ಗಡಿ ಜಿಲ್ಲೆ ಚಾಮರಾಜನಗರ ಕಲೆಗೆ ಹೆಸರುವಾಸಿಯಾಗಿದೆ. ಸರ್ಕಾರಿ ನೌಕರರು ತಮ್ಮಲ್ಲಿರುವ ಕಲಾಪ್ರತಿಭೆ ಅನಾವರಣಗೊಳಿಸಲು ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಕಚೇರಿ ಕಾರ್ಯಚಟುವಟಿಕೆಗಳ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನೌಕರರಿಗೆ ಕ್ರೀಡಾ ಸ್ಪರ್ಧೆ ಅವಶ್ಯವಾಗಿದೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ದಿನನಿತ್ಯದ ಒತ್ತಡದ ಕೆಲಸ- ಕಾರ್ಯಗಳಲ್ಲಿ ಮಗ್ನರಾಗುವ ಸರ್ಕಾರಿ ನೌಕರರು ತಮ್ಮ ಶಾರೀರಿಕ ಹಾಗೂ ಮಾನಸಿಕ ಸುಸ್ಥಿತಿ ಕಾಪಾಡಿಕೊಳ್ಳಲು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಂತೆ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಸಲಹೆ ಮಾಡಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಸಹಯೋಗದಲ್ಲಿ ಆಯೋಜಿಸಲಾಗಿರುವ 2 ದಿನಗಳ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿ ಜಿಲ್ಲೆ ಚಾಮರಾಜನಗರ ಕಲೆಗೆ ಹೆಸರುವಾಸಿಯಾಗಿದೆ. ಸರ್ಕಾರಿ ನೌಕರರು ತಮ್ಮಲ್ಲಿರುವ ಕಲಾಪ್ರತಿಭೆ ಅನಾವರಣಗೊಳಿಸಲು ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಕಚೇರಿ ಕಾರ್ಯಚಟುವಟಿಕೆಗಳ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನೌಕರರಿಗೆ ಕ್ರೀಡಾ ಸ್ಪರ್ಧೆ ಅವಶ್ಯವಾಗಿದೆ. ಹಾಗೆಯೇ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರಿ ನೌಕರರ ಕಾರ್ಯವೈಖರಿ ಮುಖ್ಯವಾಗಿದೆ ಎಂದ ಶಾಸಕರು, ತಾವು ಸಹ ಶಾಲಾ ದಿನಗಳಲ್ಲಿ ಉತ್ತಮ ಖೋ ಖೋ ಕ್ರೀಡಾಪಟುವಾಗಿದ್ದನ್ನು ಸ್ಮರಿಸಿಕೊಂಡರು.ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, 50- 60ರ ಆಸುಪಾಸಿನಲ್ಲಿರುವ ನೌಕರರು ಕ್ರೀಡಾಕೂಟದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಕ್ರೀಡೆಯಲ್ಲಿ ಸೋಲು- ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಪ್ರಮುಖವಾಗಿದೆ. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಮಾಡಿಕೊಳ್ಳಬೇಕು. ಎಲ್ಲಾ ನೌಕರರು ಕ್ರೀಡಾಸ್ಫೂರ್ತಿ ಮೆರೆಯಬೇಕು. ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಕ್ರೀಡೆ ಸರ್ಕಾರಿ ನೌಕರರಿಗೆ ಅತೀ ಅವಶ್ಯವಾಗಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಮಾತನಾಡಿ, ಒತ್ತಡದ ಕೆಲಸಗಳನ್ನು ನಿರ್ವಹಿಸುವ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸಿ ಮನೋಲ್ಲಾಸ ಹೊಂದಬೇಕು. ಜಿಲ್ಲೆಗೆ ಕೀರ್ತಿ ತರಬೇಕು. ತೀರ್ಪುಗಾರರು ನಿಷ್ಪಕ್ಷಪಾತವಾಗಿ ತೀರ್ಪು ನೀಡುವ ಮೂಲಕ ಕ್ರೀಡಾ ಮನೋಭಾವ ಮೆರೆಯಬೇಕು. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರಿ ನೌಕರರು ಉತ್ತಮ ಕೊಡುಗೆ ನೀಡುವಂತೆ ಕಿವಿಮಾತು ಹೇಳಿದರು.ಇದೇ ವೇಳೆ ಗುಜರಾತ್ ರಾಜ್ಯದಲ್ಲಿ ನಡೆದ ರಾಷ್ಟ್ರಮಟ್ಟದ ಖೋ ಖೋ ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಜೂನಿಯರ್ ವಿಭಾಗದಲ್ಲಿ ವಿಜೇತರಾದ ಕ್ರೀಡಾಪಟು, ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರದ ಚಂದನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಂ.ಎನ್. ಶಶಿಧರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಸುರೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರಾದ ಡಾ. ಸಿ.ಎನ್. ರೇಣುಕಾದೇವಿ, ಸಂಘದ ಜಿಲ್ಲಾ ಶಾಖೆಯ ಗೌರವಾಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.