ಸುಧಾ ಬದುಕಿನ ಬಂಡಿಗೆ ಖಾತ್ರಿ ಆಸರೆ

| Published : Jun 29 2024, 12:32 AM IST

ಸಾರಾಂಶ

ಇಲ್ಲೊಬ್ಬ ಮಹಿಳೆ ಇದ್ದೂರಲ್ಲೇ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾಳೆ. ಆ ಮಹಿಳೆ ಬಾಳಿಗೆ ನರೇಗಾ ಯೋಜನೆ ಆಸರೆಯಾಗಿದೆ.

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಮದುವೆಯಾದ ಮೇಲೆ ಹೆಣ್ಣು ಮಕ್ಕಳಿಗೆ ಪತಿಯೇ ಆಸರೆ. ಅಂತಹ ಪತಿಯು ಅಕಾಲಿಕವಾಗಿ ಮರಣ ಹೊಂದಿದಾಗ ಆ ಕುಟುಂಬ ಜೀವನ ಸಾಗಿಸುವುದು ಬಹಳ ಕಷ್ಟಕರವಾಗಿರುತ್ತದೆ. ಆದರೆ ಅಂತಹ ಪರಿಸ್ಥಿತಿಯಲ್ಲಿಯೂ ಎದೆಗುಂದದೇ ಇಲ್ಲೊಬ್ಬ ಮಹಿಳೆ ಇದ್ದೂರಲ್ಲೇ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾಳೆ. ಆ ಮಹಿಳೆ ಬಾಳಿಗೆ ನರೇಗಾ ಯೋಜನೆ ಆಸರೆಯಾಗಿದೆ.

ಹೌದು! ತಾಲೂಕಿನ ಕಂದಕೂರು ಗ್ರಾಮದ ಸುಧಾ ಹೂಗಾರ ಎಂಬ ಮಹಿಳೆ ಕಳೆದ ನಾಲ್ಕು ವರ್ಷದಿಂದ ಮನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಸುಧಾ ಹೂಗಾರ ಅವರಿಗೆ ಒಬ್ಬ ಮಗಳಿದ್ದಾಳೆ. ಸುಧಾ ಬಾಳಿಗೆ ಆಸರೆಯಾಗಬೇಕಿದ್ದ ಪತಿ ಅನಾರೋಗ್ಯಕ್ಕೆ ಈಡಾಗಿ ಸಾವನ್ನಪ್ಪಿದರು. ಇದರಿಂದ ಧೃತಿಗೆಡದ ಸುಧಾ ಅವರು ಸ್ವಗ್ರಾಮದಲ್ಲೇ ಇದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು.

ಆದರೆ, ಕೂಲಿ ಮಾಡುತ್ತಿದ್ದ ಹಣ ಕುಟುಂಬ ನಿರ್ವಹಣೆಗೆ ಸಾಕಾಗದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಮಾಹಿತಿ ಪಡೆದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನರೇಗಾ ಯೋಜನೆಯ ಜಾಬ್ ಕಾರ್ಡ್ ಮಾಡಿಸಿಕೊಂಡಿದ್ದಾರೆ.

ಕಳೆದ ನಾಲ್ಕು ವರ್ಷದಿಂದ ನರೇಗಾದಡಿ ಕೆಲಸ ಮಾಡುತ್ತಿದ್ದು, ಇದರಿಂದ ಕುಟುಂಬ ಜೀವನ ನಿರ್ವಹಣೆ ಸುಧಾರಿಸಿದೆ. ಮಗಳಿಗೆ ಓದಿನ ಖರ್ಚಿಗೂ ಅನುಕೂಲವಾಗಿದ್ದು, ಉದ್ಯೋಗ ಖಾತ್ರಿ ಕೆಲಸ ಇಲ್ಲದ ವೇಳೆ ಜಮೀನುಗಳಿಗೆ ತೆರಳಿ ಕೂಲಿ ಕೆಲಸ ಮಾಡುತ್ತಾರೆ. ಚಿಕ್ಕವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು, ಇದ್ದೂರಲ್ಲೇ ಜೀವನ ನಡೆಸುವ ಸುಧಾ ಹೂಗಾರ್ ಅವರ ಸ್ವಾವಲಂಬಿ ಬದುಕಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನಿಜಕ್ಕೂ ಆಸರೆಯಾಗಿದೆ.ಉದ್ಯೋಗ ಖಾತ್ರಿಯಿಂದ ಅನುಕೂಲ

ಕಂದಕೂರು ಗ್ರಾಮದಲ್ಲಿ ಜಮೀನುಗಳಿಗೆ ಕೆಲಸಕ್ಕೆ ಹೋಗಿ ಬಂದಂತ ₹200 ಕೂಲಿಯಿಂದ ಮನೆ ನಿರ್ವಹಣೆ ತುಂಬಾ ಕಷ್ಟಕರವಾಗಿತ್ತು. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಹೋದಾಗಿನಿಂದ ತುಂಬಾ ಅನುಕೂಲವಾಗಿದೆ. ಯೋಜನೆಯಡಿ ಸದ್ಯ ₹349 ಕೂಲಿ ಹಣ ಸಿಗುತ್ತಿರುವುದರಿಂದ ಮನೆ ನಿರ್ವಹಣೆ ಸುಲಭವಾಗಿದೆ.

ಸುಧಾ ಹೂಗಾರ, ನರೇಗಾ ಕೂಲಿಕಾರ ಮಹಿಳೆ, ಕಂದಕೂರು.

ಯೋಜನೆ ಆಸರೆ

ಕಂದಕೂರು ಗ್ರಾಮದ ಸುಧಾ ಹೂಗಾರ ಅವರಿಗೆ ನರೇಗಾ ಯೋಜನೆಯು ಅವರ ಕುಟುಂಬ ನಿರ್ವಹಣೆಗೆ ಬಹಳಷ್ಟು ಅನೂಕೂಲಕರವಾಗಿದೆ.

ಚಂದ್ರಶೇಖರ ಹಿರೇಮಠ ಐಇಸಿ ಸಂಯೋಜಕ ತಾಪಂ ಕುಷ್ಟಗಿ