣುವ ಈ ಬೆಳೆ ಅಡಕೆಯೊಂದಿಗೆ ಬೆಳೆಯಲು ಅತ್ಯುತ್ತಮ ಬೆಳೆಯಾಗಿದೆ ಎಂದು ತಿಳಿಸಿದರು.
ಎಐಸಿಆರ್‌ಪಿ, ಐಸಿಎಆರ್-ಐಎಎಸ್‌ಆರ್ ನ ಪ್ರಾಜೆಕ್ಟ್ ಕೋಆರ್ಡಿನೇಟರ್ ಡಾ.ಪ್ರಸಾದ್ ಮಾತನಾಡಿ, ಶೇ.50ರಷ್ಟು ಅಡಕೆ ಬೆಳೆಯಲ್ಲಿ ಕಾಳು ಮೆಣಸನ್ನು ಬೆಳೆದರೂ ದೇಶೀಯವಾಗಿ ಅಗತ್ಯವಿರುವ ಕಾಳು ಮೆಣಸಿನ ಬೇಡಿಕೆಯನ್ನು ಪೂರೈಸಬಹುದು. ಜೊತೆಗೆ ಆಮದನ್ನು ಕಡಿತಗೊಳಿಸಬಹುದಾಗಿದ್ದು, ಮುಂದಿನ ದಿನಗಳಲ್ಲಿ ಆಮದು ಪ್ರಮಾಣ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಜೈವಿಕವಾಗಿ ಉತ್ಪನ್ನಗಳನ್ನು ಬೆಳೆಯುವ ಕಡೆ ಹೆಚ್ಚಿನ ಒತ್ತು ನೀಡಬೇಕಿದ್ದು, ಕೃಷಿ ಉತ್ಪನ್ನ ಸಂಘಗಳ(ಎಫ್‌ಪಿಓ)ಗಳ ಸಬಲೀಕರಣಕ್ಕೆ ಶ್ರಮಿಸಬೇಕಿದೆ ಎಂದರು.ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಮಾತನಾಡಿ, ಮೂಡಿಗೆರೆಯಲ್ಲಿ ಕಾಳುಮೆಣಸು ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದು, ಕಾಳುಮೆಣಸು ಬೆಳೆಗಾರರು ಉಚಿತವಾಗಿ ಇದರ ಸದ್ಬಳಕೆ ಮಾಡಕೊಳ್ಳಬೇಕು. ಅಡಕೆ, ಕಾಫಿ ಬೆಳೆಯೊಂದಿಗೆ ಕಾಳು ಮೆಣಸನ್ನು ಉತ್ತಮವಾಗಿ ಬೆಳೆಯಬಹುದಾಗಿದ್ದು, ರೈತರು ಮೌಲ್ಯವರ್ಧನೆಗೆ ಹೆಚ್ಚಿನ ಮಾನ್ಯತೆ ನೀಡಬೇಕು. ರೈತರು ಕಾಳುಮೆಣಸು ಬೆಳೆಯಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿದ್ದಾರೆ. ಯಶಸ್ವಿಯಾಗಿದ್ದಾರೆ. ಸರ್ಕಾರ ಮತ್ತು ಕೆಪೆಕ್ ಸಹಕಾರ ಸಹ ಇದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ದೇವಿಕುಮಾರ್, ಶಶಾಂಕ್, ವಿವಿ ಶಿಕ್ಷಣ ನಿರ್ದೇಶಕ ಬಿ.ಹೇಮ್ಲಾನಾಯ್ಕ, ದುಷ್ಯಂತ ಕುಮಾರ್, ಕೃಷಿ ಕಾಲೇಜಿನ ಡೀನ್ ಡಾ.ತಿಪ್ಪೇಶ್, ಡೀನ್ ಡಾ.ವಿ.ಶ್ರೀನಿವಾಸ್ ಡಾ.ಪ್ರದೀಪ್, ಡಾ.ನಾಗರಾಜಪ್ಪ ಅಡಿವಪ್ಪರ್ ಮತ್ತಿತರರು ಇದ್ದರು. 30ಕ್ಕೂ ಹೆಚ್ಚು ಕಾಳುಮಣಸಿನ ತಳಿಗಳ ಪ್ರದರ್ಶನಶಿವಮೊಗ್ಗ ನವುಲೆಯ ಕೃಷಿ ಕಾಲೇಜಿನಲ್ಲಿ ಬುಧವಾರ “ಅಡಕೆ ಸಮೃದ್ಧಿಗಾಗಿ ಕಾಳು ಮೆಣಸಿನ ಅಂತರ ಬೆಳೆ” ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾರತದ ಬೇರೆ ಬೇರೆ ರಾಜ್ಯಗಳಿಂದ 500ಕ್ಕೂ ಹೆಚ್ಚು ಅಧಿಕಾರಿಗಳು, ವಿಜ್ಞಾನಿಗಳು, ರೈತರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. 30ಕ್ಕೂ ಹೆಚ್ಚು ಕಾಳುಮಣಸಿನ ತಳಿಗಳ ಪ್ರದರ್ಶನ ಹಾಗೂ 20ಕ್ಕೂ ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣದಲ್ಲಿ ಮಂಡಿಸಿದ ‘ವಿಷಯದ ಪುಸ್ತಕ’, ‘ಅಡಕೆಯಲ್ಲಿ ಅಂತರ ಬೆಳೆಯಾಗಿ ಕಾಳುಮೆಣಸು’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಇದೇ ವೇಳೆ ಸಸ್ಯ ತಳಿ ಸಂರಕ್ಷಣೆ ಹಾಗೂ ರೈತರ ಹಕ್ಕುಗಳ ಪ್ರಾಧಿಕಾರದಲ್ಲಿ ನೋಂದಾಯಿಸಿದ ನಾಲ್ಕು ಕಾಳುಮೆಣಸಿನ ತಳಿಗಳ ನೋಂದಣಿ ಪ್ರಮಾಣಪತ್ರವನ್ನು ರೈತರಿಗೆ ನೀಡಲಾಯಿತು.