ಸಾರಾಂಶ
- ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ-2025 । ಶ್ರೀಮಠದ 27ನೇ ವಾರ್ಷಿಕೋತ್ಸವ, ಮಹಿಳಾ ಗೋಷ್ಠಿ ಕಾರ್ಯಕ್ರಮ
- ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿ ಪುಣ್ಯಾರಾಧನೆ, ಡಾ. ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳ 17ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ - - -ಕನ್ನಡಪ್ರಭ ವಾರ್ತೆ ಹರಿಹರ ಸಮಾಜದಲ್ಲಿ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯ ಎಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಶಾಂತಲಾ ರಾಜಣ್ಣ ಹೇಳಿದರು.
ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಪೀಠದಲ್ಲಿ ಶನಿವಾರ ನಡೆದ ವಾಲ್ಮೀಕಿ ಜಾತ್ರೆ-2025ರ ಶ್ರೀ ಮಠದ 27ನೇ ವಾರ್ಷಿಕೋತ್ಸವ, ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 18ನೇ ಪುಣ್ಯಾರಾಧನೆ ಹಾಗೂ ಜಗದ್ಗುರು ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಅವರ 17ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಮಹಿಳಾಗೋಷ್ಠಿಯ ಬುಡಕಟ್ಟು ಮಹಿಳೆ: ಸಬಲೀಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣದಿಂದ ಜ್ಞಾನಾರ್ಜನೆ, ಜ್ಞಾನಾರ್ಜನೆಯಿಂದ ಸಂಕಷ್ಟಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿ ಬರುವುದು. ಜಾತ್ರೆಯ ಉದ್ಧೇಶ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವುದು. ಸಮಾಜದ ಜನತೆ ಒಗ್ಗಟ್ಟಾದಾಗ ಮಾತ್ರ ಸಮಾಜ ಪ್ರಗತಿ ಸಾಧಿಸಲು ಸಾಧ್ಯ ಎಂದರು.ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ಕಾರ್ಯಕ್ರಮ ಉದ್ಘಾಟಿಸಿ, ಪ್ರಪಂಚಕ್ಕೆ ರಾಮಾಯಣದಂಥ ಆಧ್ಯಾತ್ಮಿಕ ಗ್ರಂಥ ನೀಡಿದ ಸಮಾಜ ನಮ್ಮದು. ಆದರೆ, ವಿದ್ಯಾಭ್ಯಾಸದ ಕೊರತೆ ಕಾರಣ ಆರ್ಥಿಕವಾಗಿ ಹಿಂದೆ ಉಳಿದಿದ್ದಾರೆ. ಮಠದಿಂದ ವಿವಿಧೆಡೆ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಅಗತ್ಯವಿದೆ. ವಾಲ್ಮೀಕಿ ಸಮಾಜದ ಮಕ್ಕಳು ಐಎಎಸ್, ಕೆಎಎಸ್ ಅಧಿಕಾರಿಗಳಾಗಲು ಶ್ರಮಪಡಬೇಕು ಎಂದರು.
ಕೊಪ್ಪಳದ ವಿಧಾನ ಪರಿಷತ್ತು ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಇದು ಕೇವಲ ಜಾತ್ರೆಯಲ್ಲಿ ಅರಿವಿನ ಜಾತ್ರೆ. ಸರ್ಕಾರ ಸಮಾಜಕ್ಕೆ ಶಿಕ್ಷಣ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಿದೆ. ಆದರೆ, ಅವುಗಳೆಲ್ಲ ಉಳ್ಳವರ ಪಾಲಾಗುತ್ತಿವೆ. ಅನೇಕ ಹಿಂದುಳಿದ ಹಾಸ್ಟಲ್‍ಗಳಲ್ಲಿ ಶೋಷಣೀಯ ಪರಿಸ್ಥಿತಿ ಇದೆ. ಇವೆಲ್ಲ ಸರಿಪಡಿಸಬೇಕಾದಲ್ಲಿ ಮಹಿಳೆಯರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.ಉಪನ್ಯಾಸ ನೀಡಿದ ಮೈಸೂರಿನ ಸಾಹಿತಿ ಡಾ. ಅನಸೂಯ ಕೆಂಪನಹಳ್ಳಿ, ಹಿಂದಿನ ದಿನಗಳಲ್ಲಿ ಸಮಾಜದ ಮಹಿಳೆಯರು ಮನೆಯ ಎಲ್ಲಾ ಜವಾಬ್ದಾರಿಗಳೊಂದಿಗೆ, ಅಗತ್ಯ ಬಿದ್ದಾಗ ಕತ್ತಿಯನ್ನೂ ಹಿಡಿದು ಹೋರಾಟ ನಡೆಸಿದ ಇತಿಹಾಸ ಇದೆ. ಕ್ರಮೇಣ ಅವಳು ತಾಯ್ತನಕ್ಕೆ ಒಳಗಾದಾಗ, ಗಂಡಸರು ಅಧಿಕಾರ ವಹಿಸಿಕೊಳ್ಳುವ ಮೂಲಕ ಅವರನ್ನು ನೇಪತ್ಯಕ್ಕೆ ಸರಿಸಿದ್ದಾರೆ. ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ತೋರಲಿಲ್ಲ ಎಂದರು.
ತುಳಿತಕ್ಕೆ ಒಳಗಾದ ಸಮಾಜಕ್ಕೆ ದಾರಿದೀಪವಾದವರು ಡಾ.ಅಂಬೇಡ್ಕರ್ ಹಾಗೂ ಸಾವಿತ್ರಿಬಾಯಿ ಪುಲೆ ಅಂಥವರು. ಅಂಬೇಡ್ಕರ್ ನೀಡಿದ ಮೀಸಲಾತಿ, ರಾಜಕೀಯ ಸ್ಥಾನಮಾನ, ವಿದ್ಯಾಭ್ಯಾಸಕ್ಕೆ ಆದ್ಯತೆಯಿಂದ ಸಮಾಜ ಸದೃಢವಾಗಲು ಸಹಾಯವಾಯಿತು. ಮಹಿಳೆಯರು ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ದಶಕಗಳ ಕಾಲ ಮುಖ್ಯಮಂತ್ರಿಗಳಾದರು. ಆದರೆ ಕರ್ನಾಟಕದಲ್ಲಿ ಇದುವರೆಗೆ ಯಾವುದೇ ಮಹಿಳೆ ಮುಖ್ಯಮಂತ್ರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಡಾ. ವಾಲ್ಮೀಕಿ ಪ್ರಸನ್ನಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು.
- - - ಬಾಕ್ಸ್ * ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ವಾಲ್ಮೀಕಿ ಜಾತ್ರೆ ಅಂಗವಾಗಿ ಶನಿವಾರ ಬೆಳಗ್ಗೆ ರಾಜನಹಳ್ಳಿ ಗ್ರಾಮದಿಂದ ಶ್ರೀಮಠದವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಡಾ. ವಾಲ್ಮೀಕಿ ಪ್ರಸನ್ನಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಹರಿಹರ ಕ್ಷೇತ್ರ ಶಾಸಕ ಬಿ.ಪಿ. ಹರೀಶ್ ಶ್ರೀ ಮಹರ್ಷಿ ವಾಲ್ಮೀಕಿ ಧ್ವಜಾರೋಹಣ ನೆರವೇರಿಸಿದರು. ಕೃಷಿ ವಸ್ತು ಪ್ರದರ್ಶನ ಮೇಳವನ್ನು ಮಾಜಿ ಶಾಸಕ ರಾಮಪ್ಪ, ಉದ್ಯೋಗ ಮೇಳವನ್ನು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹಾಗೂ ಮಹರ್ಷಿ ವಾಲ್ಮೀಕಿ ಜೀನವಾಧಾರಿತ ಫಲಪುಷ್ಪ ಪ್ರದರ್ಶನ ಮೇಳವನ್ನು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಹಾಗೂ ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಗುರುಪೀಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಸಂಚಾಲಕ ಶ್ರೀನಿವಾಸ ದಾಸಕರಿಯಪ್ಪ ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿ.ಎಂ. ಹೇಮಾವತಿ, ಸದಸ್ಯರು ಹಾಗೂ ಮಠದ ಭಕ್ತರು ಭಾಗವಹಿಸಿದ್ದರು. - - - -08ಎಚ್‍ಆರ್‍ಆರ್01.ಜೆಪಿಜಿ:
ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಪೀಠದಲ್ಲಿ ಶನಿವಾರ ನಡೆದ ವಾಲ್ಮೀಕಿ ಜಾತ್ರೆ-2025ರ ಮಹಿಳಾ ಗೋಷ್ಠಿ ಕಾರ್ಯಕ್ರಮವನ್ನು ಸಂಡೂರು ಶಾಸಕಿ ಅನ್ನಪೂರ್ಣ ಈ. ತುಕಾರಾಂ ಉದ್ಘಾಟಿಸಿದರು. ಡಾ. ವಾಲ್ಮೀಕಿ ಪ್ರಸನ್ನಾನಂದ ಶ್ರೀ ಇನ್ನಿತರ ಗಣ್ಯರು ಇದ್ದರು.