ಮೆಡಿಕಲ್‌ ಕಾಲೇಜ್‌ಗಳಿಗೆ ಶಕ್ತಿ ತುಂಬಿ!

| Published : May 01 2025, 12:46 AM IST

ಸಾರಾಂಶ

ಉತ್ತರ ಕರ್ನಾಟಕದ 8-10 ಜಿಲ್ಲೆಗಳ ಮೆಡಿಕಲ್‌ ಕಾಲೇಜ್‌ಗಳು ಬರೀ ಪಾಠ ಪ್ರವಚನಕ್ಕಷ್ಟೇ ಸೀಮಿತವಾಗಿವೆ. ಯಾವುದೇ ರೋಗಿ ಹೋದರೂ ಅಲ್ಲಿಂದ ನೇರವಾಗಿ ಇಲ್ಲಿ ಅಷ್ಟೊಂದು ಎಕ್ವಿಪ್‌ಮೆಂಟ್‌ಗಳೂ ಇಲ್ಲ. ಹುಬ್ಬಳ್ಳಿ ಕೆಎಂಸಿಆರ್‌ಐಗಳಿಗೆ ತೆಗೆದುಕೊಂಡು ಹೋಗಿ ಎಂದು ಸಾಗ ಹಾಕುತ್ತಾರೆ.

ಶಿವಾನಂದ ಗೊಂಬಿ ಹುಬ್ಬಳ್ಳಿ

ಜಿಲ್ಲೆಗೊಂದು ಮೆಡಿಕಲ್‌ ಕಾಲೇಜ್‌ ತೆರೆಯುವ ಸರ್ಕಾರ ಅವುಗಳಿಗೆ ಸರಿಯಾಗಿ ಸೌಲಭ್ಯ ಕಲ್ಪಿಸಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಜತೆಗೆ ಒತ್ತಡ ಹೆಚ್ಚುತ್ತಿರುವ ಉತ್ತರ ಕರ್ನಾಟಕ ಸಂಜೀವಿನಿ ಎಂದೇ ಹೆಸರು ಪಡೆದಿರುವ ಕೆಎಂಸಿಆರ್‌ಐಗೆ ಶಕ್ತಿ ತುಂಬಬೇಕು ಎಂಬುದು ಕೆಎಂಸಿಆರ್‌ಐನ ಸಿಬ್ಬಂದಿಗಳ ಒಕ್ಕೊರಲಿನ ಕೂಗು!

ಏಕೆ ಇಂಥ ಎಂಬ ಪ್ರಶ್ನೆಯೂ ಸಹಜ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಸರ್ಕಾರ ತನ್ನ ಸಾಧನೆ ಎಂಬಂತೆ ಜಿಲ್ಲೆಗೊಂದು ಮೆಡಿಕಲ್‌ ಕಾಲೇಜು ತೆರೆಯುತ್ತಾ ಹೋಗುತ್ತಿದೆ. ಆದರೆ, ಅತ್ಯಾಧುನಿಕ ಯಂತ್ರಗಳು ಸೇರಿದಂತೆ ಇತರೆ ಸೌಲಭ್ಯಗಳೂ ಇರುವುದಿಲ್ಲ. ಜತೆಗೆ ಅಗತ್ಯಕ್ಕೆ ತಕ್ಕಂತೆ ಟೆಕ್ನಿಷನ್‌, ವೈದ್ಯರು, ಬೇರೆ ಬೇರೆ ವಿಭಾಗಗಳ ಸಿಬ್ಬಂದಿಯನ್ನೂ ನೇಮಿಸಿಕೊಳ್ಳುವುದಿಲ್ಲ.

ಈ ಕಾರಣದಿಂದ ಉತ್ತರ ಕರ್ನಾಟಕದ 8-10 ಜಿಲ್ಲೆಗಳ ಮೆಡಿಕಲ್‌ ಕಾಲೇಜ್‌ಗಳು ಬರೀ ಪಾಠ ಪ್ರವಚನಕ್ಕಷ್ಟೇ ಸೀಮಿತವಾಗಿವೆ. ಯಾವುದೇ ರೋಗಿ ಹೋದರೂ ಅಲ್ಲಿಂದ ನೇರವಾಗಿ ಇಲ್ಲಿ ಅಷ್ಟೊಂದು ಎಕ್ವಿಪ್‌ಮೆಂಟ್‌ಗಳೂ ಇಲ್ಲ. ಹುಬ್ಬಳ್ಳಿ ಕೆಎಂಸಿಆರ್‌ಐಗಳಿಗೆ ತೆಗೆದುಕೊಂಡು ಹೋಗಿ ಎಂದು ಸಾಗ ಹಾಕುತ್ತಾರೆ. ಇನ್ನು ಕೆಲ ಮೆಡಿಕಲ್‌ ಕಾಲೇಜ್‌ ಹಾಗೂ ಜಿಲ್ಲಾಸ್ಪತ್ರೆಗಳಂತೂ ತಮ್ಮಲ್ಲಿ ಅಲ್ಪಸ್ವಲ್ಪ ಸೌಲಭ್ಯಗಳಿದ್ದರೂ ಅವುಗಳಲ್ಲೇ ರೋಗಿಗಳನ್ನು ನಿಭಾಯಿಸಬಹುದಾಗಿದ್ದರೂ ಎಲ್ಲಿ ಸುಮ್ಮನೆ ಕಿರಿಕಿರಿ ಎಂದುಕೊಂಡು ಕೆಎಂಸಿಆರ್‌ಐಗೆ ಕರೆದುಕೊಂಡು ಹೋಗಿ ಎಂದು ಹೇಳಿ ಕಳುಹಿಸುತ್ತವೆ. ಕೆಎಂಸಿಗೆ ಕರೆದುಕೊಂಡು ಹೋಗಲು ಚೀಟಿಯನ್ನಾದರೂ (ಚಿಕಿತ್ಸೆಗೆ ಶಿಫಾರಸ್ಸು ಪತ್ರ) ಕೊಡಿ ಎಂದ್ಹೇಳಿದರೆ, ಅದೆಲ್ಲ ಏನೂ ಬೇಡ. ಅಲ್ಲಿಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಸಿಗುತ್ತದೆ. ಕೆಎಂಸಿಆರ್‌ಐ ಸುಮ್ಮನೆ ದಾಖಲಾತಿ ಮಾಡಿಕೊಳ್ಳುತ್ತದೆ ಎಂದು ಹೇಳಿ ಕಳುಹಿಸಿ ಕೈ ತೊಳೆದುಕೊಳ್ಳುತ್ತಾರೆ.

ಒತ್ತಡ ಜಾಸ್ತಿ: ಇದರಿಂದ ಹುಬ್ಬಳ್ಳಿ ಕೆಎಂಸಿಆರ್‌ಐಗೆ ಒತ್ತಡ ಜಾಸ್ತಿಯಾಗುತ್ತಿದೆ. ಯಾರೇ ಬರಲಿ, ಎಲ್ಲಿಂದಲೇ ಬರಲಿ ಎಲ್ಲರನ್ನು ಅಡ್ಮಿಟ್‌ ಮಾಡಿಕೊಂಡು ಇಲ್ಲ ಎನ್ನದೇ ಚಿಕಿತ್ಸೆ ಕೊಡುತ್ತಾರೆ ಕೆಎಂಸಿಆರ್‌ಐ ವೈದ್ಯಕೀಯ ಸಿಬ್ಬಂದಿ. 1800 ಬೆಡ್‌ಗಳ ಆಸ್ಪತ್ರೆ ಇದಾಗಿದೆ. ಆದರೂ ರೋಗಿಗಳಿಗೆ ಕೆಲ ವೇಳೆ ಬೆಡ್‌ ಸಿಗಲ್ಲ ಅಷ್ಟೊಂದು ರಶ್‌ ಇರುತ್ತದೆ. ಹೀಗೆ ರಶ್ಶೋ ರಶ್‌ ಆಗಿರುತ್ತದೆ. ಅಕ್ಕಪಕ್ಕದ ಕೊಪ್ಪಳ, ಗದಗ, ಹಾವೇರಿ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ ಅಷ್ಟೇ ಅಲ್ಲದೇ ರಾಯಚೂರು, ಬೀದರಗಳಿಂದಲೂ ರೋಗಿಗಳು ಇಲ್ಲಿಗೆ ಬರುತ್ತಾರೆ. ಇದರಿಂದಾಗಿ ಇರುವ ಸಿಬ್ಬಂದಿ ಹಾಗೂ ವೈದ್ಯರಿಂದಲೇ ನಿರ್ವಹಣೆ ಮಾಡಬೇಕಾಗುವುದರಿಂದ ಕೆಲ ವೇಳೆ ಎಲ್ಲ ರೋಗಿಗಳನ್ನು ಗಮನಿಸಲು ಸಿಬ್ಬಂದಿಗೆ ಸಾಧ್ಯವಾಗಲ್ಲ. ಆಗ ಸಹಜವಾಗಿ ಕೆಎಂಸಿಆರ್‌ಐನಲ್ಲಿ ಸರಿಯಾಗಿ ಚಿಕಿತ್ಸೆ ಸಿಗಲ್ಲ ಎಂಬ ದೂರು ಮಾಮೂಲಿಯಾಗಿಯೇ ಕೇಳಿ ಬರುತ್ತದೆ.

ಅದಕ್ಕೆ ಶಕ್ತಿ ತುಂಬಿ: ಮೊದಲಿಗೆ ಜಿಲ್ಲೆಗೊಂದು ಮೆಡಿಕಲ್‌ ಕಾಲೇಜ್‌ ತೆರೆಯುತ್ತಿರೋ ತೆರೆಯಿರಿ. ಬಡ ಮಕ್ಕಳು ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಒಳ್ಳೆಯ ಬೆಳವಣಿಗೆ. ಆದರೆ, ಅವುಗಳಿಗೆ ಸಮರ್ಪಕ ಯಂತ್ರಗಳ ಅಳವಡಿಕೆ, ವೈದ್ಯಕೀಯ ಸಿಬ್ಬಂದಿ ನೇಮಕಾತಿಗೂ ಆದ್ಯತೆ ನೀಡಬೇಕು. ಜತೆ ಜತೆಗೆ ಅಲ್ಲಿನ ಸಿಬ್ಬಂದಿಯೂ ಕೆಎಂಸಿಗೆ ಸಾಗಹಾಕಿದರೆ ಮುಗಿತು ಎನ್ನುವ ಮನೋಭಾವನೆ ದೂರ ಮಾಡಿ ಚಿಕಿತ್ಸೆ ನೀಡಬೇಕು.

ವಿಶೇಷ ಅನುದಾನ ನೀಡಲಿ: ಬಜೆಟ್‌ನಲ್ಲಿ ₹500 ಕೋಟಿ ನೀಡಿ ಎಂದು ರಾಜ್ಯ ಸರ್ಕಾರವನ್ನು ಕೇಳಿಕೊಂಡಿತ್ತು ಕೆಎಂಸಿಆರ್‌ಐ. ಆದರೆ, ಬಜೆಟ್‌ನಲ್ಲಿ ನಯಾಪೈಸೆಯನ್ನೂ ಬಿಡುಗಡೆ ಮಾಡಲಿಲ್ಲ. ಈಗ ವಿವಿಧ ಜಿಲ್ಲೆಗಳಲ್ಲಿನ ಜಿಲ್ಲಾಸ್ಪತ್ರೆ ಹಾಗೂ ಮೆಡಿಕಲ್‌ ಕಾಲೇಜ್‌ಗಳಿಗೆ ಶಕ್ತಿ ತುಂಬುವ ಜತೆಗೆ ಕೆಎಂಸಿಆರ್‌ಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಈ ಮೂಲಕ ಕೆಎಂಸಿಆರ್‌ಐಗೆ ಇನ್ನಷ್ಟು ಶಕ್ತಿ ತುಂಬಿ ಉತ್ತಮ ಚಿಕಿತ್ಸೆ ನೀಡಲು ಅನುವು ಮಾಡಿಕೊಡಬೇಕು ಎಂಬುದು ಕೆಎಂಸಿಆರ್‌ಐನ ಒಕ್ಕೊರಲಿನ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಿದೆ.

ಕೆಎಂಸಿಆರ್‌ಐಗೆ ಉತ್ತರ ಕರ್ನಾಟಕದ 8-10 ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗೆ ಬರುತ್ತಲೇ ಇರುತ್ತಾರೆ. ಪ್ರತಿನಿತ್ಯ ಈ ಭಾಗದಲ್ಲಿ ಅಪಘಾತ, ತುರ್ತುಗಳಾದಾಗ ಮೊದಲು ನೆನಪಾಗುವುದು ಕೆಎಂಸಿಆರ್‌ಐ. ನಾವು ನಮ್ಮ ಶಕ್ತಿ ಮೀರಿ ಕೆಲಸ ಮಾಡಿ ಜನರ ಜೀವ ಉಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕೆಎಂಸಿಆರ್‌ಐನ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ಹೇಳಿದರು.