ಕನ್ನಡಪ್ರಭ ವಾರ್ತೆ, ತುಮಕೂರುಸಾರ್ವಜನಿಕ ಉದ್ಯಮವಾದ ಕರ್ನಾಟಕ ವಿದ್ಯುತ್ ವಿತರಣಾ ಸಂಸ್ಥೆಯಾದ ಕೆಪಿಟಿಸಿಎಲ್ ಮತ್ತು ಬೆಸ್ಕಾಂ, ಎಸ್ಕಾಂಗೆ ಸಂಬಂಧಿಸಿದ ವಿದ್ಯುತ್ ವಿತರಣಾ ಪರವಾನಗಿಯನ್ನು ಟಾಟಾ ಪವರ್ ಕಂಪೆನಿಗೆ ನೀಡಬಾರದು ಎಂದು ಆಗ್ರಹಿಸಿ ನಗರದ ಕೋತಿ ತೋಪಿನಲ್ಲಿರುವ ಬೆಸ್ಕಾಂ ಕಚೇರಿ ಮುಂಭಾಗ ಅಧಿಕಾರಿಗಳು ಮತ್ತು ನೌಕರರು ಪ್ರತಿಭಟನೆ ನಡೆಸಿದರು.ಬೆಸ್ಕಾಂ ಕಚೇರಿ ಮುಂಭಾಗ ಅಧೀಕ್ಷಕ ಎಂಜಿನಿಯರ್ ನರಸಿಂಹಮೂರ್ತಿ ಹಾಗೂ ಕೆಪಿಟಿಸಿಎಲ್ ಅಧೀಕ್ಷಕ ಎಂಜಿನಿಯರ್ ಶಿವಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಜಮಾಯಿಸಿ ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳನ್ನು ಉಳಿಸಿ-ನಮ್ಮ ಹಕ್ಕನ್ನು ರಕ್ಷಿಸಿ ಎಂಬ ಕರಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಧೀಕ್ಷಕ ಎಂಜಿನಿಯರ್ ನರಸಿಂಹಮೂರ್ತಿ ಮಾತನಾಡಿ, ಸರ್ಕಾರಿ ಸ್ವಾಮ್ಯದ ಬೆಸ್ಕಾಂ ಇಲಾಖೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವುದು ಆತಂಕ ಮೂಡಿಸಿದೆ. ಖಾಸಗಿ ಟಾಟಾ ಪವರ್ ಕಂಪೆನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡಿದರೆ ಗ್ರಾಹಕರು, ರೈತರಿಗೆ ತುಂಬಾ ತೊಂದರೆಯಾಗಲಿದೆ. ಜತೆಗೆ ನೌಕರರ ಸೇವಾ ಭದ್ರತೆಗೂ ಧಕ್ಕೆ ಉಂಟಾಗಲಿದೆ. ವಿದ್ಯುತ್ ಕ್ಷೇತ್ರ ಖಾಸಗೀಕರಣದಿಂದ ಹಲವಾರು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಇದು ರೈತ ವಿರೋಧಿ ಹಾಗೂ ಜನ ವಿರೋಧಿಯಾಗಿದ್ದು, ಸರ್ಕಾರ ಕೂಡಲೇ ಈ ಚಿಂತನೆಯನ್ನು ಕೈ ಬಿಡಬೇಕು. ರಾಜ್ಯದಲ್ಲಿ ವಿದ್ಯುತ್ ವಿತರಣಾ ಪರವಾನಗಿಯನ್ನು ಟಾಟಾ ಕಂಪೆನಿಗೆ ನೀಡುತ್ತಿರುವುದನ್ನು ಬೆಸ್ಕಾಂ ನೌಕರರ ಒಕ್ಕೂಟ, ರೈತರು, ಗ್ರಾಹಕರು ಹಾಗೂ ಗುತ್ತಿಗೆದಾರರು ಎಲ್ಲರೂ ಸೇರಿ ವಿರೋಧ ಮಾಡಬೇಕು. ಖಾಸಗೀಕರಣದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಗ್ರಾಹಕರಿಗೆ ಮನದಟ್ಟು ಮಾಡಬೇಕು ಎಂದರು.
ಖಾಸಗಿ ಕಂಪೆನಿಯಾದ ಟಾಟಾ ಪವರ್ ಹಾಗೂ ರಿಲೆಯನ್ಸ್ ಈಗಾಗಲೇ ಬಾಂಬೆಯಲ್ಲಿ 10-12 ವರ್ಷದಲ್ಲಿ ಕೆಲಸ ಮಾಡುತ್ತಿವೆ. ಬಾಂಬೆ ಶ್ರೀಮಂತ ನಗರಿಯಾಗಿದೆ. ನಮ್ಮ ರಾಜ್ಯದಲ್ಲಿ ಮಧ್ಯಮ ವರ್ಗದವರು, ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮಲ್ಲಿ ೩೫೦ ಯೂನಿಟ್‌ಗೆ 2500 ದಿಂದ 3 ಸಾವಿರ ಬಿಲ್ ಬಂದರೆ ಬಾಂಬೆಯಲ್ಲಿ 7 ರಿಂದ 8 ಸಾವಿರ ರು. ಬಿಲ್ ಬರುತ್ತದೆ. ಪರಿಸ್ಥಿತಿ ಹೀಗಾದರೆ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದರು.ಕೆಪಿಟಿಎಲ್ ಅಧೀಕ್ಷಕ ಎಂಜಿನಿಯರ್ ಶಿವಕುಮಾರ್ ಮಾತನಾಡಿ, ವಿದ್ಯುತ್ ಕಂಪನಿ ಖಾಸಗಿಕರಣಗೊಂಡರೆ ಉದ್ಯೋಗ ಭದ್ರತೆ ಇಲ್ಲದಂತಾಗಿ ನೌಕರರು ಹಾಗೂ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಖಾಸಗಿ ಕಂಪೆನಿಗಳು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿ, ಕೆಲಸಕ್ಕೆ ತಕ್ಕಷ್ಟು ಮಾತ್ರ ಸಂಬಳ ನೀಡುವುದರಿಂದ ನೌಕರರು ಹಲವಾರು ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಎಂದರು.
ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಮಾತನಾಡಿ, ವಿದ್ಯುತ್ ವಿತರಣಾ ಪರವಾನಗಿಯನ್ನು ಟಾಟಾ ಪವರ್‌ನಲ್ಲಿ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಟಾಟಾ ಪವರ್ ಕಂಪೆನಿಯರು ನಮ್ಮ ನೌಕರರಿಗೆ ಕೆಲಸ ಕೊಡದೆ ಅನಿವಾರ್ಯವಾಗಿ ಸ್ವಯಂ ನಿವೃತ್ತಿ ಪಡೆದುಕೊಳ್ಳುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಾರೆ. ಹಾಗಾಗಿ ನೌಕರರು, ನೌಕರ ಸಂಬಂಧಿತ ಸಂಘಗಳು, ಒಕ್ಕೂಟಗಳು ಜತೆಗೂಡಿ ಖಾಸಗೀಕರಣ ವಿರೋಧಿಸಿ ಉಗ್ರ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.ರಾಜ್ಯದಲ್ಲಿ 19 ಜಿಲ್ಲೆಗಳಲ್ಲಿ ಟಾಟಾ ಪವರ್ ಕಂಪೆನಿಯರು ಪರವಾನಗಿ ಪಡೆದುಕೊಳ್ಳುತ್ತಿದ್ದು, ಈಗಾಗಲೇ ಅವರೇ ಎಂಜಿನಿಯರ್ ಗಳು, ಲೈನ್‌ಮನ್‌ಗಳನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಇದರಿಂದ ಬೆಸ್ಕಾಂ ನೌಕರರಿಗೆ ತೊಂದರೆಯಾಗಲಿದೆ ಎಂದರು.ಪ್ರತಿಭಟನೆಯಲ್ಲಿ ಬೆಸ್ಕಾಂನ ಅಧಿಕಾರಿಗಳಾದ ಪ್ರಕಾಶ್ ಎಂ.ವಿ., ಪ್ರಶಾಂತ್ ಕೂಡ್ಲಿಗಿ, ಜಗದೀಶ್ ಜಿ., ಸೋಮಶೇಖರಗೌಡ, ಪುರುಷೋತ್ತಮ್, ಎಚ್. ತಿಮ್ಮಪ್ಪ, ಎಂ.ಎಚ್. ವೆಂಕಟರಮಣಯ್ಯ ಸೇರಿದಂತೆ ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಅಧಿಕಾರಿಗಳು, ಲೈನ್‌ಮನ್‌ಗಳು ಸೇರಿದಂತೆ ನೂರಾರು ಮಂದಿ ನೌಕರರು ಪಾಲ್ಗೊಂಡಿದ್ದರು.