ಕನ್ನಡಪ್ರಭ ವಾರ್ತೆ ವಿಜಯಪುರ
ದೇಶದ ಸಮಗ್ರ ಅಭಿವೃದ್ಧಿಗೆ ಮಹಿಳೆಯರ ಸಬಲೀಕರಣ ಅತ್ಯಗತ್ಯವಾಗಿದ್ದು, ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳು ದೊರೆಯುವವರೆಗೆ ನಿಜವಾದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ರವಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯ ಹಾಗೂ ಕ್ರೀಡಾ ನಿರ್ದೇಶನಾಲಯ, ವಸತಿ ನಿಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಾರ್ಷಿಕ ದಿನಾಚರಣೆ-2026 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮಹಿಳಾ ಶಿಕ್ಷಣ ಮತ್ತು ಸಬಲೀಕರಣ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದು, ಸಮಾಜಕ್ಕೆ ಅನೇಕ ಪ್ರತಿಭಾವಂತ ಮಹಿಳೆಯರನ್ನು ನೀಡಿದೆ. ಶಿಕ್ಷಣ ಮಹಿಳೆಯರ ಬದುಕಿನಲ್ಲಿ ಆತ್ಮವಿಶ್ವಾಸ ಮೂಡಿಸುವುದರ ಜೊತೆಗೆ ಸಾಮಾಜಿಕ ಬದಲಾವಣೆಗೆ ದಾರಿಯಾಗುತ್ತದೆ. ದೇಶದಲ್ಲಿ ಇನ್ನೂ ಅನೇಕ ಮಹಿಳೆಯರು ಶಿಕ್ಷಣ ಮತ್ತು ಅವಕಾಶಗಳಿಂದ ವಂಚಿತರಾಗಿದ್ದು, ಈ ಅಸಮಾನತೆ ದೂರ ಮಾಡುವ ಜವಾಬ್ದಾರಿ ಯುವಜನತೆಯ ಮೇಲಿದೆ. ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ವಿವಿಧ ಕ್ಷೇತ್ರಗಳಲ್ಲಿ ನಾಯಕತ್ವ ವಹಿಸಬೇಕು. ಕೃತಕ ಬುದ್ಧಿಮತ್ತೆ ಸೇರಿ ಆಧುನಿಕ ತಂತ್ರಜ್ಞಾನಗಳನ್ನು ಜಾಣ್ಮೆಯಿಂದ ಬಳಸಿಕೊಳ್ಳಬೇಕು. ಜ್ಞಾನ ಮತ್ತು ಕೌಶಲ್ಯಗಳ ಮೂಲಕ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿ ಸಮಾಜದ ಪರಿವರ್ತನೆಗೆ ಕಾರಣರಾಗಬೇಕು ಎಂದು ಹೇಳಿದರು.
ಇಂಡಿಯ ಒಡಲ ಧ್ವನಿ ಮಹಿಳಾ ಒಕ್ಕೂಟದ ಸಂಸ್ಥಾಪಕಿ ಡಾ.ಭುವನೇಶ್ವರಿ ಕಾಂಬಳೆ ಮಾತನಾಡಿ, ಮಹಿಳಾ ಅಧ್ಯಯನ ವಿಭಾಗದಲ್ಲಿ ವಿದ್ಯಾಭ್ಯಾಸ ನಡೆಸಿದ ಅನುಭವ ಹಂಚಿಕೊಂಡರು. ಸಂವಿಧಾನ ಮೌಲ್ಯಗಳು, ನೈತಿಕತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ವಿಶ್ವವಿದ್ಯಾಲಯ ಕಲಿಸಿಕೊಟ್ಟಿದೆ. ಸಂಶೋಧನೆಯ ಮೂಲಕ ಗ್ರಾಮೀಣ ಮಹಿಳೆಯರ ಬದುಕಿನ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ವಿವಿಧ ಕಾರ್ಯಕ್ರಮ ರೂಪಿಸಲು ಸಾಧ್ಯವಾಯಿತು. ಶಿಕ್ಷಣ ಕೇವಲ ಉದ್ಯೋಗ ಪಡೆಯಲು ಮಾತ್ರ ಸೀಮಿತವಾಗದೆ. ಸಮಾಜಕ್ಕೆ ಕೊಡುಗೆ ನೀಡುವ ದೃಷ್ಟಿಕೋನ ಬೆಳೆಸಬೇಕು. ವಿದ್ಯಾರ್ಥಿನಿಯರು ಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಹನ್ನೆರಡನೆಯ ಶತಮಾನದಲ್ಲಿ ಪುರುಷ ಪ್ರಧಾನ ಸಮಾಜದಲ್ಲಿಯೂ ಸಕಲ ಐಶ್ವರ್ಯಗಳನ್ನು ತ್ಯಜಿಸಿ ಸಮಾನತೆಗಾಗಿ ಹೋರಾಡಿದವರು ಅಕ್ಕಮಹಾದೇವಿ. ಇಂದಿನ ವಿದ್ಯಾರ್ಥಿನಿಯರು ಅವರನ್ನು ಮಾದರಿಯಾಗಿಸಿಕೊಳ್ಳಬೇಕು. ಯಾವುದೇ ಸ್ಪರ್ಧೆಯಲ್ಲಿ ಗೆಲುವಿಗಿಂತ ಭಾಗವಹಿಸುವಿಕೆಯೇ ಮುಖ್ಯ. ವಿಶ್ವದ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ವಿದ್ಯಾರ್ಥಿನಿಯರು ಶ್ರಮಿಸಬೇಕು ಎಂದು ಹೇಳಿದರು.
ವಾರ್ಷಿಕ ದಿನಾಚರಣೆ ನಿಮಿತ್ತ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ, ಪ್ರೊ.ಜ್ಯೋತಿ ಉಪಾಧ್ಯೆ, ಡಾ.ತಹಮೀನಾ ಸುಲ್ತಾನ, ವಿಶ್ವನಾಥ ನಡಕಟ್ಟಿ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ವಿವಿಯ ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಭಾಗ್ಯಶ್ರೀ ಮತ್ತು ಶಿಭಾ ಪರಿಚಯಸಿದರು. ಜ್ಯೋತಿ.ಎಸ್ ನಿರೂಪಿಸಿದರು. ಪ್ರೊ.ಹನುಮಂತಯ್ಯ ಪೂಜಾರಿ ವಂದಿಸಿದರು.