ನರಸಿಂಹರಾಜಪುರಕಂದಾಯ ಇಲಾಖೆ ನೌಕರರು ಹಾಗೂ ಜನ ಪ್ರತಿನಿಧಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಂದಾಯ ಇಲಾಖೆ ಯವರು, ಜನಪ್ರತಿನಿಧಿಗಳು ಒಟ್ಟಾಗಿ ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

- ಕುವೆಂಪು ಕ್ರೀಡಾಂಗಣದಲ್ಲಿ 2 ದಿನದ ಜಿಲ್ಲಾ ಮಟ್ಟದ ಕಂದಾಯ ಕಲಾ ಕ್ರೀಡಾ ಮಹೋತ್ಸವ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಂದಾಯ ಇಲಾಖೆ ನೌಕರರು ಹಾಗೂ ಜನ ಪ್ರತಿನಿಧಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಂದಾಯ ಇಲಾಖೆ ಯವರು, ಜನಪ್ರತಿನಿಧಿಗಳು ಒಟ್ಟಾಗಿ ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಶುಕ್ರವಾರ ಕುವೆಂಪು ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕಂದಾಯ ಕಲಾ ಕ್ರೀಡಾ ಮಹೋತ್ಸವ ಉದ್ಘಾಟಿಸಿ ಮಾತನಾಡಿ ಸರ್ಕಾರದ ಪಂಚ ಗ್ಯಾರಂಟಿಯನ್ನು ಕಂದಾಯ ಇಲಾಖೆ ನೌಕರರು ಬಡವರು, ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಿದ್ದಾರೆ. ಕಂದಾಯ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಒಬ್ಬ ನೌಕರರೇ ಹಲವಾರು ಹುದ್ದೆಗಳನ್ನು ಜವಾ ಬ್ದಾರಿಯಿಂದ ನಿರ್ವಹಣೆ ಮಾಡಿದ್ದಾರೆ. ಖಾಲಿ ಹುದ್ದೆ ಭರ್ತಿ ಮಾಡಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಂದಾಯ ಇಲಾಖೆಯಲ್ಲಿ ಹಲವು ಸುಧಾರಣೆ ತಂದಿದ್ದಾರೆ. ಕಂದಾಯ ಉಪ ಗ್ರಾಮ, ಪೋಡಿ ಮುಕ್ತ ಗ್ರಾಮ, ಆಡಳಿತಕ್ಕೆ ಅನುಕೂಲವಾಗುವಂತೆ ಇ-ಕಚೇರಿ ತೆರೆದು ಆಡಳಿತದಲ್ಲಿ ಸುಧಾರಣೆ ತಂದಿದ್ದಾರೆ ಎಂದರು.

ಸರ್ಕಾರ 7 ನೇ ವೇತನ ಆಯೋಗ ಜಾರಿಗೆ ತಂದಿದೆ. ಹೊಸ ಪಿಂಚಣಿ ಪದ್ಧತಿ ಬೇಡ, ಹಳೇ ಪಿಂಚಣಿ ಮುಂದುವರಿ ಸಬೇಕು ಎಂದು ಸರ್ಕಾರಿ ನೌಕರರು ಪ್ರತಿಭಟಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸರ್ಕಾರ 11,300 ನೌಕರರನ್ನು ಹಳೇ ಪಿಂಚಣಿ ವ್ಯಾಪ್ತಿಗೆ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲೂ ಘೋಷಣೆ ಮಾಡಿದ್ದಾರೆ. ಅಲ್ಲದೆ ಸರ್ಕಾರಿ ಮಹಿಳಾ ನೌಕರ ರಿಗೆ 6 ತಿಂಗಳು ಶಿಶು ಪಾಲನ ರಜೆ, ಋತು ಚಕ್ರ ರಜೆ, ಸಂಜೀವಿನಿ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.

ದಿನ ನಿತ್ಯ ಬದುಕಿನಲ್ಲಿ ಕ್ರೀಡೆ ಅತಿ ಅವಶ್ಯಕ. ಕ್ರೀಡೆ, ಯೋಗಾಸನದಿಂದ ಆರೋಗ್ಯವಾಗಿರಬಹುದು. ಸರ್ಕಾರಿ ನೌಕರರು ಪ್ರತಿನಿತ್ಯ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಇದರಿಂದ ಹೊರ ಬರಲು ಕ್ರೀಡೆ ಸಹಕಾರಿ. ನಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನಾಗಿದ್ದಾಗ ಚಿಕ್ಕಮಗಳೂರು ಜಿಲ್ಲೆ ಅಭಿವೃದ್ದಿಯಲ್ಲಿ 2 ನೇ ಸ್ಥಾನಕ್ಕೆ ಬಂದಿತ್ತು. ಕಂದಾಯ ಇಲಾಖೆ ನೌಕರರು ಉತ್ತಮ ಕೆಲಸ ಮಾಡಿ ಜಿಲ್ಲೆಗೆ ಹೆಸರು ತರಬೇಕು ಎಂದು ಕರೆ ನೀಡಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮಾತನಾಡಿ, ಸರ್ಕಾರಿ ನೌಕರರು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸೋಲು ಹಾಗೂ ಗೆಲುವನ್ನು ಸಮಚಿತ್ತದಿಂದ ಸ್ವೀಕಾರ ಮಾಡುವ ಮನಸ್ಸು ಸಿದ್ದಗೊಳ್ಳುತ್ತದೆ. ಇದರಿಂದ ಜೀವನದಲ್ಲೂ ಸೋಲು, ಗೆಲುವುಎದುರಿಸಲು ಸಹಾಯವಾಗಲಿದೆ. ಅಲ್ಲದೆ ಪ್ರತಿ ನಿತ್ಯ ಕ್ರೀಡೆಯಲ್ಲಿ ತೊಡಗಿಸಿ ಕೊಂಡರೆ ನಾಯಕತ್ವ ಗುಣ ಬೆಳೆಯುತ್ತದೆ. ಇದರಿಂದ ಯಾವುದೇ ಸರ್ಕಾರಿ ಕಚೇರಿಯಲ್ಲಿ ಒಂದು ತಂಡವಾಗಿ ಕೆಲಸ ಮಾಡಲು ಅನುಕೂಲ. ಇಂದಿನ ಒತ್ತಡದ ಬದುಕಿನಲ್ಲಿ ಜೀವನ ಶೈಲಿಯೇ ಏರು ಪೇರಾಗಿದೆ. ಆರೋಗ್ಯ ಕಾಪಾಡಲು ಕ್ರೀಡೆ ಅವಶ್ಯಕ. ದೈಹಿಕ ಆರೋಗ್ಯ ಚೆನ್ನಾಗಿದ್ದರೆ ಮನಸ್ಸು ಸಹ ಪ್ರಫುಲ್ಲವಾಗುತ್ತದೆ. ಆದ್ದರಿಂದ ಸರ್ಕಾರಿ ನೌಕರರು, ಕಂದಾಯ ಇಲಾಖೆಯವರು ಪ್ರತಿನಿತ್ಯ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಹಲವಾರು ಸಮಸ್ಯೆ ಬಗೆಹರಿಸಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸ ಬೇಕಾಗಿದೆ. ರೈತರ ಸಮಸ್ಯೆ ಹೆಚ್ಚಾಗಿದೆ. ಆದ್ದರಿಂದ ಸರ್ಕಾರಿ ಕಚೇರಿಗೆ ಬರುವ ರೈತರ ಸಮಸ್ಯೆಗಳು ಕೇಳಿ ಬಗೆಹರಿಸಬೇಕು. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕಂದಾಯ ಇಲಾಖೆನೌಕರರಿಗೆ ಕರೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ,ತರೀಕೆರೆ ಉಪ ವಿಭಾಗಾಧಿಕಾರಿ ಎನ್.ವಿ.ನಟೇಶ್, ನರಸಿಂಹರಾಜಪುರ ತಹಸೀಲ್ದಾರ್ ಡಾ.ನೂರಲ್ ಹುದಾ, ಚಿಕ್ಕಮಗಳೂರು ತಹಸೀಲ್ದಾರ್ ಕೆ.ಎಸ್.ರೇಷ್ಮಾ, ಕಡೂರು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ,ಮೂಡಿಗೆರೆ ತಹಸೀಲ್ದಾರ್ ಎಸ್.ಅಶ್ವಿನಿ, ಕಳಸ ತಹಸೀಲ್ದಾರ್ ಎಸ್.ಶಾರದಾ ,ಅಜ್ಜಂಪುರ ತಹಸೀಲ್ದಾರ್ ಪಿ.ವಿ.ವಿನಾಯಕ ಸಾಗರ್, ಕೊಪ್ಪ ತಹಸೀಲ್ದಾರ್ ಲಿಖಿತಾ ಮೋಹನ್, ಶೃಂಗೇರಿ ತಹಸೀಲ್ದಾರ್ ಅನೂಪ್ ಸಂಜೋಗ್, ತರೀಕೆರೆ ತಹಸೀಲ್ದಾರ್ ವಿಶ್ವಜಿತ್ ಮೆಹತಾ,ಕಂದಾಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್, ಕೊಪ್ಪ ಎಪಿಎಂಸಿ ಅಧ್ಯಕ್ಷ ಎಸ್.ಡಿ.ರಾಜೇಂದ್ರ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಜುಬೇದಾ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ ಶೆಟ್ಟಿ,ಮಾಜಿ ಸದಸ್ಯ ವಸೀಂ ಇದ್ದರು.

ಶಾಸಕ ಟಿ.ಡಿ.ರಾಜೇಗೌಡ ಕ್ರೀಡಾ ಜ್ಯೋತಿ ಸ್ವೀಕಾರ ಮಾಡಿದರು. ರೆವಿನ್ಯೂ ಇನ್ಸೆಪೆಕ್ಟರ್ ಮಂಜುನಾಥ್ ಸ್ವಾಗತಿಸಿದರು. ನಂತರ ಶಾಸಕ ಟಿ.ಡಿ.ರಾಜೇಗೌಡ ಕ್ರಿಕೆಟ್ ಬ್ಯಾಟಿಂಗ್ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.

-- ಬಾಕ್ಸ್ ---

ಇಂದು ವಿಜೇತರಿಗೆ ಬಹುಮಾನ ವಿತರಣೆ

2 ದಿನಗಳ ಕಂದಾಯ ಇಲಾಖೆ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಿತು. ಕ್ರಿಕೆಟ್, ವಾಲೀಬಾಲ್, ಷಟಲ್ ಬ್ಯಾಡ್ಮಿಟನ್, ಬಾಲ್ ಬ್ಯಾಡ್ಮಿಟನ್, ಹಗ್ಗ ಜಗ್ಗಾಟ, ಗೋಣಿಚೀಲ ಓಟ, ಶಾರ್ಟ್ ಪುಟ್, ತಟ್ಟೆ ಎಸೆತ, ಟೆನಿಕ್ಯಾಟ್, ಚೆಸ್, ಕೇರಂ ನಡೆಯಿತು. ಮಹಿಳೆಯರಿಗಾಗಿ ಮಾತ್ರ ಥ್ರೋಬಾಲ್ ಪಂದ್ಯಾವಳಿ ನಡೆಯಿತು. ಶನಿವಾರ ಬೆಳಿಗ್ಗೆಯಿಂದ ಸಂಜೆವರೆಗೂ ಕ್ರೀಡಾ ಕೂಟ ಮುಂದುವರಿಯಲಿದೆ. ಸಂಜೆ ಬಿ.ಎಚ್.ಕೈಮರದ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ನಡೆಯಲಿದೆ.