ಸಾರಾಂಶ
ರಂಗಭೂಮಿಯ ಸಾಕ್ಷಿಪ್ರಜ್ಞೆಯಂತಿದ್ದ ನಾಡೋಜ ಏಣಗಿ ಬಾಳಪ್ಪನವರು ಜಗಜ್ಯೋತಿ ಬಸವೇಶ್ವರ ನಾಟಕದ ಮೂಲಕ ನಾಡಿಗೆ ಬಸವಣ್ಣನನ್ನು ಪರಿಚಯಿಸಿದರು.
ಧಾರವಾಡ:
ರಂಗಭೂಮಿಯ ಸಾಕ್ಷಿಪ್ರಜ್ಞೆಯಂತಿದ್ದ ನಾಡೋಜ ಏಣಗಿ ಬಾಳಪ್ಪನವರು ಜಗಜ್ಯೋತಿ ಬಸವೇಶ್ವರ ನಾಟಕದ ಮೂಲಕ ನಾಡಿಗೆ ಬಸವಣ್ಣನನ್ನು ಪರಿಚಯಿಸಿದರು ಎಂದು ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಡಾ. ಏಣಗಿ ಬಾಳಪ್ಪ ಸ್ಮರಣಾರ್ಥ ದತ್ತಿ ಅಂಗವಾಗಿ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಏಣಗಿ ಬಾಳಪ್ಪನವರು ತಮ್ಮ ಕಲಾವೈಭವ ನಾಟ್ಯ ಸಂಘವನ್ನು 1947ರಲ್ಲಿ ಹುಟ್ಟು ಹಾಕಿ ಜಗಜ್ಯೋತಿ ಬಸವೇಶ್ವರ ನಾಟಕವನ್ನು ಅನೇಕ ಪ್ರದರ್ಶನಗಳು ಕಾಣುವಂತೆ ಮಾಡಿದರು. ಈ ನಾಟಕ ಅವರಿಗೆ ಹೆಚ್ಚು ಆರ್ಥಿಕ ದೃಢತೆ, ಜನಮನ್ನಣೆ ತಂದುಕೊಟ್ಟಿತು ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠಕ್ಕೆ ₹ 1 ಲಕ್ಷ ಜಗಜ್ಯೋತಿ ಬಸವೇಶ್ವರ ನಾಟಕವಾಡಿ ಹಣ ಸಂಗ್ರಹಿಸಿ ನೀಡಿದರು. ವೃತ್ತಿ ರಂಗಭೂಮಿಯ ವೈಭವ ಇಂದು ಇಲ್ಲದಾಗಿದೆ. ಕೇವಲ ಕೆಲವೇ ವೃತ್ತಿ ರಂಗಭೂಮಿಯ ನಾಟಕ ಕಂಪನಿಗಳು ಉಳಿದಿವೆ. ಆದರೆ ರಂಗಭೂಮಿಗೆ ಎಂದೂ ಅಳಿವಿಲ್ಲ. ಅದಕ್ಕೆ ತನ್ನದೆ ಆದಂತಹ ಶಕ್ತಿ ಇದ್ದು ಸದಾ ಜೀವಂತವಾಗಿರುತ್ತದೆ ಎಂದು ಹೇಳಿದರು.ವೃತ್ತಿರಂಗಭೂಮಿ ಕಂಪನಿ ಹಾಗೂ ಕಲಾವಿದರ ಬಗ್ಗೆ ಅಧ್ಯಯನ ಮಾಡುವ ವಸ್ತುವೇ ಅಲ್ಲ ಎಂಬ ಕಾಲವಿತ್ತು. ಇಂದು ಅವುಗಳ ಅಧ್ಯಯನ ಮಾಡಿ ನಾಟಕ ಕಂಪನಿಗಳ ಇತಿಹಾಸವನ್ನು ಹಲವರು ಕಟ್ಟಿಕೊಟ್ಟಿರುವರು ಎಂದರು.
ಹಿರಿಯ ಕಲಾವಿದ ಡಾ. ಶಶಿಧರ ನರೇಂದ್ರ ‘ವಿಶ್ವಗುಣಾದರ್ಶ ನಾಟಕ ಮಂಡಳಿ ಕುರಿತು ಅಭಿನಂದನಾ ನುಡಿ ಹೇಳಿದರು. ರಂಗ ವಿದ್ವಾಂಸ ಡಾ. ರಾಮಕೃಷ್ಣ ಮರಾಠೆ ಗದಗದ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂ. ಪಂಚಾಕ್ಷರ ಗವಾಯಿಗಳ ನಾಟಕ ಮಂಡಳಿ ಬಗ್ಗೆ ಮಾತನಾಡಿದರು. ಡಾ. ಬಸವರಾಜ ಜಗಜಂಪಿ ಪ್ರಾಸ್ತಾವಿಕ ಮಾತನಾಡಿ, ನಾಡೋಜ ಡಾ. ಏಣಗಿ ಬಾಳಪ್ಪನವರ 80 ವರ್ಷಗಳ ಬಣ್ಣದ ಬದುಕಿನ ಕ್ಷಣಗಳ ಬಗ್ಗೆ ಪ್ರಸ್ತಾಪಿಸಿ, ಸರ್ಕಾರ ಬಾಳಪ್ಪನವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಲು ಆಗ್ರಹಿಸಿದರು. ಮಹಾದೇವ ಹೊಸೂರ, ಸತ್ಯಬೋಧ ಸವಣೂರ ಇವರಿಗೆ ‘ರಂಗ ಗೌರವ’ ನೀಡಿ ಸನ್ಮಾನಿಸಲಾಯಿತು. ಡಾ. ವಿಜಯಲಕ್ಷ್ಮಿ ಭೋಸಲೆ ಅವರನ್ನು ದತ್ತಿದಾನಿಗಳ ಪರವಾಗಿ ಸನ್ಮಾನಿಸಲಾಯಿತು.ಚಂದ್ರಕಾಂತ ಬೆಲ್ಲದ, ಮೋಹನ ಏಣಗಿ, ಸುಭಾಸ ಏಣಗಿ ಇದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಕುಂಬಿ ನಿರೂಪಿಸಿದರು. ಶಂಕರ ಹಲಗತ್ತಿ ವಂದಿಸಿದರು.