ಸಾರಾಂಶ
ಉಡುಪಿ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಕೈಗಾರಿಕೋದ್ಯಮಿಗಳ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಜಿಲ್ಲೆಯ ಕೈಗಾರಿಕೋದ್ಯಮಗಳ ಉದ್ಯೋಗಾವಕಾಶಗಳಲ್ಲಿ ಸ್ಥಳೀಯ ಯುವಕರಿಗೆ ಪ್ರಥಮ ಪ್ರಾಶಸ್ತ್ಯ ನೀಡುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿದರು.ಡಾ. ಸರೋಜಿನಿ ಮಹಿಷಿ ಅವರ ವರದಿಯ ಶಿಫಾರಸ್ಸಿನಂತೆ ಸಣ್ಣ ಕೈಗಾರಿಕೆಗಳು, ಮಧ್ಯಮ ಕೈಗಾರಿಕೆಗಳು ಮತ್ತು ಬೃಹತ್ ಮತ್ತು ಬಹುರಾಷ್ಟ್ರೀಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ ೭೦ ರಷ್ಟು ಉದ್ಯೋಗಗಳನ್ನು ನೀಡುವುದು ಕಡ್ಡಾಯ. ಆದ್ದರಿಂದ ಕೈಗಾರಿಕೆಗಳ ಮಾಲೀಕರು ಸ್ಥಳೀಯರಿಗೆ ಉದ್ಯೋಗಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.ಜಿಲ್ಲೆಯಲ್ಲಿ ೩೭ ಸಣ್ಣ, ೪೫ ಮಧ್ಯಮ ಮತ್ತು ೭ ಬೃಹತ್ ಕೈಗಾರಿಕೆಗಳಿದ್ದು, ಇವುಗಳಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಇವೆ. ಯು.ಪಿ.ಸಿ.ಎಲ್, ಕೊಚ್ಚಿನ್ ಶಿಪ್‌ಯಾರ್ಡ್ ಮುಂತಾದ ಸಂಸ್ಥೆಗಳು ಇನ್ನೂ ಹೆಚ್ಚಿನ ಪ್ರಾಧಾನ್ಯತೆಯನ್ನು ಸ್ಥಳೀಯರಿಗೆ ನೀಡಬೇಕು ಎಂದರು.ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುತಿದ್ದು, ಉದ್ಯಮಿಗಳು ಸ್ಥಳೀಯರಿಗೆ ಉದ್ಯೋಗ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತ ಕೈಗಾರಿಕೆಯ ಅಭಿವೃದ್ಧಿಗೆ ಎಲ್ಲಾ ನೆರವು ನೀಡಲಿದೆ ಎಂದು ಭರವಸೆ ನೀಡಿದರು.ವಿವಿಧ ಕೈಗಾರಿಕೋದ್ಯಮಿಗಳು ಮಾತನಾಡಿ, ಈಗಾಗಲೇ ಬಹುತೇಕ ಸಂಸ್ಥೆಗಳಲ್ಲಿ ಶೇ ೧೦೦ ರಷ್ಟು ಉದ್ಯೋಗಿಗಳು ಸ್ಥಳೀಯರೇ ಆಗಿರುತ್ತಾರೆ. ಕೆಲವು ಕಡೆ ಡಿ ದರ್ಜೆ ನೌಕರರು ಸಿಗುತ್ತಿಲ್ಲವಾದ್ದರಿಂದ ಹೊರ ರಾಜ್ಯದಿಂದ ಸೇವೆ ಪಡೆಯಲಾಗುತ್ತದೆ ಎಂದು ಸಂಸದರ ಗಮನಕ್ಕೆ ತಂದರು.ಜಿಲ್ಲಾ ಕೈಗಾರಿಕಾ ಇಲಾಖೆ ಅಧಿಕಾ ನಾಗರಾಜ ನಾಯಕ್ ಮತ್ತಿತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.