-ರೈತರ ಜೀವನಾಡಿ ಲಾಲಬಹದ್ದೂರ ಶಾಸ್ತ್ರೀ, ಬಸವಸಾಗರ ಜಲಾಶಯ ಭರ್ತಿ । ೧೮ ಟಿಎಂಸಿಗೂ ಅಧಿಕ ನೀರು ಹರಿದುಬಂದಿದ್ದು ರೈತರ ಮೊಗದಲ್ಲಿ ಹರ್ಷ

----

ಅನೀಲ ಬಿರಾದಾರ

ಕನ್ನಡಪ್ರಭ ವಾರ್ತೆ ಕೊಡೇಕಲ್

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಜೀವನಾಡಿಯಾದ ಬಸವಸಾಗರ ಜಲಾಶಯವು ಭರ್ತಿಯಾಗಿದ್ದು ರೈತಾಪಿ ವಲಯದಲ್ಲಿ ಸಂತಸವನ್ನುಂಟು ಮಾಡಿದೆ. ಅದರಲ್ಲೂ ಕಳೆದ ೨ ದಿನದಲ್ಲೇ ಜಲಾಶಯಕ್ಕೆ ೧೮ ಟಿ ಎಂಸಿಗೂ ಅಧಿಕ ನೀರು ಹರಿದುಬಂದಿದ್ದು ರೈತರ ಖುಷಿ ಹಿಮ್ಮಡಿಯಾಗಿದೆ.


ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ನೀರಿಲ್ಲದೇ ಬಣಗೆಟ್ಟಿದ್ದ ಕೃಷ್ಣೆಯ ಒಡಲಿಗೆ ವರುಣರಾಯನ ಕೃಪೆಯಿಂದಾಗಿ ಮತ್ತೇ ಜಲಾಶಯಗಳು ಭರ್ತಿಯಾಗಿದ್ದು ಆಲಮಟ್ಟಿಯ ಲಾಲಬಹದ್ದೂರ ಶಾಸ್ತ್ರೀ ಹಾಗೂ ಬಸವಸಾಗರಕ್ಕೀಗ ಜೀವಕಳೆಬಂದಂತಾಗಿದೆ.

ಮಹಾರಾಷ್ಟ್ರ ಸೇರಿ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಾಸ್ತ್ರೀ ಆಣೆಕಟ್ಟಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು ಜಲಾಶಯದ ಸಂಗ್ರಹಮಟ್ಟ ಕಾಯ್ದುಕೊಂಡು ನದಿಗೆ ನೀರು ಹರಿಸಲಾಗುತ್ತಿದೆ.

ಇದರಿಂದ ಸಹಜವಾಗಿಯೇ ಕೊಡೇಕಲ್ ಸಮೀಪದ ರಾಜ್ಯದ ಕೃಷ್ಣಾ ನದಿಯ ಅವಳಿ ಜಲಾಶಯವಾದ ಬಸವಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು ಶನಿವಾರ ಮಧ್ಯಾಹ್ನದ ಮಾಹಿತಿ ಪ್ರಕಾರ ಜಲಾಶಯಕ್ಕೆ ೭೦ ಸಾವಿರ ಒಳಹರಿವು ಹರಿದು ಬರುತ್ತಿದ್ದು, ಜಲಾಶಯದ ಪ್ರಮುಖ ೧೪ ಕ್ರಸ್ಟ್‌ ಗೇಟಗಳು ಹಾಗೂ ಎಂಪಿಸಿಎಲ್ ಮುಖಾಂತರ ೪೬ ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಗೆ ಹರಿಸಲಾಗುತ್ತಿದೆ.

ಕಳೆದ ಶುಕ್ರವಾರದವರೆಗೆ ಜಲಾಶಯದಲ್ಲಿ ಭಾನುವಾರ ಜಲಾಶಯದಲ್ಲಿ ಕೇವಲ ೧೯ ಟಿಎಂಸಿ ಮಾತ್ರ ನೀರಿನ ಸಂಗ್ರಹವಿತ್ತು. ಆದರೆ, ಮಹರಾಷ್ಟ್ರದಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಆಲಮಟ್ಟಿಯ ಲಾಲಬಹದ್ದೂರ್ ಶಾಸ್ತ್ರಿ ಆಣೆಕಟ್ಟು ಭರ್ತಿಯಾಗಿದ್ದು, ಜಲಾಶಯದಿಂದ ಬಿಡುತ್ತಿರುವ ಹೆಚ್ಚುವರಿ ನೀರಿನ ಪ್ರಮಾಣದಿಂದಾಗಿ ಕೇವಲ ೨ ದಿನದಲ್ಲೇ ಬಸವಸಾಗರ ಜಲಾಶಯಕ್ಕೆ ೧೦ ಟಿಎಂಸಿಗೂ ಅಧಿಕ ನೀರು ಹರಿದುಬಂದಿದ್ದು ೩೩ ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯವಿರುವ ಜಲಾಶಯ ಸದ್ಯ ಶೇ ೯೫ ರಷ್ಟು ಭರ್ತಿಯಾಗಿದೆ.

ರೈತಾಪಿವರ್ಗದಲ್ಲಿ ಸಂತಸ: ಜಲಾಶಯ ಭರ್ತಿಯಾಗಿರುವುದರಿಂದ ರೈತರಲ್ಲಿ ಸಂತಸವನ್ನುಂಟುಮಾಡಿದೆ ಪ್ರಸ್ತಕ ಸಾಲಿನ ಜುಲೈ ೩ನೇ ವಾರದವರೆಗೂ ಸಹಿತ ಜಲಾಶಯಕ್ಕೆ ಒಳಹರಿವು ಬಾರದೇ ಇರುವುದರಿಂದ ನೀರಾವರಿಯನ್ನೇ ನಂಬಿಕೊಂಡಿದ್ದ ರೈತಾಪಿವರ್ಗದಲ್ಲಿ ಆತಂಕವನ್ನುಂಟುಮಾಡಿತ್ತು. ಆದರೆ ಮತ್ತೇ ಇದೀಗ ಜಲಾಶಯದಲ್ಲಿ ನೀರು ಸಂಗ್ರಹಗೊಂಡಿದ್ದು ಶೀಘ್ರವೇ ಸರ್ಕಾರ ಐಸಿಸಿ ಸಭೆ ಜರುಗಿಸಿ ಕಾಲುವೆಗಳಿಗೆ ನೀರು ಹರಿಸುವಂತಾಗಲಿ ಎಂಬ ಆಶಾಭಾವನೆಯಲ್ಲಿ ರೈತರಿದ್ದ ಈದೀಧ ಐಸಿಸಿ ಸಭೆಯತ್ತ ರೈತರ ಚಿತ್ತ ನೆಟ್ಟಿದೆ.

ಪ್ರಮುಖಾಂಶಗಳು

• ಜೂಲೈ ೭ರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು.

•ಅವಳಿ ಜಲಾಶಯಗಳಿಗೆ ಇದುವರೆಗೆಒಟ್ಟು ೧೬೦.೭೨ ಟಿ.ಎಂ.ಸಿ ಒಳಹರಿವು.

•ರಾಜ್ಯದ ಆಲಮಟ್ಟಿ ಹಾಗೂ ಬಸವಸಾಗರ ಆಣೆಕಟ್ಟಿನಿಂದ ಕೃಷ್ಣಾ ನದಿಗೆ ೧೧.೮೬ ಟಿ.ಎಂ.ಸಿ ಹೊರಹರಿವು.

•ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಇಲ್ಲಿಯವರೆಗೆ ೬.೨೬ ಟಿ.ಎಂ.ಸಿ ನೀರು

•ಐಸಿಸಿ ಸಭೆಯತ್ತ ರೈತರ ಚಿತ್ತ

ನಿಗಮದಿಂದ ಎಚ್ಚರಿಕೆ : ಕಳೆದೆರೆಡು ದಿನಗಳಿಂದ ಕೃಷ್ಣಾನದಿಗೆ ನೀರು ಹರಿಸಲಾಗುತ್ತಿದ್ದು ಸದ್ಯ ಕೃಷ್ಣೆಯ ಜಲಾಶಯಕ್ಕೆ ಒಳಹರಿವು ಹೆಚ್ಚಾದಲ್ಲಿ ನದಿಗೆ ಬಿಡುವ ನೀರಿನ ಪ್ರಮಾಣವು ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಕೃಷ್ಣಾ ತೀರದ ಗ್ರಾಮಗಳ ಜನ-ಜಾನುವಾರು/ಮೀನುಗಾರರು ನದಿಗೆ ಇಳಿಯದಂತೆ ಸೂಚಿಸಲಾಗಿದೆ.

೪೯೨.೨೫೨ ಮೀ ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ ೪೯೧.೯೨ ಮೀ ತಲುಪಿದ್ದು ೩೧.೭೭ ಟಿಎಂಸಿ ನೀರಿನ ಸಂಗ್ರಹವಿದೆ, ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಜಲಾಶಯದ ಹೆಚ್ಚುವರಿ ನೀರನ್ನು ಗೇಟ್‌ಗಳಿಂದ ನದಿಗೆ ಹರಿಸಲಾಗುತ್ತಿದೆ.

ಪೋಟೋ ಶಿರ್ಷಿಕೆ೦೧: ಕೊಡೇಕಲ್ ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯದಿಂದ ಶನಿವಾರ ಜಲಾಶಯದ ಪ್ರಮುಖ ೧೪ ಕ್ರಸ್ಟ್‌ ಗೇಟ್‌ಗಳ ಮೂಲಕ ೪೬ ಸಾವಿರ ಕ್ಯುಸೆಕ್‌ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ.