ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬಾಲ ಕಾರ್ಮಿಕರನ್ನು ಯಾವುದೇ ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಮಕ್ಕಳನ್ನು ದುಡಿಸಿಕೊಳ್ಳುವ ಮಾಲೀಕರಿಗೆ 6 ತಿಂಗಳಿಗಿಂತ ಕಡಿಮೆಯಿಲ್ಲದಂತೆ 2 ವರ್ಷ ಜೈಲು ಶಿಕ್ಷೆ ಹಾಗೂ ₹20 ರಿಂದ ₹50 ಸಾವಿರ ವರೆಗೆ ದಂಡ ವಿಧಿಸಬಹುದು ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಐಎಲ್‌ಓ ಸಂಸ್ಥೆ, ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಬಾಲಕಾರ್ಮಿಕ ವಿರೋಧಿ ನಿರ್ಮೂಲನೆ ಕುರಿತ ಅನುಷ್ಟಾನ ಸಭೆಯಲ್ಲಿ ಮಾತನಾಡಿ ಪ್ರತಿಯೊಬ್ಬ ರಿಗೂ 14 ವರ್ಷದವರೆಗೆ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಆದರೆ ಮಕ್ಕಳನ್ನು ಶಾಲೆಗೆ ಕಳುಹಿಸದೇ ಗ್ಯಾರೇಜು, ಖಾಸಗಿ ಕಾರ್ಖಾನೆಗಳಲ್ಲಿ ಕೆಲಸಕ್ಕೆ ಉಪಯೋಗಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಬಾಲಕಾರ್ಮಿಕರ ರಕ್ಷಣೆಗೆ ಜಗತ್ತಿನ ಗಮನ ಸೆಳೆಯಲು ವಿಶ್ವಕಾರ್ಮಿಕ ಸಂಘಟನೆ ಜೂ.12 ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಘೋಷಿಸಿತು. ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು ಈ ಕೆಟ್ಟ ವ್ಯವಸ್ಥೆಯಿಂದ ಹೊರ ಬಂದು ಹಕ್ಕುಗಳ ಕುರಿತು ಜಾಗೃತಿ ಹೊಂ ದಿ ಉತ್ತಮ ವಿದ್ಯಾವಂತರಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಐಎಲ್‌ಓ ಕೋ-ಆರ್ಡಿನೇಟರ್ ರಂಜಿತ್‌ಪ್ರಕಾಶ್ ಮಾತನಾಡಿ ಹಲವಾರು ದೇಶಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ. ರಾಜ್ಯ ಸರ್ಕಾರದೊಂದಿಗೆ ಇಂಥಹ ಉಪಕ್ರಮಕ್ಕಾಗಿ ಪಾಲುದಾರಿಕೆ ಮಾಡಿಕೊಂಡಿ ರುವುದು ಇದೇ ಮೊದಲು ಎಂದರು.

ಇದು 3 ವರ್ಷಗಳ ಯೋಜನೆ. ಕೃಷಿಯಲ್ಲಿ ದುಡಿಯುವ ಬಾಲ ಕಾರ್ಮಿಕರನ್ನು ಗುರುತಿಸಿ ಇದಕ್ಕೆ ಪರಿಹಾರ ಕಂಡುಹಿಡಿ ಯುವುದು ಮುಖ್ಯ ಉದ್ದೇಶ. ಯೋಜನೆ ಫಲಿತಾಂಶ ಇತರೆ ರಾಜ್ಯ ಮತ್ತು ಏಷ್ಯಾ ದೇಶಗಳು ಇದೇ ರೀತಿ ಕ್ರಮಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದರು.


ಈ ಯೋಜನೆಯಡಿ ರಾಜ್ಯದಲ್ಲಿ ಚಿಕ್ಕಮಗಳೂರು, ಬಾಗಲಕೋಟೆ, ಬೆಳಗಾವಿ, ರಾಯಚೂರು, ಮಡಿಕೇರಿ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆಮುಖ್ಯವಾಗಿ ಕಬ್ಬು, ಹತ್ತಿ ಮತ್ತು ಕಾಫಿಯಂಥಹ ಬೆಳೆಗಳ ಮೇಲೆ ಕೇಂದ್ರೀಕೃತವಾಗಿದ್ದು ಅಲ್ಲಿ ಬಾಲ ಕಾರ್ಮಿಕರ ಬಳಕೆ ಹೆಚ್ಚಾಗಿದೆ ಎಂಬ ವರದಿಯಾಗಿದೆ ಎಂದು ಹೇಳಿದರು.

ಐಎಲ್‌ಓ ತಂಡ ಯೋಜನೆ ಭಾಗವಾಗಿ ಕ್ಷೇತ್ರ ಸಮೀಕ್ಷೆ ನಡೆಸುತ್ತಿದೆ. ಈ ಜಿಲ್ಲೆಗಳಲ್ಲಿ ಬಾಲಕಾರ್ಮಿಕ ಪದ್ಧತಿ ವ್ಯಾಪಕತೆಗೆ ಹಿಂದಿನ ಕಾರಣ ಅರ್ಥಮಾಡಿಕೊಳ್ಳಲು ಪಾಲುದಾರರು, ಕಾರ್ಮಿಕರು ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ಸಂವಹನ ನಡೆಸಲಿದೆ ಎಂದು ತಿಳಿಸಿದರು.

ಪ್ರಸ್ತುತ ಯೋಜನೆ ಅವಧಿ 3 ವರ್ಷಗಳಾಗಿದ್ದು, ಆವರ್ತಕ ಮೌಲ್ಯಮಾಪನ ನಡೆಸಲಾಗುತ್ತದೆ.ಪ್ರಕ್ರಿಯೆಯ ಉದ್ದಕ್ಕೂ ಸೂಕ್ತವಾದ ಸರಿಪಡಿಸುವ ಕ್ರಮ ಜಾರಿಗೆ ತರಲಾಗುತ್ತದೆ ಎಂದು ಮಾಹಿತಿ ನೀಡಿದರು. ಬಳಿಕ ತಾಲೂಕಿನ ಮೈಲಿಮನೆ ಟಾಟಾ ಕಾಫಿ ಎಸ್ಟೇಟ್‌ಗೆ ತೆರಳಿ ಕಾರ್ಮಿಕರನ್ನು ಭೇಟಿ ಮಾಡಿ ವೃತ್ತಿ ಬಗ್ಗೆ ಕಾರ್ಮಿಕ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಕಾರ್ಮಿಕ ಅಧಿಕಾರಿ ಸುರೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಂತೋಷ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುಮಿತ್ರ, ಸಹಾಯಕ ಕಾರ್ಮಿಕ ಆಯುಕ್ತ ಸುಭಾಸ್ ಎಂ.ಆಲದಕಟ್ಟಿ ಉಪಸ್ಥಿತರಿದ್ದರು. ಪೋಟೋ

ಬಾಲಕಾರ್ಮಿಕರ ನಿರ್ಮೂಲನೆ ಫೋಸ್ಟರ್ ಅನ್ನು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಬಿಡುಗಡೆ ಮಾಡಿದರು. ಈ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಕಾರ್ಮಿಕ ಅಧಿಕಾರಿ ಸುರೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಂತೋಷ್ ಮೊದಲಾದವರಿದ್ದರು.