ಪೋಷಕರು ಅಪ್ರಾಪ್ತ ಮಕ್ಕಳನ್ನು ಶಾಲೆಗಳಿಗೆ ಕಳುಹಿಸದೆ ದುಡಿಮೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ. ಮಗು ಮತ್ತು ಮಕ್ಕಳನ್ನು ಅನಧಿಕೃತವಾಗಿ ದತ್ತು ಪಡೆಯುವುದು, ದತ್ತು ನೀಡುವುದು, ಮಕ್ಕಳನ್ನು ಬಿಕ್ಷಾಟನೆಗೆ ತಳ್ಳುವುದು ಕಾನೂನು ರೀತಿ ಅಪರಾಧ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಧು ಹೇಳಿದರು.

ಸುಂಟಿಕೊಪ್ಪ: ಪೋಷಕರು ಅಪ್ರಾಪ್ತ ಮಕ್ಕಳನ್ನು ಶಾಲೆಗಳಿಗೆ ಕಳುಹಿಸದೆ ದುಡಿಮೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ. ಮಗು ಮತ್ತು ಮಕ್ಕಳನ್ನು ಅನಧಿಕೃತವಾಗಿ ದತ್ತು ಪಡೆಯುವುದು, ದತ್ತು ನೀಡುವುದು, ಮಕ್ಕಳನ್ನು ಬಿಕ್ಷಾಟನೆಗೆ ತಳ್ಳುವುದು ಕಾನೂನು ರೀತಿ ಅಪರಾಧ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಧು ಹೇಳಿದರು. ಭಾನುವಾರ ಮಂಜಿಕೇರೆ ಸಮುದಾಯ ಭವನದಲ್ಲಿ ಕಾನ್‌ಬೈಲ್ ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಲಕಾವೇರಿ ಜ್ಞಾನ ವಿಕಾಸ ಕೇಂದ್ರದ ಕಾನ್‌ಬೈಲ್ ಕಾರ‍್ಯ ಕ್ಷೇತ್ರದ ವತಿಯಿಂದ ಆಯೋಜಿಸಲಾಗಿದ್ದ ಮಾಹಿತಿ ಕಾರ‍್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ತೋಟದ ಲೈನ್ ಮನೆ ಹಾಡಿಗಳಲ್ಲಿ ನೆಲೆಸಿರುವ ಮಕ್ಕಳನ್ನು ಕಡ್ಡಾಯವಾಗಿ ಶಿಕ್ಷಣ ನೀಡುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಅದನ್ನು ಬಿಟ್ಟು ಮನೆಯ ಆರ್ಥಿಕ ಸಂಕಷ್ಟಕ್ಕಾಗಿ ತೋಟ, ಅಂಗಡಿ ಮುಂಗಟ್ಟುಗಳಲ್ಲಿ ಕೆಲಸಕ್ಕೆ ಸೇರಿಸುವುದು ಕಾನೂನು ರೀತಿಯಲ್ಲಿ ಅಪರಾಧವಾಗಿದ್ದು, ಕೆಲಸ ನೀಡಿದ ಮಾಲೀಕರಿಗೆ ಕಾನೂನು ರೀತಿಯ ಕ್ರಮ, ದಂಡ ಹಾಗೂ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅಪ್ರಾಪ್ತ ಮಕ್ಕಳ ಮಾನಸಿಕ ಹಿಂಸೆ ಹಾಗೂ ಲೈಂಗಿಕ ದೌರ್ಜನ್ಯಗಳು ಕಂಡು ಬಂದರೆ ಮಕ್ಕಳ ಸಹಾಯವಾಣಿ ಕೇಂದ್ರ ೧೦೯೮ಕ್ಕೆ ಕರೆಮಾಡುವಂತೆ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ದೈಹಿಕ ಹಿಂಸೆ ಪ್ರಕರಣಗಳು ಕಂಡುಬಂದರೆ ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ೧೮೧ಕ್ಕೆ ಕರೆ ಮಾಡುವಂತೆ ಮಾಹಿತಿ ನೀಡಿದರು.

ತಲಕಾವೇರಿ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಾಲಿನಿ ದಿನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕಾನ್‌ಬೈಲ್ ಜವಾಬ್ದಾರಿ ತಂಡದ ಸದಸ್ಯೆ ಬೇಬಿ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ, ಸೇವಾ ಪ್ರತಿನಿಧಿ ಯಶೋಧ ಉಪಸ್ಥಿತರಿದ್ದರು.