ಗದಗ: ವಿವಿಧ ಬೇಡಿಕೆಗಳ ಈಡೇರಿಸಲು ನೌಕರರ ಸಂಘ ಒತ್ತಾಯ

| Published : Jan 14 2024, 01:31 AM IST / Updated: Jan 14 2024, 05:38 PM IST

ಗದಗ: ವಿವಿಧ ಬೇಡಿಕೆಗಳ ಈಡೇರಿಸಲು ನೌಕರರ ಸಂಘ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಗುಂಜೀಕರ ನೇತೃತ್ವದ ಸರಕಾರಿ ನೌಕರರ ಸಂಘದ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಅವರಿಗೆ ಮನವಿ ಸಲ್ಲಿಸಿತು.

ಗದಗ: ೭ನೇ ವೇತನ ಆಯೋಗದ ಅಧ್ಯಯನ ವರದಿಯನ್ನು ಶೀಘ್ರವೇ ಪಡೆದು ರಾಜ್ಯ ಸರಕಾರಿ ನೌಕರರ ವೇತನ ಭತ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ಆದೇಶ ಹೊರಡಿಸುವುದು, ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸುವುದು.

ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಗಳಿಗೆ ಒತ್ತಾಯಿಸಿ ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಗುಂಜೀಕರ ನೇತೃತ್ವದ ಸರಕಾರಿ ನೌಕರರ ಸಂಘದ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಅವರಿಗೆ ಮನವಿ ಸಲ್ಲಿಸಿತು.

ರಾಜ್ಯ ಸರಕಾರಿ ನೌಕರ ಸಂಘ ರಾಜ್ಯದ ೩೧ ಜಿಲ್ಲೆಗಳಲ್ಲಿ, ೧೮೩ ತಾಲೂಕುಗಳಲ್ಲಿ ಒಟ್ಟು ೬ ಲಕ್ಷ ಸದಸ್ಯರನ್ನ ಒಳಗೊಂಡ ಸರಕಾರಿ ನೌಕರ ಸಂಘ ಸರಕಾರಿ ನೌಕರರನ್ನು ಸಂಘಟಿಸಿ ಕ್ರಿಯಾಶೀಲವಾಗಿದೆ.

ದೇಶ ಹಾಗೂ ರಾಜ್ಯದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪ, ಉತ್ತರ ಕರ್ನಾಟಕದ ಪ್ರವಾಹ, ಕೋವಿಡ ಸಂಕಷ್ಟದಲ್ಲಿ ಆರ್ಥಿಕ ಸಹಕಾರ ನೀಡುವ ಮೂಲಕ ರಾಜ್ಯಕ್ಕೆ ನಿರಂತರವಾಗಿ ಶಕ್ತಿ ತುಂಬುತ್ತಾ ಸಾಗುತ್ತಿದೆ.

ಈ ಹಿಂದೆ ೬ನೇ ವೇತನ ಆಯೋಗವನ್ನ ಕಳೆದ ೧-೬-೨೦೧೭ರಲ್ಲಿ ರಚಿಸಿ, ೮ ತಿಂಗಳಲ್ಲೇ ತನ್ನ ವರದಿಯನ್ನ ರಾಜ್ಯ ಸರಕಾರದ ಮುಂದೇ ಮಂಡಿಸಿತ್ತು, ಆ ವರದಿ ಆಧಾರದ ಮೇಲೆ ೧-೭-೨೦೧೮ರಂದು ಶೇ.೩೦ರಷ್ಟು ಆರ್ಥಿಕ ಸವಲತ್ತಿನೊಂದಿಗೆ ಜಾರಿ ಮಾಡಲಾಯಿತು. ೧-೧೧-೨೦೨೨ರಲ್ಲಿ ಸುಧಾಕರರಾವ್ ಅಧ್ಯಕ್ಷತೆಯ ೭ನೇ ವೇತನ ಆಯೋಗ ರಚಿಸಲಾಯಿತು.

ಈ ಆಯೋಗ ೨ ಬಾರಿ ವಿಸ್ತರಿಸಿ, ೧೩ ತಿಂಗಳಾದರೂ ಇನ್ನೂವರೆಗೂ ತನ್ನ ಅಧ್ಯಯನ ವರದಿ ರಾಜ್ಯ ಸರಕಾರಕ್ಕೆ ನೀಡಿಲ್ಲಾ, ೨೦೧೭ರಲ್ಲಿ ಅಂದಿನ ಮುಖ್ಯಮಂತ್ರಿಗೆ ಸಿದ್ದರಾಮಯ್ಯನವರು ೬ನೇ ವೇತನ ಆಯೋಗ ರಚಿಸಿದ ೮ ತಿಂಗಳಲ್ಲೇ ಆಯೋಗದಿಂದ ವರದಿ ತರಿಸಿಕೊಂಡು ಸರಕಾರಿ ನೌಕರ ವರ್ಗಕ್ಕೆ ಅನುಕೂಲತೆ ಕಲ್ಪಿಸಿದ್ದರು. ಆದರೆ ೭ನೇ ವೇತನ ಆಯೋಗ ವಿಳಂಬ ಕ್ರಿಯೆ ನೋಡಿದರೇ ವೇತನ ಆಯೋಗ ಜಾರಿಯ ಅನಿಶ್ಚಿತತೆ ಎದ್ದು ಕಾಣುತ್ತಿದೆ.

ಆದ್ದರಿಂದ ರಾಜ್ಯ ಸರಕಾರಿ ನೌಕರರ ನಿರಂತರ ಹಿತ ಕಾಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣವೇ ೭ನೇ ವೆತನ ಆಯೋಗದ ವರದಿ ತರಿಸಿಕೊಂಡು ಅನುಷ್ಠಾನ ಮಾಡಲಿ, ಜೊತೆಗೆ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ೨.೫ ಲಕ್ಷ ಹುದ್ದೆಗಳು ಖಾಲಿ ಇವೆ, ಖಾಲಿ ಹುದ್ದೆಗಳ ಭರ್ತಿ ಮೂಲಕವೇ ರಾಜ್ಯ ಸರಕಾರದ ರಚನಾತ್ಮಕ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಮಾತನಾಡಿ, ತಮ್ಮ ಮನವಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಅನುಷ್ಠಾನ ಮಾಡಿಸುವ ಭರವಸೆಯನ್ನ ನೀಡಿದರು.

ಈ ವೇಳೆ ಜಿಲ್ಲಾ ಸರಕಾರಿ ನೌಕರ ಸಂಘದ ಗೌರವ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಕೋಶಾಧ್ಯಕ್ಷ ಸತೀಶ ಕಟ್ಟಿಮನಿ, ರಾಜ್ಯ ಪರಿಷತ್ ಸದಸ್ಯ ಡಾ. ಶರಣು ಗೋಗೇರಿ, ಕೆ.ಬಿ. ಕೊಣ್ಣೂರ, ಸಿದ್ದಪ್ಪ ಲಿಂಗದಾಳ, ಎಸ್.ಆರ್. ಬಂಡಿ, ಎಸ್.ಬಿ. ಬಿರಕಬ್ಬಿ, ಮಾನೇದ, ದುರಗಣ್ಣವರ, ಭರಮಪ್ಪ, ತಿಪ್ಪಣ್ಣವರ, ಯಳಮಲಿ, ಕಲಾಲ, ಮಲ್ಲಿಕಾರ್ಜುನ ಹನಸಿ, ಐ.ಎ.ಗಾಡಗೋಳಿ, ಎಸ್.ಕೆ. ಮಂಗಳಗುಡ್ಡ, ಶಿರಬಡಗಿ, ಸತೀಶ, ಮಂಜು ಬಂಡಿವಡ್ಡರ, ಮಲ್ಲಿಕಾರ್ಜುನ ಕಲಕಂಬಿ, ಕಿಲಬನವರ, ರಮೇಶ, ಎಸ್.ಆರ್.ಬಂಡಿ ಸೇರಿದಂತೆ ಹಲವರಿದ್ದರು.