ಕುಡುಕರ ಅಡ್ಡೆಯಾದ ಖಾಲಿ ನಿವೇಶನಗಳು!

| Published : Jul 10 2025, 12:46 AM IST

ಸಾರಾಂಶ

ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ ಖಾಲಿ ಇರುವ ನಿವೇಶನಗಳು ಕುಡುಕರ ಅಡ್ಡೆಗಳಾಗಿ ಮಾರ್ಪಟ್ಟಿದ್ದು, ಇದರಿಂದ ನಿವೇಶನಗಳ ಮಾಲೀಕರು ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಗರಸಭೆ ವ್ಯಾಪ್ತಿಯಲ್ಲಿ ಖಾಲಿ ಇರುವ ನಿವೇಶನಗಳು ಕುಡುಕರ ಅಡ್ಡೆಗಳಾಗಿ ಮಾರ್ಪಟ್ಟಿದ್ದು, ಇದರಿಂದ ನಿವೇಶನಗಳ ಮಾಲೀಕರು ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಕುಡುಕರು ಮದ್ಯದ ಬಾಟಲಿಗಳನ್ನು ಅಲ್ಲೇ ಬಿಸಾಡುತ್ತಿರುವುದರಿಂದ ಮಾಲಿನ್ಯ ಕೂಡ ಹೆಚ್ಚಾಗುತ್ತಿದೆ. ಇದನ್ನು ಯಾರು ಶುಚಿಗೊಳಿಸಬೇಕು ಎಂಬ ಪ್ರಶ್ನೆ ಕೂಡ ನಿವೇಶನ ಮಾಲೀಕರದ್ದು. ಖಾಲಿ ಬಿಟ್ಟಿರುವ ನಿವೇಶನದಲ್ಲಿ ಈ ರೀತಿ ಬೇಕಾಬಿಟ್ಟಿಯಾಗಿ ಕುಡುಕರ ಹಾವಳಿ ಹೆಚ್ಚಾಗಿರುವುದು ಕೂಡ ನಗರ ಸೌಂದರ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

ಎಲ್ಲೆಲ್ಲಿ ನಡೆಯುತ್ತಿದೆ ಹಾವಳಿ?: ರಬಕವಿಯ ಕುಳ್ಳೋಳ್ಳಿ ಲೇಔಟ್, ಘಟ್ಟಗಿ ಬಸವೇಶ್ವರ, ಜೋತಾವರ ಕನ್‌ಸ್ಟ್ರಕ್ಷನ್ಸ್‌, ಪೊಲೀಸ್ ವಸತಿಗೃಹದ ಜಾಗ, ಬನಹಟ್ಟಿ ಲಕ್ಷ್ಮೀನಗರ, ಸಾಯಿ ನಗರ, ಕಾಡಸಿದ್ಧೇಶ್ವರ ನಗರ, ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಖಾಲಿ ನಿವೇಶನ ಹಾಗೂ ನಗರಸಭೆ ಆಸ್ತಿಯ ಜಾಗಗಳಲ್ಲಿ ಮತ್ತು ರಸ್ತೆಗಳಲ್ಲಿ ಕುಡುಕರು ಪ್ರತಿನಿತ್ಯ ಮದ್ಯ ಸೇವಿಸಿ, ಖಾಲಿ ಬಾಟಲಿ ಹಾಗೂ ಪೌಚ್‌ಗಳನ್ನು ಬಿಸಾಕಿ ಹೋಗುತ್ತಿದ್ದಾರೆಂದು ನಿವೇಶನ ಮಾಲೀಕರು, ನಿವಾಸಿಗಳು ದೂರಿದ್ದಾರೆ.

ಕುಡುಕರು, ಊಟ ಮಾಡಿ ಬಿಸಾಡಿದ ಪತ್ರೋಳಿ, ನೀರಿನ ಬಾಟಲಿ, ಕುರುಕಲು ತಿಂಡಿ, ಪೌಚ್‌ಗಳನ್ನು ಬಿಸಾಡುತ್ತಿದ್ದಾರೆ. ನಿವೇಶನಗಳ ಖರೀದಿಗೆ ಬರುವ ಜನರು ಮದ್ಯದ ಬಾಟಲಿ ನೋಡಿಕೊಂಡು ಬರುವ ಪರಿಸ್ಥಿತಿ ಬಂದಿದೆ. ಸಾಕಷ್ಟು ಸಲ ಮುಜುಗರ ಅನುಭವಿಸಿದ್ದೇವೆಂದು ನಿವೇಶನ ಮಾಲೀಕ ಸುನೀಲ ಕುಳ್ಳೋಳ್ಳಿ, ಕುಮಾರ ಕದಮ್ ಅಸಹಾಯಕತೆ ವ್ಯಕ್ತಪಡಿಸಿದರು.

ವಾಯು ವಿಹಾರಿಗಳಿಗೆ ತೊಂದರೆ: ರಬಕವಿ-ಬನಹಟ್ಟಿ ಹೊರವಲಯಗಳಲ್ಲಿನ ನಿವೇಶನಗಳಿಗೆ ಪ್ರಾಧಿಕಾರ ನಿಯಮಾನುಸಾರ ರಸ್ತೆ, ಚರಂಡಿ ನಿರ್ಮಿಸಿ ಸುಂದರ ಪರಿಸರ ನಿರ್ಮಾಣವಾಗುತ್ತಿವೆ. ಅಲ್ಲಿಯೂ ಸಹಿತ ಪುಂಡ-ಪೋಕರಿಗಳ ಕಾಟದಿಂದ ಮಹಿಳೆಯರು, ವೃದ್ಧರಿಗೆ ವಾಯುವಿಹಾರ, ಸಂಚಾರಕ್ಕೆ ಬರಲು ಕಿರಿಕಿರಿಯಾಗಿದೆ. ಪೊಲೀಸ್ ಇಲಾಖೆ ಎಲ್ಲೆಂದರಲ್ಲಿ ಮದ್ಯ ಸೇವಿಸುವ ಕುಡುಕರಿಗೆ ಪಾಠ ಕಲಿಸಿ ನಾಗರಿಕರಿಗೆ ನೆರವಾಗಬೇಕೆಂದು ಜನತೆಯ ಆಗ್ರಹವಾಗಿದೆ.

ಮಾರಕವಾದ ಎಂಆರ್‌ಪಿ ಪಾರ್ಸೆಲ್ : ಎಂಆರ್‌ಪಿ ದರದ ಮದ್ಯಕ್ಕೆ ₹20-30 ಕಡಿಮೆ ಇರುವುದರಿಂದ ಹೆಚ್ಚಿನವರು ಪಾರ್ಸೆಲ್ ಪಡೆದು ಆಹಾರ ಪೊಟ್ಟಣಗಳೊಂದಿಗೆ ಖಾಲಿ ನಿವೇಶನಗಳಲ್ಲಿ ಕುಳಿತು ಮದ್ಯ ಸೇವಿರುತ್ತಿದ್ದಾರೆ. ಕತ್ತಲಾಗುತ್ತಿದ್ದಂತೆ ಖುಲ್ಲಾ ಜಾಗೆಗಳಲ್ಲಿ ಎಲ್ಲಿ ನೋಡಿದರೂ ಮೊಬೈಲ್ ಟಾರ್ಚ್‌ ಬೆಳಗಿಸಿಕೊಂಡು ಮದ್ಯ ಸೇವನೆಗೆ ಕುಳಿತುಕೊಳ್ಳುತ್ತಾರೆ.

ಅಪಘಾತಗಳಿಗೆ ಕಾರಣ : ಕುಳ್ಳೋಳ್ಳಿ ಲೇಔಟ್, ಲಕ್ಷ್ಮೀ ನಗರದಲ್ಲಿರುವ ಖಾಲಿ ನಿವೇಶನಗಳಲ್ಲಿ ರಾತ್ರಿ ಹೊತ್ತು ಮದ್ಯ ಸೇವಿಸಿ ವಾಪಸ್ ಊರೊಳಗೆ ತೆರಳುವ ಸಂದರ್ಭ ರಸ್ತೆ ಮೇಲೆ ವೇಗವಾಗಿ ಬೈಕ್ ಓಡಿಸುತ್ತ ಸಾಕಷ್ಟು ಅಪಘಾತಗಳಾಗುತ್ತಿವೆಯೆಂದು ವಕೀಲ ಗುರುಪಾದಯ್ಯಾ ಅಮ್ಮಣಗಿಮಠೆ ಬೇಸರ ಹೊರಹಾಕಿದ್ದಾರೆ.

ಲೇಔಟ್‌ಗಳ ಸುತ್ತಲಿನ ಪ್ರದೇಶಗಳ ಜನತೆ, ಮಹಿಳೆಯರು ಸಂಜೆಯಾಗುತ್ತಿದ್ದಂತೇ ಸಂಚರಿಸುವುದೇ ದುಸ್ತರವಾಗಿದೆ. ಎಲ್ಲೆಂದರಲ್ಲಿ ಕುಡುಕರ ಹಾವಳಿ ಮಿತಿಮೀರಿದ್ದು ಸಂಬಂಧಿತ ಅಧಿಕಾರಿಗಳು ನಿಯಂತ್ರಿಸಬೇಕಿದೆ.

- ಗುರುಪಾದಯ್ಯಾ ಅಮ್ಮಣಗಿಮಠ, ವಕೀಲರು, ರಬಕವಿ

ಸಂಜೆಯಾಗುತ್ತಿದ್ದಂತೆ ವಾಯು ವಿಹಾರಿಗಳಿಗೆ ಕುಡುಕರ ಹಾವಳಿಯಿಂದ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು.

-ಕಲ್ಲಪ್ಪ ಕರಲಟ್ಟಿ, ಬನಹಟ್ಟಿ